ಶುಕ್ರವಾರ, ಜುಲೈ 23, 2021
23 °C

ಕಾಮೇಗೌಡರು ಕಟ್ಟೆ ಕಟ್ಟಿದ್ದು ಸುಳ್ಳಾ, ನಿಜವಾ: ಜಾಲತಾಣಗಳಲ್ಲಿ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರು ಕುಂದನಿ ಬೆಟ್ಟದ ಬಳಿ ಕಟ್ಟೆ ಕಟ್ಟಿಸಿರುವುದು ನಿಜವೇ, ಸುಳ್ಳೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಪ್ರಧಾನಿ ತಮ್ಮ ‘ಮನದ ಮಾತು‘ ಸರಣಿ ಕಾರ್ಯಕ್ರಮದಲ್ಲಿ ಕಾಮೇಗೌಡರ ವಿಚಾರ ಪ್ರಸ್ತಾಪ ಮಾಡಿದ ನಂತರ ಜಾಲತಾಣಗಳಲ್ಲಿ ಈ ಚರ್ಚೆ ನಡೆಯುತ್ತಿದೆ. ನೆಟ್ಕಲ್ ಗ್ರಾಮದ ಎನ್.ಎಂ.ಪ್ರತಾಪ್ ಡ್ರೋಣ್ ಮಾಡಿರುವುದು ಸುಳ್ಳು ಎಂಬ ಸುದ್ದಿ ಹರಿದಾಡಿದ ನಂತರ ಕಾಮೇಗೌಡರು ಕಟ್ಟೆ ಕಟ್ಟಿಸಿರುವುದು ಕೂಡ ಸುಳ್ಳು ಎಂಬ ಸುದ್ದಿ ಹರಿದಾಡುತ್ತಿವೆ.

ಕೆಲವರು ಕುಂದನಿ ಬೆಟ್ಟದ ಬಳಿ ತೆರಳಿ ಸತ್ಯಶೊಧನೆಯಲ್ಲಿ ನಿರತರಾಗಿದ್ದಾರೆ. ಕಟ್ಟೆಗಳ ಬಳಿ ತೆರಳಿ ಫೇಲ್‌ಬುಕ್ ಲೈವ್, ವಾಟ್ಸ್‌ ಆ್ಯಪ್‌ ವಿಡಿಯೊ ಮಾಡಿ ಪರ- ವಿರೋಧ ಚರ್ಚೆ ಮಾಡುತ್ತಿದ್ದಾರೆ. ಕಾಮೇಗೌಡರು ಕಟ್ಟೆ ಕಟ್ಟಿಸಿ ಪರಸರ ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನೂ ಕೆಲವರು, ಕಾಮೇಗೌಡರು ಗುಂಡಿಗಳನ್ನಷ್ಟೇ ತೋಡಿಸಿದ್ದಾರೆ, ಇವುಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳುತ್ತಿದ್ದಾರೆ.

ಗ್ರಾಮಸ್ಥರ ಅಸಮಾಧಾನ: ಕಾಮೇಗೌಡರು ಕೆರೆ, ಕಟ್ಟೆ ಹೆಸರಿನಲ್ಲಿ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ. ಕುಂದನಿ ಬೆಟ್ಟ ತನ್ನದು ಎಂಬಂತೆ ಮಾತನಾಡುತ್ತಿದ್ದಾರೆ. ಬೆಟ್ಟದಲ್ಲಿ ಮರಳು ತೆಗೆದು ಮಾರಾಟ ಮಾಡಿದ್ದಾರೆ ಎಂದು ದಾಸನದೊಡ್ಡಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಇನ್ನೊಂದೆಡೆ, ಗ್ರಾಮಸ್ಥರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ 11 ಮಂದಿ ವಿರುದ್ಧ ಕಾಮೇಗೌಡರು ಬೆಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಗ್ರಾಮಕ್ಕೆ ಭೇಟಿ ನೋಡಿ ಗ್ರಾಮಸ್ಥರಿಗೆ ಬುದ್ಧಿ ಹೇಳಿದ್ದಾರೆ.

'ಕಾಮೇಗೌಡರು ಹಾಗೂ ದಾಸನದೊಡ್ಡಿ ಗ್ರಾಮಸ್ಥರ ನಡುವೆ ಭಿನ್ನಾಭಿಪ್ರಾಯವಿದೆ. ಸಭೆ ನಡೆಸಿ ಭಿನ್ನಾಭಿಪ್ರಾಯ ಶಮನ ಮಾಡುವಂತೆ ಉಪ ವಿಭಾಗಾಧಿಕಾರಿ, ತಹಶಿಲ್ದಾರ್‌ಗೆ ಸೂಚನೆ ನೀಡಿದ್ದೇನೆ. ಗ್ರಾಮದಲ್ಲಿರುವ ಜಗಳದ ನೆಪದಲ್ಲಿ, ಕಾಮೇಗೌಡರು ಕಟ್ಟೆಗಳನ್ನೇ ತೋಡಿಲ್ಲ ಎಂದು ಹೇಳುವುದು ತಪ್ಪು. ನಾನೇ ಖುದ್ದು ಭೇಟಿ ನೀಡಿ ಹತ್ತಕ್ಕೂ ಹೆಚ್ಚು ಕಟ್ಟೆ ಪರಿಶೀಲಿಸಿದ್ದೇನೆ. ಜಿಲ್ಲಾಡಳಿತ ನೀಡಿದ ವರದಿ ಆಧರಿಸಿ ಪ್ರಧಾನಿ ತಮ್ಮ ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ' ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

ಈ ನಡುವೆ ಕಾಮೇಗೌಡರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಲಗಾಲಿನಲ್ಲಿದ್ದ ಹಳೆಯ ಗಾಯದಲ್ಲಿ ಸೋಂಕು ಕಾಣಿಸಿಕೊಂಡಿರುವ ಕಾರಣ ಅವರ ನಡೆದಾಡದ ಸ್ಥಿತಿಯಲ್ಲಿದ್ದಾರೆ. ಜಿಲ್ಲಾಡಳಿತ ಆಂಬುಲೆನ್ಸ್‌ ಒದಗಿಸಿದ್ದು ನಿತ್ಯ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.

ನಾನು ಪ್ರಶಸ್ತಿಗಾಗಿ, ಹಣಕ್ಕಾಗಿ ಕಟ್ಟೆ ಕಟ್ಟಿಸಲಿಲ್ಲ. ಬೆಟ್ಟದ ಮೇಲಿನ ಪ್ರಾಣಿ, ಪಕ್ಷಿಗಳ ಕುಡಿಯುವ ನೀರಿಗಾಗಿ ತೋಡಿಸಿದೆ. ಇಷ್ಟುದಿನ ಸುಮ್ಮನಿದ್ದು ಪ್ರಧಾನಿ ಮಾತಿನ ನಂತರ ಎಲ್ಲರೂ ನನ್ನ ಕೆಲಸದ ಮೇಲೆ ಅನುಮಾನ ಪಡುತ್ತಿರುವುದು ಏಕೆ?

ಕಾಮೇಗೌಡ, ದಾಸನದೊಡ್ಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು