ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಕಶ ಹಾರ್ನ್‌: ವಾಹನದ ನೋಂದಣಿ ರದ್ದು

Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಶಬ್ದ ಮಾಲಿನ್ಯ ಉಂಟುಮಾಡುವ ಕರ್ಕಶ ಹಾರ್ನ್‌ಗಳನ್ನು ಅಳವಡಿಸಿಕೊಂಡಿರುವ ವಾಹನದ ನೋಂದಣಿಯನ್ನು ಗರಿಷ್ಠ ನಾಲ್ಕು ತಿಂಗಳವರೆಗೆ ರದ್ದು ಮಾಡಲು ಚಿಂತನೆ ನಡೆಸಿದ್ದೇವೆ’ ಎಂದು ಇಲಾಖೆಯ ಆಯುಕ್ತ ಬಿ.ದಯಾನಂದ್‌ ತಿಳಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದಕ್ಕೆ ಮೋಟಾರು ವಾಹನಗಳ ಕಾಯ್ದೆ
ಯಲ್ಲಿ ಅವಕಾಶವಿದೆ. ಹೀಗಾಗಿ ಪ್ರಸ್ತಾವ ಸಿದ್ಧಪಡಿಸಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದೇವೆ. ಅದಕ್ಕೆ ಕೆಲವೇ ದಿನಗಳಲ್ಲಿ ಒಪ್ಪಿಗೆ ಸಿಗಲಿದೆ. ದೋಷಪೂರಿತ ಸೈಲೆನ್ಸರ್‌ ಅಳವಡಿಸಿಕೊಂಡಿರುವ ವಾಹನಗಳ ನೋಂದಣಿ ಪ್ರಮಾಣ ಪತ್ರ ರದ್ದುಪಡಿಸಲಾಗುತ್ತಿದೆ’ ಎಂದರು.

‘ರಾಜಧಾನಿ ಹೊರತುಪಡಿಸಿ ರಾಜ್ಯದ ಎಲ್ಲ ನಗರಗಳಲ್ಲಿ ಎಲೆಕ್ಟ್ರಿಕ್‌ ರಿಕ್ಷಾ ಹಾಗೂ ಆಟೊಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ವಾಹನಗಳ ದಟ್ಟಣೆ ನಡುವೆ ಅಂಥ ವಾಹನಗಳು ಸಂಚರಿಸುವುದು ಕಷ್ಟವೆಂಬ ಅಭಿಪ್ರಾಯವಿದೆ. ಹೀಗಾಗಿ ಸಂಚಾರ ಪೊಲೀಸರ ಜತೆ ನಿರಂತರವಾಗಿ ಸಭೆ ನಡೆಸುತ್ತಿದ್ದೇವೆ. ಅಂಥ ವಾಹನಗಳನ್ನು ಬೆಂಗಳೂರಿನಲ್ಲಿ ಓಡಿಸಲು ಪರವಾನಗಿ ನೀಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಕೆಲವೇ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದರು.

‘ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಬರುವ ಬಸ್‌ಗಳನ್ನು ನಗರದ ಹೊರವಲಯದಲ್ಲಿ ನಿಲ್ಲಿಸಲು ಸಾರಿಗೆ ನಿಗಮಗಳ ಅಧಿಕಾರಿಗಳು ಒಪ್ಪಿದ್ದಾರೆ. ಆದರೆ, ಖಾಸಗಿ ಬಸ್‌ಗಳು ಮಾತ್ರ ಮೆಜೆಸ್ಟಿಕ್‌ ವರೆಗೆ ಸಂಚರಿಸುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಹೀಗಾಗಿ, ಖಾಸಗಿ ಬಸ್‌ ಕಂಪನಿ ಪ್ರತಿನಿಧಿಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಲಿದ್ದೇವೆ.’

‘ಬೆಂಗಳೂರು ಹಾಗೂ ಧಾರವಾಡದ ಭಾರಿ ವಾಹನ ಚಾಲಕರ ತರಬೇತಿ ಸಂಸ್ಥೆಗಳಲ್ಲಿ 100 ನಿರುದ್ಯೋಗಿ ಮಹಿಳೆಯರಿಗೆ ವಸತಿಯುತ ಚಾಲನಾ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ₹18.90 ಲಕ್ಷ ಅನುದಾನ ಮೀಸಲಿಡಲಾಗಿದೆ’ ಎಂದರು.

180 ಬಸ್‌ ವಿರುದ್ಧ ಪ್ರಕರಣ: ‘ಪ್ರಯಾಣಿಕರನ್ನು ಕರೆದೊಯ್ಯಲು ಅನುಮತಿ ಪಡೆದು ಅನಧಿಕೃತವಾಗಿ ಲಗೇಜು ಸಾಗಿಸುತ್ತಿದ್ದ 180 ಖಾಸಗಿ ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. 6 ಬಸ್‌ಗಳನ್ನು ಜಪ್ತಿ ಮಾಡಿದ್ದೇವೆ. ಈ ಕಾರ್ಯಾಚರಣೆಯಿಂದ ₹4.34 ಲಕ್ಷ ತೆರಿಗೆ ಹಾಗೂ ₹35 ಸಾವಿರ ದಂಡ ಸಂಗ್ರಹಿಸಿದ್ದೇವೆ’ ಎಂದರು.

‘ಕರ್ಕಶ ಹಾರ್ನ್ ಹಾಗೂ ದೋಷಪೂರಿತ ಸೈಲೆನ್ಸರ್‌ ಪತ್ತೆಗಾಗಿ ಪ್ರತಿ ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವೇಳೆ ಸಿಕ್ಕಿಬಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT