ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಇನಲ್ಲಿ ರುಪೇ ಕಾರ್ಡ್ ಬಳಕೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಯುವರಾಜನ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ
Last Updated 24 ಆಗಸ್ಟ್ 2019, 18:52 IST
ಅಕ್ಷರ ಗಾತ್ರ

ಅಬುಧಾಬಿ (ಪಿಟಿಐ): ದೇಶದ ಪ್ರಮುಖ ವ್ಯಾಪಾರಿ ಪಾಲುದಾರ ದೇಶ ಯುಎಇಗೆ ಮೂರನೇ ಬಾರಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಭಾರತದ ಬದ್ಧತೆಯನ್ನು ಪ್ರದರ್ಶಿಸಿದರು.

ಸ್ವದೇಶಿ ನಿರ್ಮಿತ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆ ’ರುಪೇಕಾರ್ಡ್’ ಅನ್ನು ಮೋದಿ ಅವರು ಅಬುಧಾಬಿಯಲ್ಲಿ ಶನಿವಾರ ಬಿಡುಗಡೆ ಮಾಡಿದರು. ಮಧ್ಯಪ್ರಾಚ್ಯ ದೇಶಗಳ ಪೈಕಿ ಯುಎಇ, ಈ ಕಾರ್ಡ್ ಚಲಾವಣೆಗೊಂಡ ಮೊದಲ ದೇಶ ಎನಿಸಿಕೊಂಡಿದೆ. ಸಿಂಗಪುರ ಮತ್ತು ಭೂತಾನ್‌ನಲ್ಲಿ ರುಪೇಕಾರ್ಡ್ ಬಳಕೆಯಲ್ಲಿದೆ.

ಬಹರೇನ್‌ನ ಶ್ರೀನಾಥಜೀ ದೇವನಸ್ಥಾನದಲ್ಲಿ ಮೋದಿ ಅವರು ಪ್ರಸಾದ ಖರೀದಿಸುವ ಮೂಲಕ ಅಧಿಕೃತವಾಗಿ ಕಾರ್ಡ್‌ ಬಳಕೆ ಶುರುವಾಗಲಿದೆ ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ. ಇದಕ್ಕೂ ಮುನ್ನ ಉಭಯ ದೇಶಗಳ ಪಾವತಿ ವೇದಿಕೆಗಳ ನಡುವೆ ಸಂಪರ್ಕ ಸಾಧಿಸುವ ಒಪ್ಪಂದಕ್ಕೆ ಮೋದಿ ಸಮ್ಮುಖದಲ್ಲಿ ಸಹಿ ಹಾಕಲಾಯಿತು.

ಲುಲು, ಪೆಟ್ರೊಕೆಮ್, ಮಿಡ್ಲ್‌ ಈಸ್ಟ್, ಎನ್‌ಎಂಸಿ ಹೆಲ್ತ್‌ಕೇರ್, ಲ್ಯಾಂಡ್‌ಮಾರ್ಕ್ ಸೇರಿದಂತೆಯುಎಇನ ಪ್ರಮುಖ 21 ವ್ಯಾಪಾರಿ ಸಂಸ್ಥೆಗಳು ರುಪೇಕಾರ್ಡ್‌ ಮೂಲಕ ಪಾವತಿ ಸ್ವೀಕರಿಸಲು ಒಪ್ಪಿಕೊಂಡಿವೆ.ಸೈಬರ್‌ ಹ್ಯಾಕರ್‌ಗಳಿಂದ ರಕ್ಷಣೆ ಪಡೆದಿರುವ ಸಾಕಷ್ಟು ಭದ್ರತೆಯ ನೆಟ್‌ವರ್ಕ್ ಹೊಂದಿರುವರುಪೇಕಾರ್ಡ್ ಅನ್ನು ಭಾರತದಲ್ಲಿ50 ಕೋಟಿ ಮಂದಿ ಬಳಸುತ್ತಿದ್ದಾರೆ. ಚೀನಾ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳ ಜತೆ ಒಪ್ಪಂದವೂ ಏರ್ಪಟ್ಟಿದೆ.

ಮಹಾತ್ಮ ಗಾಂಧೀಜಿ ಅವರ 150ನೇ ವರ್ಷದ ಜನ್ಮದಿನಾಚರಣೆ ಸ್ಮರಣಾರ್ಥ ಮೋದಿ ಹಾಗೂ ನಹ್ಯಾನ್ ಅವರು ಅಂಚೆಚೀಟಿ ಬಿಡುಗಡೆ ಮಾಡಿದರು.

ವ್ಯಾಪಾರ ಮೀರಿದ ಬಂಧ: ಮೋದಿ ಬಣ್ಣನೆ

ಭಾರತ–ಯುಎಇ ನಡುವಿನ ಮೈತ್ರಿಯು ಕೊಡು–ತೆಗೆದುಕೊಳ್ಳುವ ವ್ಯಾವಹಾರಿಕ ಸಂಬಂಧವನ್ನು ಮೀರಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಬಂಧವು ಹಿಂದೆಂದಿಗಿಂತಲೂ ಉನ್ನತ ಮಟ್ಟದಲ್ಲಿದೆ ಎಂದಿರುವ ಅವರು, ಅದು ಐದು ವರ್ಷಗಳ ಅವಧಿಯಲ್ಲಿ ಸಮಗ್ರ ಕಾರ್ಯತಂತ್ರ ಸಹಭಾಗಿತ್ವವಾಗಿ ಮಾರ್ಪಟ್ಟಿದೆ ಎಂದರು.

ಮಹತ್ವಾಕಾಂಕ್ಷೆಯ ₹350 ಲಕ್ಷ ಕೋಟಿ ಆರ್ಥಿಕತೆಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಯುಎಇ ಭಾರತದ ಮಹತ್ವದ ಪಾಲುದಾರ ದೇಶವಾಗಿದೆ ಎಂದುಯುಎಇ ಅಧಿಕೃತ ಸುದ್ದಿಸಂಸ್ಥೆ ‘ಡಬ್ಲ್ಯೂಎಎಂ’ಗೆ ನೀಡಿದ ಸಂದರ್ಶನದಲ್ಲಿ ಮೋದಿ ಹೇಳಿದ್ದಾರೆ.

‘ಯುಎಜಿ ಜೊತೆಗಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯು ನಮ್ಮ ಸರ್ಕಾರದ ವಿದೇಶಾಂಗ ನೀತಿಯ ಅತ್ಯಂತ ಆದ್ಯತೆಯ ವಿಷಯವಾಗಿದೆ’ ಎಂದು ಖಲೀಜಾ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮೋದಿ ಸ್ಪಷ್ಟಪಡಿಸಿದ್ದಾರೆ. ‘ಎರಡೂ ಕಡೆಯ ಬದ್ಧತೆ ಹಾಗೂ ಸಹಕಾರದಿಂದ ನಾವು ಐದು ವರ್ಷಗಳಲ್ಲಿ ಸಾಕಷ್ಟು ದೂರು ಸಾಗಿಬಂದಿದ್ದೇವೆ’ ಎಂದಿದ್ದಾರೆ.

ಸೋದರ ಎಂದು ಕರೆದ ಯುವರಾಜ

ಉಭಯ ದೇಶಗಳ ನಡುವಿನ ವ್ಯಾಪಾರ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಮೇಲ್ದರ್ಜೆಗೇರಿಸುವ ಮಾರ್ಗಗಳ ಕುರಿತು ಮೋದಿ ಅವರು ಅಬುಧಾಬಿ ಯುವರಾಜ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಜೊತೆ ಶನಿವಾರ ಮಾತುಕತೆ ನಡೆಸಿದರು.

‘ಸಹೋದರ ಮೋದಿ ಅವರು ತಮ್ಮ ಎರಡನೇ ಮನೆಗೆ ಬಂದಿದ್ದು ಖುಷಿ ನೀಡಿದೆ’ ಎಂದುಪ್ರಧಾನಿಯನ್ನು ಅಬುಧಾಬಿಗೆ ಸ್ವಾಗತಿಸಿದ ಬಳಿಕ ನಹ್ಯಾನ್ ಸಂತಸ ವ್ಯಕ್ತಪಡಿಸಿದರು.ಉಭಯ ನಾಯಕರ ಮಾತುಕತೆಯು ಹೊಸ ನೆಲೆಯಲ್ಲಿ ಇತ್ತು ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಬಹರೇನ್‌ಗೆ ಮೊದಲ ಭೇಟಿ

(ಮನಾಮಾ ವರದಿ): ಅದುಧಾಬಿ ಪ್ರವಾಸದ ಬಳಿಕ ಮೋದಿ ಅವರು ಶನಿವಾರ ಬಹರೇನ್‌ಗೆ ಬಂದಿಳಿದರು. ಇಲ್ಲಿನ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಜೊತೆ ಮಾತುಕತೆ ನಡೆಸಿದರು.

ಮೋದಿ ಬಹರೇನ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾಗಿದ್ದಾರೆ. ಇಲ್ಲಿನ ಪುರಾತನ ಶ್ರೀನಾಥಜಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸಕ್ಕೆ ಅವರು ಚಾಲನೆ ನೀಡಲಿದ್ದಾರೆ. ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ, ಭಾನುವಾರ ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ–7 ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಕಾಶ್ಮೀರದಲ್ಲಿ ಹೂಡಿಕೆಗೆ ಮೋದಿ ಕರೆ

ರಾಜಕೀಯ ಸ್ಥಿರತೆಯ ಕಾರಣ ಭಾರವು ಹೂಡಿಕೆಯ ಆಕರ್ಷಣೀಯ ತಾಣವಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಬಂಡವಾಳ ಹೂಡುವಂತೆ ಅನಿವಾಸಿ ಭಾರತೀಯ ಉದ್ಯಮಿಗಳಿಗೆ ಮೋದಿ ಕರೆ ನೀಡಿದರು.

ಭಾರತದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ದೊಡ್ಡ ಕೊಡುಗೆ ನೀಡಿರುವ ಅನಿವಾಸಿ ಭಾರತೀಯರಿಗೆ ಧನ್ಯವಾದ ಹೇಳಿದ ಅವರು, ಕಾಶ್ಮೀರವು ಅಭಿವೃದ್ಧಿಯ ಹೊಸ ಎಂಜಿನ್ ಆಗಿ ರೂಪುಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ಬಲ, ಉದ್ಯೋಗ ಸೃಷ್ಟಿ ಹಾಗೂ ಮೇಕ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸಲು ಸರ್ಕಾರ ಹಲವು ನೀತಿಗಳನ್ನು ರೂಪಿಸಿದೆ. ಜಮ್ಮು, ಕಾಶ್ಮೀರ, ಲಡಾಕ್‌ನಲ್ಲಿ ಹೂಡಿಕೆಯ ವಾತಾವರಣ ಸೃಷ್ಟಿಯಾಗಿದ್ದು, ಅಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ’ ಎಂದು ಹೇಳಿದರು.

‘ಕಣಿವೆ ರಾಜ್ಯದ ಅಮೂಲ್ಯ ಗಿಡಮೂಲಿಕೆ ಹಾಗೂ ಸಾವಯವ ಉತ್ಪನ್ನಗಳನ್ನು ಗುರುತಿಸಿ, ಅವುಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಿದರೆ, ಅಲ್ಲಿನ ರೈತರು ಹಾಗೂ ಜನರಿಗೆ ಅನುಕೂಲವಾಗುತ್ತದೆ’ ಎಂದರು.

ಪ್ರಧಾನಿಗೆ ಅತ್ಯುನ್ನತ ಗೌರವ

ದ್ವಿಪಕ್ಷೀಯ ಸಂಬಂಧ ಸದೃಢಗೊಳಿಸಲು ತೆಗೆದುಕೊಂಡ ಕ್ರಮಗಳನ್ನು ಶ್ಲಾಘಿಸಿ, ಮೋದಿ ಅವರನ್ನು ಯುಎಇ ದೇಶದ ಅತ್ಯುನ್ನತ ಗೌರವ ‘ಆರ್ಡರ್ ಆಫ್ ಝಾಯೇದ್’ ಪ್ರದಾನ ಮಾಡಲಾಯಿತು. ಈ ಗೌರವಕ್ಕೆ ಮೋದಿ ಅವರ ಹೆಸರನ್ನು ಏಪ್ರಿಲ್ ತಿಂಗಳಿನಲ್ಲಿ ಘೋಷಿಸಲಾಗಿತ್ತು.

ರಾಣಿ 2ನೇ ಎಲಿಜಬೆತ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಈ ಅತ್ಯುನ್ನತ ಗೌರವಕ್ಕೆ ಈಗಾಗಲೇ ಪಾತ್ರರಾಗಿದ್ದಾರೆ.

***

ಭಾರತದ ರುಪೇಕಾರ್ಡ್‌

*ಮಾಸ್ಟರ್‌ ಕಾರ್ಡ್, ವೀಸಾಕಾರ್ಡ್ ರೀತಿ ಕೆಲಸ ಮಾಡುವ ರುಪೇಕಾರ್ಡ್ ಭಾರತದ ಕೊಡುಗೆ

*ಯುಎಇನ 5000 ಎಟಿಎಂಹಾಗೂ 1.75 ಲಕ್ಷ ವ್ಯಾಪಾರಿ ಸ್ಥಳಗಳಲ್ಲಿ ಕಾರ್ಡ್‌ ಚಲಾವಣೆಗೆ ಅವಕಾಶ

*ಯುಎಇನಲ್ಲಿ ರುಪೇಕಾರ್ಡ್ ಬಳಕೆಯಿಂದ ಭಾರತೀಯ ಪ್ರವಾಸಿಗರಿಗೆ ವಿನಿಮಯ ದರ ಉಳಿತಾಯ

ಭಾರತ–ಯುಎಪಿ ವ್ಯಾಪಾರ ಬಂಧ

*ಭಾರತಕ್ಕೆಯುಎಇ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ

*ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರ ಮೊತ್ತ ₹4.2 ಲಕ್ಷ ಕೋಟಿ

*ಭಾರತಕ್ಕೆ ಕಚ್ಚಾತೈಲ ರಫ್ತು ಮಾಡುವ ನಾಲ್ಕನೇ ದೊಡ್ಡ ದೇಶ ಯುಎಇ

*ಭಾರತದಲ್ಲಿ ₹5.25 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆಯುಎಇ ಗುರಿ

*ಇಂಧನ, ಆಹಾರ, ಬಂದರು, ರಕ್ಷಣೆ ಸಲಕರಣ ಉತ್ಪಾದನೆ ಕ್ಷೇತ್ರಗದಲ್ಲಿ ಹೂಡಿಕೆ

*ಯುಎಇಗೆ ಪ್ರತಿ ವರ್ಷ ಭೇಟಿ ನೀಡುವ ಭಾರತೀಯರ ಸಂಖ್ಯೆ30 ಲಕ್ಷ

***
ಕಾಶ್ಮೀರದ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಸಿಕ್ಕರೆ, ಅಲ್ಲಿನ ಜನರಿಗೆ ಅನುಕೂಲವಾಗುತ್ತದೆ. ಅನಿವಾಸಿ ಭಾರತೀಯರು ಕಾಶ್ಮೀರದಲ್ಲಿ ಹೂಡಿಕೆ ಮಾಡಲಿ.
-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT