ಶನಿವಾರ, ಮೇ 15, 2021
25 °C

ಚಾಬಹಾರ್‌ ಮೇಲಿನ ನಿರ್ಬಂಧನೆಗಳಿಂದ ಭಾರತಕ್ಕೆ ಅಪರೂಪದ ವಿನಾಯಿತಿ: ಅಮೆರಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ (ಪಿಟಿಐ): ಯುದ್ಧದಿಂದ ಹಾನಿಗೊಳಗಾಗಿರುವ ಅಫ್ಗಾನಿಸ್ತಾನಕ್ಕೆ ಮಾನವೀಯ ನೆಲೆಗಟ್ಟಿನಲ್ಲಿ ಸಾಮಗ್ರಿಗಳನ್ನು ಕಳುಹಿಸಲು ಕಾರ್ಯತಂತ್ರದ ಯೋಜನೆಯ ಜೀವಸೆಲೆ ಎಂದೇ ಗುರತಿಸಲ್ಪಟ್ಟಿರುವ ಇರಾನ್‌ನ ಚಾಬಹಾರ್‌ ಬಂದರಿನ ಮೇಲಿನ ನಿರ್ಬಂಧನೆಗಳಿಂದ ಅಮೆರಿಕ ಭಾರತಕ್ಕೆ ಅಪರೂಪದ ವಿನಾಯಿತಿ ನೀಡಿದೆ ಎಂದು ಟ್ರಂಪ್‌ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ, ಇರಾನ್‌ ಮತ್ತು ಅಫ್ಗಾನಿಸ್ತಾನ್‌ ಜಂಟಿಯಾಗಿ ಚಾಬಹಾರ್‌ ಬಂದರು ಅಭಿವೃದ್ಧಿಪಡಿಸಿವೆ. ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗೆ ವ್ಯಾಪಾರಕ್ಕೆ ಈ ಮೂರು ದೇಶಗಳಿಗೆ ಸುವರ್ಣಾವಕಾಶಗಳ ಹೆಬ್ಬಾಗಿಲು ಎಂದು ಪರಿಗಣಿಸಲಾಗಿದೆ. ಇದು ಇರಾನ್‌ನ ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯದ ಹಿಂದೂ ಮಹಾಸಾಗರದಲ್ಲಿದೆ.

’ಅಫ್ಗಾನಿಸ್ತಾನಕ್ಕೆ ಸಂಸ್ಕರಿಸಿದ ತೈಲ ಉತ್ಪನ್ನಗಳನ್ನು ರಫ್ತು ಮಾಡಲು ಚಾಬಹಾರ್‌ ಬಂದರು ಮತ್ತು ರೈಲು ಮಾರ್ಗ ಅಭಿವೃದ್ಧಿಗೆ ಕರಾರುವಕ್ಕಾದ ವಿನಾಯಿತಿ ನೀಡಿದ್ದೇವೆ‘ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಭಾರತದ ಜೊತೆಗೆ ಟ್ರಂಪ್‌ ಆಡಳಿತ ಹೊಂದಿರುವ ಬದ್ಧತೆಯನ್ನು ಇದು ಸಂಕೇತಿಸುತ್ತದೆ.

’ಈ ಯೋಜನೆಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಕೋರ್‌ (ಐಆರ್‌ಜಿಸಿ) ಭಾಗವಹಿಸದಿರುವವರೆಗೆ ಅಮೆರಿಕ ವಿನಾಯಿತಿಯನ್ನು ವಿಸ್ತರಿಸಲಿದೆ. ಆದರೆ, ಐಆರ್‌ಜಿಸಿ ಸಂಬಂಧಪಟ್ಟ ಘಟಕಗಳು ಭಾಗಿಯಾಗುವುದರ ಬಗ್ಗೆ ಅನಿಶ್ಚಿತತೆ ಇದೆ‘ ಎಂದು ಭಾರತ– ಅಮೆರಿಕ ನಡುವಿನ ಸಚಿವ ಮಟ್ಟದ ಮಾತುಕತೆ ನಂತರ ಅವರು ತಿಳಿಸಿದರು.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ, ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ಎಸ್ಪರ್‌ ಅವರ ನಡುವೆ ನಡೆದ ಮಾತುಕತೆ ನಂತರ ಈ ವಿನಾಯಿತಿಯನ್ನು ಪ್ರಕಟಿಸಲಾಯಿತು.

ಜೈಶಂಕರ್‌ ಅವರ ಕೋರಿಕೆ ಮೇರೆಗೆ ನಿರ್ಬಂಧನೆಗಳಲ್ಲಿ ವಿನಾಯಿತಿ ನೀಡಲಾಯಿತು ಎಂದು ಅಧಿಕಾರಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

’ಭಯೋತ್ಪಾದನೆ ನಿಗ್ರಹ, ಮಾದಕ ವಸ್ತುಗಳ ವಿರುದ್ಧದ ಹೋರಾಟ, ಆಫ್ಗಾನಿಸ್ತಾನ್‌ದಲ್ಲಿ ಶಾಂತಿ ಮರು ಸ್ಥಾಪನೆ ಪ್ರಕ್ರಿಯೆಗೆ ಪರಸ್ಪರ ಸಹಕಾರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಉಗ್ರರ ನಿರ್ಮೂಲನೆಗೆ ಭಾರತದ ನಿಲುವು ಸ್ಪಷ್ಟವಿದ್ದು, ನಾವು ಅದನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಅವರಿಗೆ ಭರವಸೆ ನೀಡಿದ್ದೇವೆ‘ ಎಂದು ಪಾಂಪಿಯೊ ಹೇಳಿದರು.

*****

ಅಫ್ಗಾನಿಸ್ತಾನಕ್ಕೆ ಹೆಚ್ಚಿನ ಪ್ರಯೋಜನವಾಗುವ ಚಾಬಹಾರ್‌ ಯೋಜನೆಗೆ ಅಮೆರಿಕ ಬೆಂಬಲಿಸಿದ್ದಕ್ಕೆ ಪಾಂಪಿಯೊ ಅವರಿಗೆ ಕೃತಜ್ಞತೆ 

ಎಸ್‌. ಜೈಶಂಕರ್‌, ವಿದೇಶಾಂಗ ಸಚಿವ 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು