ಸೋಮವಾರ, ಜನವರಿ 27, 2020
28 °C

ದೆಹಲಿಯಲ್ಲಿ ನಡೆದ ಉಗ್ರರ ದಾಳಿಯಲ್ಲೂ ಸುಲೇಮಾನಿ ಕೈವಾಡ: ಟ್ರಂಪ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

‘ನವದೆಹಲಿಯಿಂದ ಲಂಡನ್‌ವರೆಗೆ ಹಲವು ಭಯೋತ್ಪಾದಕ ಸಂಚುಗಳಲ್ಲಿ ಸುಲೇಮಾನಿ ಕೈವಾಡವಿತ್ತು ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಇರಾಕ್‌ನಲ್ಲಿ ಅಮೆರಿಕ ದಾಳಿಯಿಂದ ಮೃತಪಟ್ಟ ಇರಾನ್ ಸೇನಾಧಿಕಾರಿ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಹತ್ಯೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಫ್ಲೊರಿಡಾದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟ್ರಂಪ್, ‘ಸಾಮಾನ್ಯರ ಸಾವನ್ನು ಸುಲೇಮಾನಿ ಸಂಭ್ರಮಿಸುತ್ತಿದ್ದ. ಅವನ ದೌರ್ಜನ್ಯದಿಂದ ಕಣ್ಣೀರಿಟ್ಟವರನ್ನು ನಾವು ನೆನಪಿಸಿಕೊಂಡು ಗೌರವಿಸುತ್ತೇವೆ. ಅವನ ಭಯದ ಆಡಳಿತ ಅಂತ್ಯಗೊಂಡಿದ್ದನ್ನು ತಿಳಿದು ನೆಮ್ಮದಿ ಮೂಡುತ್ತಿದೆ. ಕಳೆದ 20 ವರ್ಷಗಳಿಂದ ಸುಲೇಮಾನಿ ಮಧ್ಯಪ್ರಾಚ್ಯದಲ್ಲಿ ಅಸ್ಥಿರ ಪರಿಸ್ಥಿತಿ ಉಂಟು ಮಾಡಲು ಯತ್ನಿಸುತ್ತಿದ್ದ’ ಎಂದರು.

ದೆಹಲಿಯಲ್ಲಿ ಸುಲೇಮಾನಿ ಸಂಚು

ಫೆಬ್ರುವರಿ 2012ರಲ್ಲಿ ದೆಹಲಿಯ ಇಸ್ರೇಲ್ ರಾಜತಾಂತ್ರಿಕ ಕಚೇರಿ ವಾಹನದ ಮೇಲೆ ಬಾಂಬ್ ದಾಳಿ ನಡೆದಿತ್ತು. ಈ ದಾಳಿಗೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್‌ ಕಾರ್ಪ್ಸ್‌ (ಐಆರ್‌ಜಿಸಿ) ಕಾರಣ ಎಂದು ದೆಹಲಿ ಪೊಲೀಸರು ಶಂಕಿಸಿದ್ದರು ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಅಂದು ಬ್ಯಾಂಕಾಕ್, ಥಾಯ್ಲೆಂಡ್, ತಿಬಿಲಿಸಿ ಮತ್ತು ಜಾರ್ಜಿಯಾಗಳಲ್ಲಿಯೂ ಇಸ್ರೇಲ್ ರಾಜತಾಂತ್ರಿಕ ಕಚೇರಿ ಸ್ವತ್ತುಗಳ ಮೇಲೆ ದಾಳಿ ನಡೆದಿತ್ತು. ಈ ದಾಳಿಯ ಸಂಚು ರೂಪಿಸಿದ್ದ ಖಾಸಿಂ ಸುಲೇಮಾನಿ ಎಂದು ವಿಶ್ವ ಇಂದಿಗೂ ನಂಬಿದೆ.

ಟ್ರಂಪ್ ಹೇಳಿದ್ದೇನು?

ಗುರಿ ತಪ್ಪದ ದಾಳಿಯಿಂದ ಬೀಗುತ್ತಿರುವ ಟ್ರಂಪ್, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗಲೂ ತಮ್ಮ ನಾಯಕತ್ವವನ್ನು ತಾವೇ ಹೊಗಳಿಕೊಳ್ಳುವುದರ ಜೊತೆಗೆ ದಾಳಿಯನ್ನು ಬಲವಾಗಿ ಸಮರ್ಥಿಸಿಕೊಂಡರು.

‘ಅಮೆರಿಕ ನಿನ್ನೆ ಏನು ಮಾಡಿತೋ ಅದನ್ನು ಬಹಳ ಹಿಂದೆಯೇ ಮಾಡಬಹುದಿತ್ತು. ಸಾಕಷ್ಟು ಜೀವಗಳನ್ನು ಉಳಿಸಬಹುದಿತ್ತು. ಈಚೆಗಷ್ಟೇ ಸುಲೇಮಾನಿ ಇರಾನ್‌ನಲ್ಲಿ ನಡೆದ ಪ್ರತಿಭಟನೆಗಳನ್ನು ಕ್ರೂರವಾಗಿ ಹತ್ತಿಕ್ಕಿದ್ದ. ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ತಮ್ಮದೇ ಪ್ರಜೆಗಳನ್ನು ಅಲ್ಲಿನ ಸರ್ಕಾರ ಚಿತ್ರಹಿಂಸೆ ಕೊಟ್ಟು ಕೊಂದುಹಾಕಿತ್ತು’ ಎಂದು ನುಡಿದರು.

‘ಸುಲೇಮಾನಿ ಹತ್ಯೆಯಿಂದ ಯುದ್ಧ ಶುರುವಾಗುವುದಿಲ್ಲ. ಯುದ್ಧ ತಡೆಯಬೇಕೆಂದೇ ನಿನ್ನೆ ಅಂಥ ನಿರ್ಧಾರ ತೆಗೆದುಕೊಂಡೆವು. ಇರಾನ್ ಪ್ರಜೆಗಳ ಬಗ್ಗೆ ನನಗೆ ಗೌರವವಿದೆ. ಅವರು ಅದ್ಭುತ ಪರಂಪರೆ ಮತ್ತು ಅಸಾಧಾರಣ ಶಕ್ತಿ ಹೊಂದಿದ್ದಾರೆ. ಸರ್ಕಾರದ ನಾಯಕತ್ವ ಬದಲಾವಣೆ ಆಗಬೇಕು ಎಂಬುದನ್ನೂ ನಾವು ಹೇಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅಕ್ಕಪಕ್ಕ ದೇಶಗಳಲ್ಲಿ ಹಿಂಸಾಚಾರಗಳಿಂದ ಅಸ್ಥಿರ ವಾತಾವರಣ ಉಂಟುಮಾಡುವ ಈಗಿನ ಸರ್ಕಾರ ಬದಲಾಗಲೇಬೇಕು. ಅಕ್ಕಪಕ್ಕದ ದೇಶಗಳೊಂದಿಗೆ ಶಾಂತಿಯುತ ಸಹಬಾಳ್ವೆ ಇಷ್ಟಪಡುವ ಇರಾನ್ ಪ್ರಜೆಗಳಿಗೆ ಉತ್ತಮ ಆಡಳಿತ ಕೊಡುವ ನಾಯಕರು ಬೇಕಾಗಿದ್ದಾರೆ. ಅವರಿಗೆ ದೇಶದ ಸಂಪನ್ಮೂಲವನ್ನು ರಕ್ತಹರಿಸಲು ಬಳಸುವ ಯುದ್ಧೋನ್ಮಾದಿ ಭಯೋತ್ಪಾದಕರ ಆಡಳಿತ ಬೇಕಿಲ್ಲ’ ಎಂದು ಟ್ರಂಪ್ ಅಯಾತ್‌ಉಲ್ಲಾ ಅಲಿ ಖೊಮೇನಿ ನೇತೃತ್ವದ ಆಡಳಿತವನ್ನು ಟೀಕಿಸಿದರು.

‘ಅಮೆರಿಕ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ವಿಶ್ವದ ನಂಬರ್ ಒನ್ ಭಯೋತ್ಪಾದಕನನ್ನು ಸಂಚು ನಡೆಸುತ್ತಿದ್ದಾಗಲೇ ಹುಡುಕಿ, ಹೊಸಕಿ ಹಾಕಿದ್ದೇವೆ. ನನ್ನ ನಾಯಕತ್ವದಲ್ಲಿ ಭಯೋತ್ಪಾದಕರ ಬಗ್ಗೆ ಅಮೆರಿಕದ ನೀತಿ ಬಹಳ ಸ್ಪಷ್ಟವಾಗಿದೆ. ಯಾರಾದರೂ ಸರಿ, ಯಾವುದೇ ಅಮೆರಿಕನ್ನರಿಗೆ ತೊಂದರೆ ಕೊಟ್ಟರೆ ಅಥವಾ ತೊಂದರೆ ಕೊಡಲು ಬಯಸಿದರೆ ಅಂಥವರನ್ನು ಖಂಡಿತ ಉಳಿಸುವುದಿಲ್ಲ. ನಿರ್ಮೂಲನೆ ಮಾಡಿಬಿಡುತ್ತೇವೆ’ ಎಂದು ಎಚ್ಚರಿಸಿದರು.

‘ನಮ್ಮ ಸೇನೆ, ಗುಪ್ತಚರ ಇಲಾಖೆ ಸರ್ವ ಸನ್ನದ್ಧವಾಗಿದೆ. ನೀವು ಎಲ್ಲಿ ಏನು ಮಾಡುತ್ತಿದ್ದೀರಿ ಎನ್ನುವುದು ನಮಗೆ ಗೊತ್ತಿದೆ. ಅಗತ್ಯವಿರುವ ನಿರ್ಧಾರ ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ’ ಎಂದು ಇರಾನ್‌ಗೆ ಎಚ್ಚರಿಕೆ ನೀಡಿದರು.

‘ನನ್ನ ನಾಯಕತ್ವದಲ್ಲಿಯೇ ಐಸಿಸ್ ಉಗ್ರರ ಖಿಲಾಫತ್ತನ್ನು ಅಮೆರಿಕ ಧ್ವಂಸ ಮಾಡಿತು. ಈಚೆಗಷ್ಟೇ ಐಸಿಸ್ ಉಗ್ರರ ನಾಯಕ ಅಬುಬಕರ್ ಅಲ್ ಬಾಗ್ದಾದಿಯನ್ನು ಹುಡುಕಿ ಕೊಂದೆವು. ಇಂಥ ರಕ್ಕಸರು ಸತ್ತ ನಂತರ ಜಗತ್ತು ನೆಮ್ಮದಿಯ ತಾಣವಾಗಿದೆ’ ಎಂದು ಟ್ರಂಪ್ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು