ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಲು ಮುಟ್ಟಿದ ಕಾರ್ಯಕರ್ತರ ಹರ್ಷೋದ್ಗಾರ

ಮತ ಎಣಿಕೆ ಕೇಂದ್ರದ ಬಳಿ ಅಭ್ಯರ್ಥಿಗಳ ಸಂಭ್ರಮಾಚರಣೆ; ಬೇಸರಗೊಂಡವರು ಹೊರನಡೆದವರು
Last Updated 16 ಮೇ 2018, 8:43 IST
ಅಕ್ಷರ ಗಾತ್ರ

ಶಿವಮೊಗ್ಗ: ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ನಗರದ ಹಲವೆಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಜಿಲ್ಲೆಯ 7 ಕ್ಷೇತ್ರಗಳಲ್ಲಿ ಬಿಜೆಪಿ 6ರಲ್ಲಿ ಜಯಗಳಿಸಿದ್ದು, ತಮ್ಮ ನಾಯಕರು ಗೆಲ್ಲುವ ಸೂಚನೆ ಕಾಣುತ್ತಿದ್ದಂತೆ ಮತ ಎಣಿಕೆ ನಡೆಯುವ ಸಹ್ಯಾದ್ರಿ ಕಾಲೇಜು ಬಳಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಬಿಜೆಪಿ ಪರ ಘೋಷಣೆಗಳನ್ನು ಕೂಗಿದರು. ಸಿಹಿ ಹಂಚಿ, ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

ಅಲ್ಲಿಂದ ಬೈಕ್‌ ರ್‍ಯಾಲಿ ನಡೆಸಿದ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಗೆ ಬಂದು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಕ್ಷದ ಬಾವುಟ ಯಡಿಯೂರಪ್ಪ, ಮೋದಿ ಅವರ ಕಟೌಟ್ ಹಿಡಿದು ಪಕ್ಷ ಮತ್ತು ನಾಯಕರ ಪರ ಘೋಷಣೆ ಕೂಗಿದರು.

ಎಲ್ಲರಿಗಿಂತ ಮೊದಲೇ ಆಗಮಿಸಿದ ಕೆಬಿಪಿ: ಕಳೆದ ಬಾರಿ ಕೆ.ಎಸ್‌.ಈಶ್ವರಪ್ಪ ವಿರುದ್ಧ ಗೆದ್ದು ಬೀಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್ ಈ ಬಾರಿಯೂ ಗೆಲ್ಲುವ ವಿಶ್ವಾಸ ಹೊಂದಿದ್ದರು. ಈ ವಿಶ್ವಾಸದಿಂದ ಮತ ಎಣಿಕೆ ಆರಂಭವಾಗುವ ಮುನ್ನವೇ ಮತ ಎಣಿಕೆ ಕೇಂದ್ರವಾದ ಸಹ್ಯಾದ್ರಿ ಕಾಲೇಜಿಗೆ ಬಂದಿದ್ದರು. ಆದರೆ ಮತ ಎಣಿಕೆ ಆರಂಭವಾಗಿ ಮೊದಲ ಸುತ್ತಿನಿಂದಲೇ ಕೆ.ಎಸ್‌.ಈಶ್ವರಪ್ಪ ಭಾರಿ ಅಂತರ ಮತಗಳ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಬೇಸರಗೊಂಡು ಅಲ್ಲಿಂದ ಹೊರ ನಡೆದರು.

ಬೆಳಿಗ್ಗೆಯಿಂದಲೇ ಜಮಾಯಿಸಿದ ಕಾರ್ಯಕರ್ತರು: ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಮತ ಎಣಿಕೆ ಕೇಂದ್ರದ ಬಳಿ ದೌಡಾಯಿಸಿದರು. ಪ್ರತಿ ಸುತ್ತಿನಲ್ಲಿ ತಮ್ಮ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಂತೆ ಕೇಕೆ ಹಾಕಿ ಸಂಭ್ರಮಿಸಿದರು.

ಗೆದ್ದ ಅಭ್ಯರ್ಥಿಗಳ ಸಂಭ್ರಮ: ಬೆಳಿಗ್ಗೆ 10 ಗಂಟೆಯಾದರೂ ಮತ ಎಣಿಕೆ ಕೇಂದ್ರದ ಕಡೆಗೆ ಸುಳಿಯದ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಲಕ್ಷಣಗಳು ಕಾಣುತ್ತಿದ್ದಂತೆ ಒಬ್ಬೊಬ್ಬರಾಗಿ ಬರತೊಡಗಿದರು. ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಸೇರಿ ವಿಜಯದ ನಗು ಬೀರಿದರು. ತೀರ್ಥಹಳ್ಳಿ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಎಲ್ಲರಿಗಿಂತ ಮೊದಲು ಬಂದು ಸಂಭ್ರಮಾಚರಣೆ ನಡೆಸಿದರು. ಆನಂತರ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಅಶೋಕ ನಾಯ್ಕ, ಕೆ.ಎಸ್‌.ಈಶ್ವರಪ್ಪ, ಕುಮಾರ ಬಂಗಾರಪ್ಪ, ಹರತಾಳು ಹಾಲಪ್ಪ ಹಾಗೂ ಕಾಂಗ್ರೆಸ್‌ ಏಕೈಕ ಅಭ್ಯರ್ಥಿ ಭದ್ರಾವತಿಯ ಬಿ.ಕೆ.ಸಂಗಮೇಶ್ವರ ಮತ ಎಣಿಕೆ ಕೇಂದ್ರಕ್ಕೆ ಬಂದರು.

ಭುಜದ ಮೇಲೆ ಹೊತ್ತು ಸಂಭ್ರಮ: ಅಂತಿಮ ಫಲಿತಾಂಶ ಘೋಷಣೆ ಆಗುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಗೆದ್ದವರನ್ನು ಭುಜದ ಮೇಲೆ ಹೊತ್ತು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT