ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಕಿಯೊ ಒಲಿಂಪಿಕ್ ಪದಕಗಳಿಗೆ ಚಿನ್ನ, ಬೆಳ್ಳಿ ಎಲ್ಲಿಂದ ಬರುತ್ತೆ

ಜಗತ್ತಿಗೆ ಇ–ತ್ಯಾಜ್ಯದ ಸುಸ್ಥಿರ ವಿಲೇವಾರಿ ಪಾಠ ಹೇಳುತ್ತಿದೆ ಜಪಾನ್
Last Updated 3 ಡಿಸೆಂಬರ್ 2018, 9:37 IST
ಅಕ್ಷರ ಗಾತ್ರ

ಕಿವಿಗಡಚಿಕ್ಕುವ ಕರತಾಡನ, ಹಿನ್ನೆಲೆಯಲ್ಲಿ ಮೊಳಗುವ ರಾಷ್ಟ್ರಗೀತೆ, ಜಗತ್ತೇ ಕಣ್ಣರಳಿಸಿ ನೋಡುವ ಅಭಿಮಾನ...

–ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಎಂದರೆ ಸುಲಭದ ಮಾತಾ? ಇಡೀ ವಿಶ್ವವೇಗಮನಿಸುವ ಈ ವಿದ್ಯಮಾನ ಕ್ರೀಡಾಪಟುಗಳಿಗೆ ರಾತ್ರೋರಾತ್ರಿ ತಾರಾಮೆರುಗು ತಂದುಕೊಡುವ ಅಮೃತಗಳಿಗೆಯೂ ಹೌದು.

ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುವುದು ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ. ಈ ಸುಸಂದರ್ಭವನ್ನು ಜನರಲ್ಲಿ ಕ್ರೀಡಾಜಾಗೃತಿ ಮೂಡಿಸಲು ಎಲ್ಲ ಸರ್ಕಾರಗಳು ಬಳಸಿಕೊಳ್ಳುವುದು ವಾಡಿಕೆ. ಆದರೆ ಜಪಾನ್‌ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಜನರಲ್ಲಿ ಪರಿಸರ ಕಾಳಜಿ ಮೂಡಿಸಲು, ವಿಶ್ವದಲ್ಲಿ ಇ–ತ್ಯಾಜ್ಯ ನಿರ್ವಹಣೆಗೆ ಹೊಸ ದಾರಿ ತೋರಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದೆ.

2020ರ ಒಲಿಂಪಿಕ್ಸ್‌ನಲ್ಲಿ ಸಾಧನೆ ಮೆರೆದ ಕ್ರೀಡಾಳುಗಳನ್ನು ಅಲಂಕರಿಸುವ ಚಿನ್ನ, ಬೆಳ್ಳಿ, ಕಂಚಿನ ಪದಕಗಳಿಗೆ ಲೋಹ ಎಲ್ಲಿಂದ ಬರುತ್ತೆ ಗೊತ್ತಾ? ಈ ಕಥನದ ಸ್ವಾರಸ್ಯವಿರುವುದೇ ಈ ಪ್ರಶ್ನೆಯ ಉತ್ತರದಲ್ಲಿ.

ಮುಂದಿನ ಒಲಿಂಪಿಕ್‌ ಪದಕಗಳಿಗೆ ಬಳಕೆಯಾಗುವ ಲೋಹ ಸಿಗುವುದು ನಾವು-ನೀವು ಬಳಸುವ ಮೊಬೈಲ್‌ಗಳಿಂದ! ಟೊಕಿಯೊದ ಒಲಿಂಪಿಕ್ ಕ್ರೀಡಾಕೂಟ ಆಯೋಜನಾ ಸಮಿತಿಯು 5,000 ಪದಕಗಳನ್ನು ಇ-ತ್ಯಾಜ್ಯದಿಂದ ತೆಗೆದ ಚಿನ್ನ, ಬೆಳ್ಳಿ ಮತ್ತು ಕಂಚಿನಿಂದ ರೂಪಿಸಲು ಮುಂದಾಗಿದೆ. ಪದಕಗಳನ್ನು ರೂಪಿಸುವ ಟಂಕಸಾಲೆಯಲ್ಲಿ ಕೇವಲ ತ್ಯಾಜ್ಯದಿಂದ ಮರುಬಳಕೆಯಾದ ಪದಾರ್ಥಗಳು ಮಾತ್ರ ಇರಬೇಕು ಎನ್ನುವ ಧ್ಯೇಯ ಜಪಾನ್‌ ದೇಶದ್ದು.

ಇ-ತ್ಯಾಜ್ಯಗಳಲ್ಲಿ ವಿಪರೀತ ಎನಿಸುವಷ್ಟು ವಿಷದ ಅಂಶಗಳಿವೆ. ಇದರ ಜೊತೆಗೆ ಸಾಕಷ್ಟು ಬೆಲೆಬಾಳುವ ಲೋಹಗಳೂ ಇರುತ್ತವೆ. ಹೀಗಾಗಿಯೇ ಇ-ತ್ಯಾಜ್ಯವನ್ನು 'ನಗರ ಗಣಿ' ಎಂದು ಕರೆಯುತ್ತಾರೆ. ವಿಷವನ್ನು, ಉಪಯುಕ್ತ ಬಿಡಿಭಾಗಗಳನ್ನು ಮತ್ತು ಲೋಹವನ್ನು ಪ್ರತ್ಯೇಕಿಸಲು ಸಾಧ್ಯವಾದರೆ ಈ ’ನಗರ ಗಣಿ’ಯಲ್ಲಿರುವ ಚಿನ್ನ ಹಲವು ಹೊಸ ಉದ್ಯಮಗಳನ್ನೇ ಹುಟ್ಟುಹಾಕೀತು. ಬಯಲಿನಲ್ಲಿ ಬಿದ್ದಿರುವ ಈ ಚಿನ್ನ ತನ್ನನ್ನು ಉದ್ಧರಿಸಬಲ್ಲವರಿಗಾಗಿ ಕಾಯುತ್ತಲೇ ಇರುತ್ತದೆ.

ದೇಶ ಬೆಸೆದ ಇ–ತ್ಯಾಜ್ಯ

ಇ-ತ್ಯಾಜ್ಯದಿಂದ ಪದಕಗಳನ್ನು ರೂಪಿಸುವ ಜಪಾನ್‌ನ ಈ ಯೋಜನೆ ಆರಂಭವಾಗಿದ್ದು ಕಳೆದ ಏಪ್ರಿಲ್‌ನಲ್ಲಿ. ಒಂದು ವರ್ಷ ತುಂಬುವ ಮೊದಲೇ ಆಯೋಜಕರು 16.5 ಕೆ.ಜಿ. ಚಿನ್ನ1,800 ಕೆ.ಜಿ. ಬೆಳ್ಳಿ ಮತ್ತು 2,700 ಕೆ.ಜಿ. ಕಂಚು ಪಡೆದುಕೊಂಡಿದ್ದಾರೆ. ಕ್ರೀಡಾಕೂಟಕ್ಕೆ ಬಳಕೆಯಾಗುವ ಎಲ್ಲ ಪದಕಗಳ ತಯಾರಿಗೆ ಒಟ್ಟು 30.3 ಕೆ.ಜಿ. ಚಿನ್ನ, 4,100 ಕೆ.ಜಿ. ಬೆಳ್ಳಿ ಬೇಕಿದೆ. ಕ್ರೀಡಾಕೂಟ ಆರಂಭವಾಗುವ ಮೊದಲು ಅಷ್ಟು ಪ್ರಮಾಣದ ಲೋಹಗಳ ಸಂಗ್ರಹ ಸುಲಭ ಸಾಧ್ಯ ಎನ್ನುವ ವಿಶ್ವಾಸ ಆಯೋಜನಾ ಸಮಿತಿಯದ್ದು.

'ಇ-ತ್ಯಾಜ್ಯ ಬಳಸಿ ಪದಕಗಳನ್ನು ತಯಾರಿಸುವ ಟೊಕಿಯೊ ಒಲಿಂಪಿಕ್ ಕ್ರೀಡಾಕೂಟ ಆಯೋಜನಾ ಸಮಿತಿ ಸದಸ್ಯರ ಚಿಂತನೆಯು ದೇಶದ ಎಲ್ಲ ನಿವಾಸಿಗಳಿಗೂ ಕ್ರೀಡಾಕೂಟದ ಸಿದ್ಧತಾ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ' ಎನ್ನುತ್ತಾರೆ ಟೊಕಿಯೊ 2020 ವಕ್ತಾರ ಮಾಸಾ ಟಕಾಯ. ಈ ಯೋಜನೆಯು ಇ-ತ್ಯಾಜ್ಯ ವಿಲೇವಾರಿ ತಲೆನೋವು ಕಡಿಮೆ ಮಾಡಿರುವುದರ ಜೊತೆಗೆ ಭವಿಷ್ಯದ ಸಂಶೋಧನೆಗಳಿಗೆ ಹೊಸ ದಾರಿಗಳನ್ನೂ ತೆರೆದುಕೊಟ್ಟಿದೆ.

44.7 ದಶಲಕ್ಷ ಟನ್

ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಬಳಸುವ ನಮ್ಮ ಗೀಳು ಅಥವಾ ಈಗಿನ ಕಾಲದ ಸಮಾಜ ಸೃಷ್ಟಿಸಿರುವ ಅನಿವಾರ್ಯತೆವ್ಯಾಪಕ ಪ್ರಮಾಣದ ಇ–ತ್ಯಾಜ್ಯ ಉತ್ಪತ್ತಿಗೂ ಕಾರಣವಾಗಿದೆ. ನಿರುಪಯುಕ್ತ ಗ್ಯಾಜೆಟ್‌ಗಳಿಂದ ನಮ್ಮ ಸಮಾಜ ಮುಳುಗಿ ಹೋಗುವಂತೆ ಆಗಿದೆ. 2016ರಲ್ಲಿ ಜಗತ್ತು ಒಟ್ಟು 44.7 ದಶಲಕ್ಷ ಟನ್‌ಗಳನಷ್ಟು ಇ-ತ್ಯಾಜ್ಯವನ್ನು ಉತ್ಪಾದಿಸಿತ್ತು ಎಂದು ವಿಶ್ವಸಂಸ್ಥೆಯ ದತ್ತಾಂಶಗಳು ಹೇಳುತ್ತವೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ 4ರಷ್ಟು ಹೆಚ್ಚುತ್ತಿದೆ.

ಈಗ 2016 ಲೆಕ್ಕಾಚಾರಕ್ಕೆ ಬರೋಣ. 44.7 ದಶಲಕ್ಷ ಟನ್‌ನಷ್ಟಿರುವ ತ್ಯಾಜ್ಯವನ್ನು 40 ಟನ್ ಭಾರ ಹೊರುವ ಸಾಮರ್ಥ್ಯದ 18 ಚಕ್ರಗಳ ಟ್ರಕ್‌ಗಳಿಗೆ ತುಂಬಲು ಸಾಧ್ಯವಾದರೆ ನಮಗೆ 10 ಲಕ್ಷಕ್ಕೂ ಹೆಚ್ಚು ಟ್ರಕ್‌ಗಳು ಬೇಕಾಗುತ್ತವೆ. ಇಷ್ಟು ಟ್ರಕ್‌ಗಳನ್ನು ಒಂದರ ಹಿಂದೆ ಒಂದರಂತೆ ಸಾಲಾಗಿ ನಿಲ್ಲಿಸುವುದು ಸಾಧ್ಯವಾದರೆ, ಈ ಸಾಲಿನ ಉದ್ದ ಪ್ಯಾರೀಸ್‌ನಿಂದ ಸಿಂಗಪುರವರೆಗೆ ಇರುತ್ತದೆ. 2021ರವೇಳೆಗೆ ವಿಶ್ವದ ಇ-ತ್ಯಾಜ್ಯ ಉತ್ಪಾದನೆ 52 ದಶಲಕ್ಷ ಟನ್‌ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಅಂದರೆ ಊಹಿಸಿ ಈ ಇ–ತ್ಯಾಜ್ಯದ ವಿಶ್ವರೂಪ ಎಷ್ಟು ಅಗಾಧ!

ಅದು ಜಪಾನ್ ಆಗಿರಲಿ ಅಥವಾ ಜಗತ್ತಿನ ಬೇರೆ ಯಾವುದೇ ದೇಶವೇ ಆಗಿರಲಿ. ಉತ್ಪತ್ತಿಯಾದ ಇ-ತ್ಯಾಜ್ಯದ ದೊಡ್ಡಪಾಲು ಸಂಗ್ರಹ ಕೇಂದ್ರಗಳನ್ನು ತಲುಪುವುದೇ ಇಲ್ಲ. ಮರುಬಳಕೆಯಾಗುವ ಇ-ತ್ಯಾಜ್ಯದ ಪ್ರಮಾಣ ಕೇವಲ ಶೇ 20 ಎಂದು ವಿಶ್ವಸಂಸ್ಥೆಯ ವರದಿಯೊಂದು ಅಂದಾಜು ಮಾಡುತ್ತದೆ. ಸಂಸ್ಕರಣಾ ಕೇಂದ್ರಗಳಿಗೆ ಬಾರದ ಇ–ತ್ಯಾಜ್ಯಗಳು ಭೂಮಿಯನ್ನು ಸೇರುತ್ತವೆ. ಕೆಲವೊಮ್ಮೆ ಶ್ರೀಮಂತ ದೇಶಗಳ ಇ–ತ್ಯಾಜ್ಯ ಬಡದೇಶಗಳಿಗೆ ಇಳಿದು ಬರುತ್ತವೆ. ಇದಕ್ಕೆ ‘ಪುನರ್‌ಬಳಕೆಯ ಸಾಧ್ಯತೆ’ ಎನ್ನುವ ಚಂದದ ಹೆಸರು. ಈ ಎರಡೂ ಪ್ರಕ್ರಿಯೆಗೆ ಒಳಪಡದ ನಿರುಪಯುಕ್ತ ಎಲೆಕ್ಟ್ರಾನಿಕ್ ಉಪಕರಣಗಳು ನಮ್ಮ ಮನೆಯ ಕಪಾಟುಗಳಲ್ಲಿಯೇ ದೂಳು ತಿನ್ನುತ್ತಾ ದಿನ ಎಣಿಸುತ್ತಿರುತ್ತವೆ.

ಮರುಬಳಕೆ ಲಾಭದಾಯಕ

ಇ–ತ್ಯಾಜ್ಯದ ಸಂಸ್ಕರಣೆಯನ್ನು ನಿರ್ಲಕ್ಷಿಸುವುದು ಎರಡು ರೀತಿಯಿಂದ ಮೂರ್ಖತನವಾಗುತ್ತದೆ. ಇ-ತ್ಯಾಜ್ಯದಲ್ಲಿರುವ ವಿಷದ ಅಂಶಗಳಿಂದ ಭೂಮಿ ಮತ್ತು ನೀರು ಮಲಿನವಾಗುತ್ತದೆ. ಹೀಗಾಗಿ ಪಾರಿಸರಿಕವಾಗಿ ಇ–ತ್ಯಾಜ್ಯ ನಿರ್ಲಕ್ಷಿಸುವುದು ಮೂರ್ಖತನ. ಮತ್ತೊಂದು ರೀತಿಯಲ್ಲಿ 'ನಗರ ಗಣಿ'ಯಿಂದ ಅಮೂಲ್ಯ ಲೋಹಗಳನ್ನು ಪಡೆದುಕೊಳ್ಳುವ ವಿಚಾರದಲ್ಲಿ ಅವಕಾಶಗಳನ್ನು ತಪ್ಪಿಸಿಕೊಳ್ಳುವುದು ಆರ್ಥಿಕ ಮೂರ್ಖತನ.

'ಸಂಪನ್ಮೂಲಗಳ ಕೊರತೆ ಅನುಭವಿಸುತ್ತಿರುವ ಜಪಾನ್‌ಗೆ ಅಗತ್ಯ ಪ್ರಮಾಣದ ಅಮೂಲ್ಯ ಲೋಹಗಳನ್ನು ಸಂಗ್ರಹಿಸಲು ಇ-ತ್ಯಾಜ್ಯಗಳ ಸಂಸ್ಕರಣೆ, ಮರುಬಳಕೆ ಹೊರತುಪಡಿಸಿ ಬೇರೆ ಮಾರ್ಗವೇ ಇರಲಿಲ್ಲ' ಎಂದು ಅಭಿಪ್ರಾಯಪಡುತ್ತಾರೆಇ-ತ್ಯಾಜ್ಯ ವಿಲೇವಾರಿ ತಜ್ಞರಾಗಿರುವ ರೂಡರ್ ಕೌಹರ್. ಇವು ಇ-ತ್ಯಾಜ್ಯ ಕುರಿತು ವಿಶ್ವಸಂಸ್ಥೆ ಪ್ರಕಟಿಸಿರುವ ವರದಿಯ ಸಹಲೇಖಕರೂ ಹೌದು. 'ನಗರ ಗಣಿಯಲ್ಲಿ ಸಂಗ್ರಹವಾದ ಒಂದು ಟನ್‌ನಷ್ಟು ವಸ್ತುಗಳು ಪ್ರಾಕೃತಿಕ ಗಣಿಯಲ್ಲಿ ಸಂಗ್ರಹಿಸಿದ ಒಂದು ಟನ್ ಮಣ್ಣಿಗೆ ಹೋಲಿಸಿದರೆ ನೂರುಪಟ್ಟು ಹೆಚ್ಚು ಪ್ರಯೋಜನಕಾರಿ' ಎನ್ನುತ್ತಾರೆ ಬ್ರಿಟಿಷ್ ಕೊಲಂಬಿಯಾ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮಾರಿಯಾ ಹೊಲುಸ್ಕೊ.

'ಚಿನ್ನದ ಗಣಿಯಲ್ಲಿ ಸಂಸ್ಕರಣೆಗಾಗಿ ಸಂಗ್ರಹಿಸಿದ ಒಂದು ಟನ್ ಮಣ್ಣಿನಿಂದ ಮೂರು ಅಥವಾ ನಾಲ್ಕು ಗ್ರಾಂ ಚಿನ್ನ ಸಿಗಬಹುದು. ಆದರೆ ಒಂದು ಟನ್ ಮೊಬೈಲ್ ಫೋನ್‌ನಿಂದ 350 ಕೆ.ಜಿ. ಚಿನ್ನ ಸಿಗುತ್ತದೆ. ಇದರಿಂದ ಇ-ತ್ಯಾಜ್ಯ ವಿಲೇವಾರಿಯ ತಲೆಬಿಸಿಯೊಂದೇ ಕಡಿಮೆಯಾದಂತೆ ಅಲ್ಲ. ನಮ್ಮ ಚಿನ್ನದ ಗಣಿಗಳ ಮೇಲಿರುವ ಒತ್ತಡವೂ ಸಾಕಷ್ಟು ಕಡಿಮೆಯಾದಂತೆ ಆಗುತ್ತದೆ. ವಿಶ್ವದ ಎಲ್ಲ ರಾಷ್ಟ್ರಗಳು ಈ ಕುರಿತು ಚಿಂತಿಸಿ, ವೈಜ್ಞಾನಿಕ ವಿಲೇವಾರಿ ಕ್ರಮಗಳನ್ನು ಅನುಸರಿಸಿದರೆ ವಿಶ್ವದ ಚಿನ್ನದ ಬೇಡಿಕೆಯ ಶೇ 30ರಷ್ಟನ್ನು ಇ-ತ್ಯಾಜ್ಯವೇ ಪೂರೈಸಬಲ್ಲದು. ಅಂಕಿಅಂಶಗಳನ್ನು ವಿಶ್ಲೇಷಿಸಿ ನೋಡಿ, ಇ-ತ್ಯಾಜ್ಯ ವಿಲೇವಾರಿಯಲ್ಲಿ ನಿಮಗೆ ಉದ್ಯಮದ ಸಾಧ್ಯತೆ ನಿಚ್ಚಳವಾಗಿ ಗೋಚರಿಸುತ್ತದೆ ಎನ್ನುತ್ತಾರೆ ಅರ್ಬನ್ ಮೈನಿಂಗ್ ಇನ್ನೊವೇಶನ್ ಸೆಂಟರ್‌ನ (ನಗರ ಗಣಿ ಆವಿಷ್ಕಾರ ಕೇಂದ್ರ) ಸಹ ಸ್ಥಾಪಕರೂ ಆಗಿರುವ ಹೊಲುಸ್ಕೊ.

ವಿಶಿಷ್ಟ ಕ್ರೀಡಾಕೂಟ

ಒಲಿಂಪಿಕ್ ಪದಕಗಳು ಮರುತ್ಯಾಜ್ಯದ ವಸ್ತುಗಳಿಂದ ಸಿದ್ಧವಾಗಿರುವುದು ಇದೇ ಮೊದಲ ಬಾರಿ ಅಲ್ಲ. 2016 ರಿಯೊ ಒಲಿಂಪಿಕ್‌ನಲ್ಲಿ ಪ್ರದಾನ ಮಾಡಿದ ಬೆಳ್ಳಿ ಪದಕಗಳಿಗೆ ಬಳಕೆಯಾದ ಶೇ 30ರಷ್ಟು ಬೆಳ್ಳಿಯನ್ನು ಹಳೆಯ (ಒಡೆದ) ಕನ್ನಡಿಗಳು, ತ್ಯಾಜ್ಯ ಬೆಸುಗೆಗಳು (ಸಾಲ್ಡರ್‌), ಕುಲಮೆ ತ್ಯಾಜ್ಯ ಮತ್ತು ಎಕ್ಸ್‌ರೇ ಪ್ಲೇಟ್‌ಗಳಿಂದ ಸಂಗ್ರಹಿಸಲಾಗಿತ್ತು. 2010ರ ವಾನ್‌ಕೊವರ್ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ರೂಪಿಸಲು ಬಳಕೆಯಾದ ಲೋಹಗಳಲ್ಲಿ ಶೇ 1.5ರಷ್ಟು ಪ್ರಮಾಣ ಬೆಲ್ಜಿಯಂನಲ್ಲಿ 'ನಗರ ಗಣಿ' ಮೂಲಕ ಸಂಗ್ರಹಿಸಿದ ತ್ಯಾಜ್ಯದಲ್ಲಿದ್ದ, ಮರುಬಳಕೆಯಾದ ಲೋಹಗಳಿದ್ದವು.

ಹಿಂದಿನ ಒಲಿಂಪಿಕ್‌ಗಳಿಗೆ ಹೋಲಿಸಿದರೆ, ಟೊಕಿಯೊ 2020 ಒಲಿಂಪಿಕ್ ವಿಶಿಷ್ಟ ಎನಿಸುತ್ತೆ. ಒಲಿಂಪಿಕ್‌ನಲ್ಲಿ ವಿಜೇತರಿಗೆ ನೀಡುವ ಎಲ್ಲ ಪದಕಗಳಿಗೂ ಸಂಪೂರ್ಣವಾಗಿ ಜಪಾನ್ ದೇಶದ ಮನೆಗಳಿಂದ ಸಂಗ್ರಹಿಸಿದ ಇ-ತ್ಯಾಜ್ಯ ಸಂಸ್ಕರಣೆಯಿಂದ ಸಿಕ್ಕ ಲೋಹವನ್ನೇ ಬಳಸಲು ಆಯೋಜಕರು ತೀರ್ಮಾನಿಸಿದ್ದಾರೆ. ಜಪಾನ್‌ನ ಟೆಲಿಕಾಂ ಅಂಗಡಿಗಳು ಜೂನ್‌ ತಿಂಗಳ ಹೊತ್ತಿಗೆ ಸಾರ್ವಜನಿಕರು ದಾನವಾಗಿ ನೀಡಿದ 4.32 ದಶಲಕ್ಷ ಬಳಕೆಯಾದ ಮೊಬೈಲ್‌ಗಳನ್ನು ಸಂಗ್ರಹಿಸಿದ್ದವು. ನಗರಾಡಳಿತ ಸಂಸ್ಥೆಗಳು 34,000 ಟನ್‌ಗಳಷ್ಟು ಸಣ್ಣ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸಂಗ್ರಹಿಸಿದ್ದವು. ಈ ಬಾರಿಯ ಒಲಿಂಪಿಕ್ ಜಪಾನ್ ಮಟ್ಟಿಗೆ ಸಂಚಲನ ಮೂಡಿಸಿರುವುದಂತೂ ನಿಜ.

ಹಳೆಯ ಫೋನ್‌ಗಳ ಸ್ವೀಕಾರ ಕೇಂದ್ರಕ್ಕೆ ಬಂದಿದ್ದ ಮಹಿಳೆಯೊಬ್ಬರು 'ನಮ್ಮ ಮನೆಯಲ್ಲಿದ್ದ ಐದು ಹಳೆಯ ಫೋನ್‌ಗಳನ್ನು ನಾನು ತಂದಿದ್ದೇನೆ' ಎಂದು ಹೇಳಿದ್ದರು. ಈ ಹೇಳಿಕೆಯು ಜಪಾನ್‌ ವಿದೇಶಾಂಗ ವ್ಯವಹಾರಗಳ ಖಾತೆ ನಿರ್ಮಿಸಿರುವ ವಿಡಿಯೊದಲ್ಲಿ ದಾಖಲಾಗಿದೆ. 'ಇಂಥದ್ದೊಂದು ಮಹತ್ವದ ಕ್ರೀಡಾಕೂಟದಲ್ಲಿ ಭಾಗೀದಾರಳಾಗಲು ನನಗೊಂದು ಅವಕಾಶ ಸಿಕ್ಕಿದಂತೆ ಆಗಿದೆ. ನನಗೆ ಇದು ಖುಷಿಯ ಸಂಗತಿ' ಎಂದೂ ಅವರು ಖುಷಿಯಾಗಿ ಮಾತನಾಡಿದ್ದಾರೆ. ಇ–ತ್ಯಾಜ್ಯ ಸಂಸ್ಕರಣೆಯಿಂದ ದೊರೆತ ಲೋಹಗಳಿಂದಲೇ ಪದಕ ರೂಪಿಸುವ ಒಲಿಂಪಿಕ್ ಸಮಿತಿಯ ದೇಶದಲ್ಲಿ ಒಲಿಂಪಿಕ್ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಿದೆ.

ಒಂದು ಗ್ರಾಂ ಚಿನ್ನ ಪಡೆಯಲು ಸುಮಾರು 40 ಮೊಬೈಲ್ ಫೋನ್‌ಗಳನ್ನು ಸಂಸ್ಕರಿಸಬೇಕಾಗುತ್ತದೆ. ಒಲಿಂಪಿಕ್ ಸಮಿತಿಯು ವಿಜೇತರಿಗೆ ನೀಡುವ ಚಿನ್ನದ ಪದಕಗಳಲ್ಲಿ 6 ಗ್ರಾಂ ಚಿನ್ನ ಇರಬೇಕು ಎಂಬ ನಿಯಮವಿದೆ. ಅಂದರೆ ಒಂದು ಚಿನ್ನದ ಪದಕ ತಯಾರಾಗಲು 240 ನಿರುಪಯುಕ್ತ ಮೊಬೈಲ್‌ ಫೋನ್‌ಗಳನ್ನು ಜಪಾನ್ ಸಂಸ್ಕರಿಸುತ್ತದೆ ಎಂದು ಅರ್ಥ. ಇ–ತ್ಯಾಜ್ಯದಿಂದ ಚಿನ್ನ ಪಡೆಯುವ ಜಪಾನಿಯರ ವಿಶಿಷ್ಟ ಪ್ರಯತ್ನ ಇದೀಗ ವಿಶ್ವದ ಗಮನ ಸೆಳೆದಿದೆ. ಈ ಹಿಂದೆ ಒಲಿಂಪಿಕ್ ಪದಕ ಗೆದ್ದಿದ್ದ ಹಲವರು ತಮ್ಮ ಗ್ಯಾಜೆಟ್‌ಗಳನ್ನು ಜಪಾನ್ ಒಲಿಂಪಿಕ್ ಸಮಿತಿಗೆ ನೀಡಲು ಮುಂದಾಗಿದ್ದಾರೆ. ಬ್ರಿಟನ್‌ ಮಾಜಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಬೋರಿಸ್ ಜಾನ್ಸನ್ 2017ರಲ್ಲಿ ಟೊಕಿಯೊಗೆ ಭೇಟಿ ನೀಡಿದ್ದಾಗ ತಮ್ಮ ಹಳೆಯ ಗ್ಯಾಜೆಟ್‌ಗಳನ್ನು ಕೊಟ್ಟಿದ್ದರು.

ಈ ಎಲ್ಲದರ ನಡುವೆಯೂ ಪದಕ ಯೋಜನೆಯ ಯಶಸ್ಸು ಕೇವಲ ಪ್ರಾತಿನಿಧಕ ಮಾತ್ರ. ಇದು ಸುಸ್ಥಿರ ಪರಿಸರ ರೂಪಿಸುವಲ್ಲಿ ವಿಶ್ವ ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳ ಪೈಕಿ ಒಂದನ್ನು ಮಾತ್ರ ಪರಿಹರಿಸಬಲ್ಲದು.

ಇದು ಏನೇನೂ ಸಾಲದು

ಜಪಾನ್‌ ಈವರೆಗೆ ಸಂಗ್ರಹಿಸಿರುವ ಎಲೆಕ್ಟ್ರಾನಿಕ್ ಉಪಕರಣಗಳ ಪ್ರಮಾಣವು ಜಪಾನ್‌ನ ವಾರ್ಷಿಕ ಇ-ತ್ಯಾಜ್ಯ ಉತ್ಪತ್ತಿಯ ಶೇ 3 ಮಾತ್ರ. ಜಪಾನ್‌ನಲ್ಲಿ ಪ್ರತಿವರ್ಷ ಉತ್ಪತ್ತಿಯಾಗುವ ಇ-ತ್ಯಾಜ್ಯದ ಪ್ರಮಾಣದ ಸುಮಾರು 20 ಲಕ್ಷ ಟನ್ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಇ–ತ್ಯಾಜ್ಯ ಸಂಸ್ಕರಣೆಯ ಸಂಭ್ರಮದಲ್ಲಿ ಲೋಹವಲ್ಲದ ಭಾಗ ಏನಾಗುತ್ತೆ ಎಂಬ ಪ್ರಶ್ನೆಯನ್ನು ನಾವು ಮರೆಯುವಂತಿಲ್ಲ. ಚಿನ್ನ, ಪಲ್ಲಾಡಿಯಂ ಅಥವಾ ಇತರ ಅಮೂಲ್ಯ ಲೋಹಗಳಿಗೆ ಹೊರತಾದ ಅನೇಕ ಭಾಗಗಳು ಪ್ರತಿ ಉಪಕರಣದಲ್ಲಿಯೂ ಇದ್ದೇ ಇರುತ್ತವೆ. ‘ನಾವು ಕೇವಲ ಲೋಹವನ್ನು ತೆಗೆದುಕೊಂಡು, ಉಳಿದ ಭಾಗವನ್ನು ಭೂಮಿಗೆ ಬಿಸಾಡಿದರೆ ಏನೇನೂ ಪ್ರಯೋಜನವಿಲ್ಲ. ಅದರಿಂದ ಮಾಲಿನ್ಯದ ಪ್ರಮಾಣ ಒಂದಿಷ್ಟೂ ಕಡಿಮೆಯಾಗದು’ ಎನ್ನುತ್ತಾರೆ ಹೊಲಸ್ಕೊ. ನಿರುಪಯುಕ್ತ ಸ್ಮಾರ್ಟ್‌ಫೋನ್‌ಗಳ ಸುಸ್ಥಿರ ವಿಲೇವಾರಿಗಾಗಿ ಅವರು ಮಾರ್ಗಗಳನ್ನು ಶೋಧಿಸುತ್ತಿದ್ದಾರೆ.

ಟೊಕಿಯೊ 2020 ಆಯೋಜನಾ ಸಮಿತಿಯು ತಾನು ಒಪ್ಪಂದ ಮಾಡಿಕೊಂಡಿರುವ ಇ-ತ್ಯಾಜ್ಯ ಸಂಸ್ಕರಣಾ ಕಂಪನಿಗಳಿಂದ ಕೇವಲ ಚಿನ್ನ, ಬೆಳ್ಳಿ ಮತ್ತು ಕಂಚು (ತಾಮ್ರ ಮತ್ತು ಸತು) ಮಾತ್ರ ಪಡೆದುಕೊಳ್ಳುತ್ತಿದೆ. ಲೋಹವಲ್ಲದ ಭಾಗದ ಭವಿಷ್ಯ ಏನು ಎಂಬ ಬಗ್ಗೆ ಯಾರಲ್ಲಿಯೂ ಸ್ಪಷ್ಟತೆ ಇಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಕ್ರೀಡಾಕೂಟದ ವಕ್ತಾರರು, ‘ಕೆಲ ಕಂಪನಿಗಳು ಬಾಕಿ ಭಾಗಗಳನ್ನು ಸಾಮಾನ್ಯ ಸಂಸ್ಕರಣಾ ವಿಧಾನದಿಂದ ಸಂಸ್ಕರಿಸುತ್ತಿರುವ ಮಾಹಿತಿ ಇದೆ. ಆದರೆ ಅದರ ಬಗ್ಗೆ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ’ ಎಂದು ಹೇಳುತ್ತಾರೆ.

ಬಳಸುವ ವಿಧಾನ ಬದಲಾಗಲಿ

ಎಲೆಕ್ಟ್ರಾನಿಕ್ ಉಪಕರಣಗಳು ನಮ್ಮ ಬದುಕನ್ನು ವ್ಯಾಪಿಸಿಕೊಂಡಿವೆ. ನಮ್ಮ ಸಮಾಜದಲ್ಲಿ ಮುಂದೇನು ಅಗಬಹುದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಕೆಲವೇ ದಶಕಗಳಲ್ಲಿ ಜಾಗತಿಕ ಇ-ತ್ಯಾಜ್ಯದ ಪ್ರಮಾಣ ದುಪ್ಪಟ್ಟು, ಅಂದರೆ 80 ದಶಲಕ್ಷ ಟನ್‌ ಮುಟ್ಟಲಿದೆ ಎಂದು ಅಂದಾಜಿಸುತ್ತಾರೆ ಕೌಶರ್.

’ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ನಾವು ಅರ್ಥ ಮಾಡಿಕೊಂಡಿರುವ ವಿಧಾನವೂ ಬದಲಾಗಬೇಕಿದೆ. ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿಗೆ ಕಡಿವಾಣ ಹಾಕಿಕೊಳ್ಳುವುದು ಇ-ತ್ಯಾಜ್ಯ ಉತ್ಪತ್ತಿ ನಿಯಂತ್ರಣಕ್ಕೆ ಇರುವ ಅತ್ಯುತ್ತಮ ವಿಧಾನ’ ಎನ್ನುತ್ತಾರೆ ಅವರು. ‘ಫೋನ್ ಖರೀದಿಸುವ ಬದಲು, ಅದರ ಸೇವೆಗಳನ್ನು ಖರೀದಿಸುವುದರ ಬಗ್ಗೆ ನಾವೇಕೆ ಯೋಚಿಸುವುದಿಲ್ಲ’ ಎಂದು ಅವರು ಪ್ರಶ್ನಿಸುತ್ತಾರೆ.

ಇದರರ್ಥ ನೀವು ಎಂದಿಗೂ ಉಪಕರಣಗಳ ಒಡೆಯರಾಗುವುದಿಲ್ಲ. ಬಾಡಿಗೆಗೆ ಉಪಕರಣಗಳ ಸೇವೆಯನ್ನು ಪಡೆದುಕೊಳ್ಳುತ್ತಿರುತ್ತೀರಿ ಅಷ್ಟೇ. ಆ್ಯಪಲ್ ಅಥವಾ ಸ್ಯಾಮ್‌ಸಂಗ್‌ ಕಂಪನಿಗಳು ಗ್ರಾಹಕರಿಗೆ ‘ಮೊಬೈಲ್ ಕಮ್ಯುನಿಕೇಷನ್ ಸೇವೆ’ ಅಥವಾ ‘ಎಲೆಕ್ಟ್ರಾನಿಕ್ ಹೋಂ ಡಿಶ್ ವಾಷಿಂಗ್’ ಸೇವೆಗಳನ್ನು ಕೊಡಬಹುದು. ಉಪಕರಣಗಳ ಮಾಲೀಕತ್ವ ಪಡೆಯದ ಗ್ರಾಹಕರು ಈ ಸೇವೆಗಳಿಗೆ ಮಾತ್ರ ಶುಲ್ಕ ತೆರುತ್ತಾರೆ.

ಒಂದು ಉಪಕರಣ ಹಾಳಾದರೆ ಕಂಪನಿಗಳು ಗ್ರಾಹಕರಿಗೆ ಬೇರೊಂದು ಉಪಕರಣ ಒದಗಿಸುತ್ತವೆ. ಹಾಳಾದ ಉಪಕರಣವನ್ನು ಕೊಂಡೊಯ್ದು ತಮ್ಮ ಕಾರ್ಖಾನೆ ಅಥವಾ ಸೇವಾಕೇಂದ್ರಗಳಲ್ಲಿ ರಿಪೇರಿ ಮಾಡಿ ಬೇರೊಬ್ಬರಿಗೆ ಕೊಡುತ್ತವೆ. ಗ್ಯಾಜೆಟ್‌ಗಳ ಅಯಸ್ಸು ಮುಗಿದ ನಂತರ ಅವುಗಳನ್ನು ತಮ್ಮ ಕಾರ್ಖಾನೆಗಳಲ್ಲಿ ಬಿಚ್ಚಿ ಮರುಬಳಕೆ ಸಾಧ್ಯವಿರುವ ಬಿಡಿಭಾಗಗಳನ್ನು ಬೇರೊಂದು ಉಪಕರಣಕ್ಕೆ ಜೋಡಿಸುತ್ತವೆ. ಉಳಿದ ಭಾಗಗಳನ್ನು ಯೋಗ್ಯರೀತಿಯಲ್ಲಿ ವಿಲೇವಾರಿ ಮಾಡುತ್ತವೆ.

ಇ–ತ್ಯಾಜ್ಯ ವಿಲೇವಾರಿ ವಿಷಯದಲ್ಲಿ ನಾವು ಹತ್ತಾರು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಿದೆ. 80 ದಶಲಕ್ಷ ಟನ್‌ಗಳಷ್ಟು ತ್ಯಾಜ್ಯವು ಮಹತ್ವಾಕಾಂಕ್ಷಿ ವಿಲೇವಾರಿ ವಿಧಾನಕ್ಕಾಗಿ ಕಾಯುತ್ತಿದೆ. ಇಂಥ ಬದಲಾವಣೆ ಹಿಟಾಚಿ, ಮಿತ್ಸುಬಿಷಿ, ಪ್ಯಾನಸೋನಿಕ್ ಮತ್ತು ಸೋನಿಯಂಥ ದೈತ್ಯ ಎಲೆಕ್ಟ್ರಾನಿಕ್ಸ್ ಕಂಪನಿಗಳಿರುವ ಜಪಾನ್‌ನಿಂದಲೇ ಆರಂಭವಾಗಲು ಇದು ಸಕಾಲ ಎನ್ನುತ್ತಾರೆ ಕೌಹರ್.

ಒಪ್ಪಂದ ಅನಿವಾರ್ಯ

ಇ–ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಈ ಮಹತ್ವಾಕಾಂಕ್ಷೆಯ ಕನಸು ಸಾಕಾರಗೊಳ್ಳಲು ನಾವೆಲ್ಲರೂ ಟೊಕಿಯೊ 2020 ಒಲಿಂಪಿಕ್ಸ್ ಮೀರಿ ಯೋಚಿಸಬೇಕಿದೆ. ವಿಶ್ವದ ಎಲ್ಲ ದೇಶಗಳೂ ಒಗ್ಗೂಡಿ ಒಂದು ಮಾರ್ಗದರ್ಶಿ ಸೂತ್ರ ಮತ್ತು ಯೋಜಿತ ಕಾರ್ಯತಂತ್ರವನ್ನು ರೂಪಿಸಬೇಕಿದೆ. 5000 ಪದಕಗಳನ್ನು ಇ–ತ್ಯಾಜ್ಯದಿಂದ ರೂಪಿಸಲು ಮುಂದಾಗಿರುವ ಜಪಾನಿಯರ ಸಾಹಸ ವಿಶ್ವಕ್ಕೆ ಹೊಸ ಆಶಾಕಿರಣವಾಗಿ ಕಾಣಿಸುತ್ತಿದೆ. ’ನಗರ ಗಣಿ’ಯ ಸಾಧ್ಯತೆಯನ್ನು ವಿಶ್ವದ ಎದುರು ತೆರೆದಿಟ್ಟಿರುವ ಜಪಾನ್, ಇತರ ದೇಶಗಳು ಈ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ವಿಚಾರದಲ್ಲಿ ಯೋಗ್ಯ ಮೇಲ್ಪಂಕ್ತಿಯನ್ನೇ ಹಾಕಿಕೊಟ್ಟಿದೆ.

(ಮಾಹಿತಿ: ಬಿಬಿಸಿ ಫ್ಯೂಚರ್ ಮತ್ತು ಟೊಕಿಯೊ 2020ವೆಬ್‌ಸೈಟ್‌. ಅನುವಾದ: ಡಿ.ಎಂ.ಘನಶ್ಯಾಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT