ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮೇಗೌಡರ ಕಟ್ಟೆ ವೀಕ್ಷಣೆಗೆ ಜನರ ಭೇಟಿ: ಪೊಲೀಸರಿಗೆ ತಲೆನೋವು

Last Updated 25 ಜುಲೈ 2020, 14:08 IST
ಅಕ್ಷರ ಗಾತ್ರ

ಮಂಡ್ಯ: ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಹಾಗೂ ಕುಂದೂರು ಗ್ರಾಮದ ನಡುವೆ ಇರುವ ಕುಂದನಿ ಬೆಟ್ಟ (ಕುಂದೂರು ಬೆಟ್ಟ) ಈಗ ಕುತೂಹಲದ ಕೇಂದ್ರವಾಗಿದೆ. ಕಲ್ಮನೆ ಕಾಮೇಗೌಡರಿಂದಾಗಿ ಈ ಬೆಟ್ಟ ಈಗ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಕಾಮೇಗೌಡರು ತಮ್ಮ ಬಲಗಾಲಿನ ಗಾಯದ ಸೋಂಕು ಹಾಗೂ ಕೋವಿಡ್‌–19ನಿಂದ ಬಳಲುತ್ತಿದ್ದು ಜಿಲ್ಲಾಸ್ಪತ್ರೆಯಲ್ಲಿ ಮಲಗಿದ್ದಾರೆ. ಆದರೆ ಅತ್ತ ಬೆಟ್ಟದ ಮೇಲೆ ಅವರು ನಿರ್ಮಿಸಿರುವ ಕಟ್ಟೆ ವೀಕ್ಷಣೆಗೆ ಜಿಲ್ಲೆ, ಹೊರಜಿಲ್ಲೆಗಳಿಂದ ಜನರು ಬರುತ್ತಿದ್ದಾರೆ. ಕಾಮೇಗೌಡರು ಕಟ್ಟೆ ಕಟ್ಟಿಸಿರುವುದು ನಿಜವೇ, ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ. ಜನರು ಸತ್ಯಶೋಧನೆಯಲ್ಲಿ ತೊಡಗಿರುವ ಚಿತ್ರ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಡ್ರೋಣ್‌ ಪ್ರತಾಪ್‌ ಸಾಧನೆ ಸುಳ್ಳು ಎಂಬ ಸುದ್ದಿ ಹರಿದಾಡಿದ ನಂತರ ಕಾಮೇಗೌಡರ ಕಾಯಕದ ಮೇಲೂ ಅನುಮಾನ ಹುಟ್ಟಿಕೊಂಡಿದೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಲು ದೂರದ ಊರುಗಳಿಂದ ಜನರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಪರಿಸರ ಪ್ರೇಮಿಗಳು, ಸಮಾಜಿಕ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು, ಸ್ವಾಮೀಜಿಗಳು, ಜನಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಬೆಟ್ಟಕ್ಕೆ ಭೇಟಿ ನೀಡಿ ಸತ್ಯಶೋಧನಾ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ಕುಂದನಿ ಬೆಟ್ಟ ದಿಢೀರನೇ ಪ್ರಾವಾಸಿ ತಾಣದ ರೂಪ ಪಡೆದಿದೆ.

‘ಇಲ್ಲಿ ಕುರಿ ಮೇಯಿಸುವವರನ್ನು ಬಿಟ್ಟರೆ ಯಾರೂ ಇರುತ್ತಿರಲಿಲ್ಲ. ಈಗ ಜನರು ಕಾರು, ಬೈಕ್‌ಗಳಲ್ಲಿ ಬರುತ್ತಿದ್ದಾರೆ. ಬೆಟ್ಟದ ಮೇಲೆಲ್ಲಾ ಓಡಾಡುತ್ತಿದ್ದಾರೆ. ಇದನ್ನು ನೋಡಿದರೆ ಆಶ್ಚರ್ಯವಾಗುತ್ತದೆ’ ಎಂದು ದಾಸನದೊಡ್ಡಿಯ ಕುರಿಗಾಹಿಯೊಬ್ಬರು ತಿಳಿಸಿದರು.

ಕಾಮೇಗೌಡರನ್ನು ವಿರೋಧಿಸುತ್ತಿರುವ ಗುಂಪೊಂದು ಬೆಟ್ಟಕ್ಕೆ ಬರುವವರ ಜೊತೆ ವಾಗ್ವಾದ ನಡೆಸುವ ದೃಶ್ಯಗಳು ನಡೆಯುತ್ತಿವೆ. ಕಾಮೇಗೌಡರು ಕಟ್ಟೆಗಳನ್ನೇ ಕಟ್ಟಿಲ್ಲ. ಹಿಂದೆಯೇ ಇದ್ದ ಕಟ್ಟೆಗಳನ್ನು ತಮ್ಮದು ಎಂಬಂತೆ ಬಿಂಬಿಸಿಕೊಂಡಿದ್ದಾರೆ ಎಂದೂ ಹೇಳುತ್ತಿದ್ದಾರೆ. ಇಲ್ಲಿ ಛಾಯಾಚಿತ್ರ ತೆಗೆದು ನಮ್ಮ ಊರಿನ ಹೆಸರು ಹಾಳು ಮಾಡಬೇಡಿ ಎಂದೂ ತಾಕೀತು ಮಾಡುತ್ತಿದ್ದಾರೆ.

‘ಗ್ರಾಮದ ಯುವಕರ ಗುಂಪೊಂದು ಕಾಮೇಗೌಡರು ಕಟ್ಟೆಗಳನ್ನೇ ತೋಡಿಸಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಬೆಟ್ಟದ ತಪ್ಪಲಲ್ಲಿ, ಮೇಲ್ಭಾಗದಲ್ಲಿ ಇರುವ ಕಟ್ಟೆಗಳನ್ನು ತೋಡಿಸಿದ್ದು ಯಾರು ಎಂಬ ಪ್ರಶ್ನೆಗೆ ಅವರು ಉತ್ತರ ನೀಡುತ್ತಿಲ್ಲ’ ಎಂದು ಮಂಡ್ಯದಿಂದ ತೆರಳಿದ್ದ ಸಂತೋಷ್‌ ಹೇಳಿದರು.

‘ದಾಸನದೊಡ್ಡಿ ಗ್ರಾಮ ಹಾಗೂ ಬೆಟ್ಟದಲ್ಲಿ ಶಾಂತಿ ಕಾಪಾಡಲಾಗಿದೆ. ಬೆಟ್ಟಕ್ಕೆ ಬರುವವರು ಅರ್ಜಿ ಸಲ್ಲಿಸಿದರೆ ಅವರಿಗೆ ಭದ್ರತೆ ಒದಗಿಸಲಾಗುವುದು’ ಎಂದು ಬೆಳಕವಾಡಿ ಪೊಲೀಸರು ತಿಳಿಸಿದರು.

ಗುಣಮುಖರಾಗಿ ಬರಲಿ

‘ಕಾಮೇಗೌಡರಿಗೆ ಕೋವಿಡ್‌ ಬಂದಿರುವುದು ದಾಸನದೊಡ್ಡಿ ಗ್ರಾಮಸ್ಥರಿಗೂ ಬೇಸರ ತಂದಿದೆ. ಹಿರಿಯರಾದ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಆಶಿಸುತ್ತೇನೆ. ಆದರೆ ಕಾಮೇಗೌಡರು ಗ್ರಾಮಸ್ಥರನ್ನು ಕಿಡಿಗೇಡಿಗಳು ಎಂದು ಬಿಂಬಿಸಿರುವುದಕ್ಕೆ ನಮ್ಮ ವಿರೋಧವಿದೆ’ ಎಂದು ಗ್ರಾಮದ ಯುವಕ ಡಿ.ಕೆ.ಶಶಿಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT