ಶನಿವಾರ, ಜನವರಿ 18, 2020
21 °C
ಸುಲೇಮಾನಿ ಸಾವಿಗೆ ಕಣ್ಣೀರಿಟ್ಟ ಖೊಮೇನಿ, ಇಂದು ಅಂತ್ಯಕ್ರಿಯೆ

ಟ್ರಂಪ್‌ ತಲೆಗೆ ₹ 575 ಕೋಟಿ ಘೋಷಿಸಿದ ಇರಾನ್: ಸುಲೇಮಾನಿ ಶವಯಾತ್ರೆಗೆ ಅಪಾರ ಜನ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೆಹರಾನ್‌: ಶೋಕತಪ್ತರಾದ ಅಪಾರ ಜನರ ಪ್ರಾರ್ಥನೆ ನಡುವೆ ಇರಾನ್‌ ಕಮಾಂಡರ್‌ ಖಾಸಿಂ ಸುಲೇಮಾನಿ ಅವರ ಅಂತ್ಯಕ್ರಿಯೆ ಮೆರವಣಿಗೆ ಸೋಮವಾರ ಇಲ್ಲಿ ನಡೆಯಿತು. ಅಂತ್ಯಕ್ರಿಯೆಯು ಅವರ ಹುಟ್ಟೂರು ಕರ್ಮನ್‌ನಲ್ಲಿ ಮಂಗಳವಾರ ನೆರವೇರಲಿದೆ. 

62 ವರ್ಷದ ಸುಲೇಮಾನಿ ಅವರಿಗೆ ಇರಾನ್‌ನ ‘ವೀರ’ ಎಂದು ಶೋಕತಪ್ತ ಜನಸಾಗರ ಭಾವನಾತ್ಮಕ ಗೌರವ ಸಲ್ಲಿಸಿತು. ಟೆಹರಾನ್‌ ಸ್ವಯಂ ಘೋಷಿತ ಬಂದ್‌ ಆಗಿತ್ತು. 

ಇರಾನಿನ ರೆವಲ್ಯೂಷನರಿ ಗಾರ್ಡ್ಸ್‌ನ ಕುದ್ಸ್‌ ಪಡೆಯ ಮುಖ್ಯಸ್ಥರಾಗಿದ್ದ ಜನರಲ್‌ ಸುಲೇಮಾನಿ ಅವರನ್ನು ಅಮೆರಿಕ ಕ್ಷಿಪಣಿ ದಾಳಿ ಮೂಲಕ ಶುಕ್ರವಾರ ಹತ್ಯೆ ಮಾಡಿತ್ತು.  ಇರಾನ್‌ ಸರ್ವೋಚ್ಚ ನಾಯಕ ಅಯಾತ್‌ಉಲ್ಲಾ ಅಲಿ ಖೊಮೇನಿ ಅವರು  ಸುಲೇಮಾನಿ ಅವರ ಶವಪೆಟ್ಟಿಗೆ ಮುಂದೆ ಪ್ರಾರ್ಥಿಸಿ, ಕಣ್ಣೀರು ಸುರಿಸಿದರು.

‘ನಮ್ಮ ಜನರಲ್ ಅವರ ರಕ್ತದ ಕಲೆ ಹತ್ತಿರುವ ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ’ ಎಂದು  ಹೇಳಿದರು. 

‘ನಮ್ಮ ಜನರಲ್ ಹುತಾತ್ಮರಾಗಿದ್ದಾರೆ. ಇಷ್ಟು ವರ್ಷಗಳ ಕಾಲ ಅವರು ಪಟ್ಟ ಶ್ರಮಕ್ಕೆ ದೊರೆತ ಪ್ರತಿಫಲವಿದು. ಅವರ ಅನುಪಸ್ಥಿತಿ ಸಹಿಸಲಾಗದು. ಆದರೆ, ಅವರ ಕೆಲಸ ಮತ್ತು ಅವರು ತೋರಿದ್ದ ಹಾದಿ ನಿಲ್ಲುವುದಿಲ್ಲ’ ಎಂದು ಅವರು ತಿಳಿಸಿದರು.

‘ಅಮೆರಿಕ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಹೇಳಿದ್ದಾರೆ.

ಸುಲೇಮಾನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಟೆಹರಾನ್‌ ಪ್ರತಿಜ್ಞೆ ಮಾಡಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳೊಂದಿಗಿನ ತನ್ನ 2015ರ ಪರಮಾಣು ಒಪ್ಪಂದದಿಂದ ಹಿಂದೆ ಸರಿಯಲು ಅದು ಮುಂದಾಗಿದೆ. 

ಸುಲೇಮಾನಿ ಉತ್ತರಾಧಿಕಾರಿ ಇಸ್ಮಾಯಿಲ್‌ ಖಾನಿ, ‘ದೇವರು ಪ್ರತೀಕಾರ ತೀರಿಸಿಕೊಳ್ಳುವ ಭರವಸೆ ನೀಡಿದ್ದಾನೆ. ದೇವರ ಅಣತಿಯಂತೆ ಖಂಡಿತವಾಗಿಯೂ ಪ್ರತೀಕಾರ ತೆಗೆದುಕೊಳ್ಳಲಾಗುವುದು’ ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್‌ ತಲೆಗೆ ₹ 575 ಕೋಟಿ!

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹತ್ಯೆಗಾಗಿ ಇರಾನ್‌ ₹ 575 ಕೋಟಿ ಬಹುಮಾನ ಘೋಷಿಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಸುಲೇಮಾನಿ ಅವರ ಶವಯಾತ್ರೆ ಸಂದರ್ಭದಲ್ಲಿ ಈ ಘೋಷಣೆ ಕೇಳಿಬಂದಿದೆ. ಇರಾನ್‌ನಲ್ಲಿ 80 ಮಿಲಿಯನ್‌ ಜನರಿದ್ದು ಪ್ರತಿಯೊಬ್ಬರೂ ಒಂದೊಂದು ಡಾಲರ್ ನೀಡಿದರೂ ಅದು ಟ್ರಂಪ್‌ ತಲೆ ತೆಗೆದವರಿಗೆ ಸೇರುತ್ತದೆ ಎಂದು ಹೇಳಲಾಗಿದೆ. ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಈ ಕುರಿತು ಪ್ರಸಾರ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. 

‘ಅಮೆರಿಕಕ್ಕೆ ಕರಾಳ ದಿನ’

ಶವಯಾತ್ರೆ ಸಂದರ್ಭದಲ್ಲಿ ಸೇರಿದ್ದ ಭಾರಿ ಜನಸಂದಣಿ ನಡುವೆಯೇ, ಅವರ ಪುತ್ರಿ ಜೈನಾಬ್‌ ಅವರು, ‘ನಮ್ಮ ತಂದೆಯ ಹತ್ಯೆಯು ಅಮೆರಿಕಕ್ಕೆ ಕರಾಳ ದಿನವಾಗಲಿದೆ’ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿಯು ಈ ಸಂದೇಶವನ್ನು ಪ್ರಸಾರ ಮಾಡಿದ್ದು, ‘ಹುಚ್ಚುತನದಿಂದ ವರ್ತಿಸುತ್ತಿರುವ ಟ್ರಂಪ್‌ ಅವರೇ ಎಲ್ಲವೂ ಮುಗಿದಿದೆ ಎಂದು ಭಾವಿಸಬೇಡಿ. ಇದಕ್ಕೆ ಪ್ರತೀಕಾರವನ್ನು ಖಂಡಿತ ತೆಗೆದುಕೊಳ್ಳಲಾಗುವುದು. ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಸೈನಿಕರ ಕುಟುಂಬಗಳು ತಮ್ಮ ಮಕ್ಕಳ ಸಾಯುವ ದಿನಗಳಿಗಾಗಿ ಕಾಯಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು