ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಪ್ರಗತಿ ಪರ ಕೃಷಿಕರಿಗೆ ಪ್ರಶಸ್ತಿಯ ಗರಿ

ಸಮಗ್ರ ಕೃಷಿ ಪದ್ಧತಿ ಅಳವಡಿಕೆಗೆ ಸಂದ ರಾಷ್ಟ್ರಮಟ್ಟದ ಗೌರವ
Last Updated 21 ಜುಲೈ 2020, 19:45 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಕೃಷಿ ಪ್ರಧಾನ ಜಿಲ್ಲೆ. ಭತ್ತ ಹಾಗೂ ಕಾಫಿ ಪ್ರಧಾನ ಬೆಳೆಯಾದರೂ ರೈತರು, ಹಲವು ತೋಟಗಾರಿಕೆ ಬೆಳೆಗಳನ್ನೂ ಬೆಳೆಯುತ್ತಾರೆ.

ಇದ್ದಷ್ಟೇ ಜಮೀನಿನಲ್ಲಿ ಸಾಕಷ್ಟು ಆವಿಷ್ಕಾರ ಮಾಡುವುದರಲ್ಲಿ ಕೊಡಗಿನ ರೈತರು ಪ್ರಸಿದ್ಧರು. ಅಂತಹ ಪ್ರಗತಿ ಪರ ಕೃಷಿಕರ ಪೈಕಿ, ವಿರಾಜಪೇಟೆ ತಾಲ್ಲೂಕಿನ ನಲ್ಲೂರು ಗ್ರಾಮ ಸೋಮೇಂಗಡ ಗಣೇಶ್‌ ತಿಮ್ಮಯ್ಯ ಒಬ್ಬರು.

ಅವರಿಗೆ ಈ ಬಾರಿಯ ಪ್ರತಿಷ್ಠಿತ ರಾಷ್ಟ್ರಮಟ್ಟದ ಪ್ರಶಸ್ತಿಯೂ ಒಲಿದಿದೆ. ‘ಸಮಗ್ರ ಕೃಷಿ ಪದ್ಧತಿ ಅಳವಡಿಕೆ’ಗೆ ‘ಬಾಬು ಜಗಜೀವನ್ ರಾಮ್ ಕೃಷಿ ಸಮ್ಮಾನ್ ಪ್ರಶಸ್ತಿ’ಗೆ ಗಣೇಶ್‌ ಅವರು ಭಾಜನರಾಗಿದ್ದಾರೆ.

ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ 92ನೇ ಸಂಸ್ಥಾಪನೆ ದಿನಾಚರಣೆ ಪ್ರಯುಕ್ತ ಈಚೆಗೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.

ಕೃಷಿಯಲ್ಲಿ ಸಾಧನೆ ಮಾಡಿದ ಗಣೇಶ್‌ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ಅವರಿಗೆ ಕಾಫಿ ನಾಡಿನಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಎರಡು ದಿನಗಳ ಹಿಂದೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಗಣೇಶ್‌ ಅವರ ಗದ್ದೆಗೇ ತೆರಳಿ, ಅಭಿನಂದಿಸಿದ್ದಾರೆ. ಯಾಂತ್ರಿಕೃತ ನಾಟಿ ಪದ್ಧತಿಯನ್ನೂ ವೀಕ್ಷಣೆ ಮಾಡಿ ಬಂದಿದ್ದಾರೆ.

ಗಣೇಶ್‌ ತಿಮ್ಮಯ್ಯ ಅವರು ಚಿಕ್ಕಂದಿನಲ್ಲೇ ತಂದೆ– ತಾಯಿಯನ್ನು ಕಳೆದುಕೊಂಡಿದ್ದರು. ಬಳಿಕ ಸೇನೆಯಲ್ಲಿ ಕೆಲಸ ಮಾಡಿದ್ದರು. ಅಲ್ಲಿಂದ ನಿವೃತ್ತರಾದ ಮೇಲೆ ಕಳೆದ 20 ವರ್ಷಗಳಿಂದ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ.

ಇರುವ ಜಮೀನಿನಲ್ಲಿ ಬಹುಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಭತ್ತದ ಕೃಷಿಯಲ್ಲಿ 60ಕ್ಕೂ ಹೆಚ್ಚು ತಳಿಯ ಪ್ರಯೋಗ ನಡೆಸಿರುವುದು ಇವರ ಹೆಗ್ಗಳಿಕೆ. ಅಡಿಕೆ, ಕಾಫಿ, ಭತ್ತ ಬೆಳೆ ಬೆಳೆಯುತ್ತಾರೆ. ಉಪ ಬೆಳೆಯಾಗಿ, ತರಕಾರಿ ಬೆಳೆದಿದ್ದಾರೆ.

ಕೃಷಿಯೊಂದಿಗೆ ಉಪ ಕಸುಬಾಗಿ, ಜೇನು ಸಾಕಾಣಿಕೆ, ಕೋಳಿ ಸಾಕಣೆ ಹಾಗೂ ಮೀನು ಕೃಷಿಯನ್ನೂ ಮಾಡುತ್ತಿದ್ದಾರೆ. ಅದರಿಂದಲೂ ಆದಾಯ ಗಳಿಸಿ ಮಾದರಿ ಆಗಿದ್ದಾರೆ. ಇತ್ತೀಚೆಗೆ ಯುವಕರು ಕೃಷಿಯಿಂದ ವಿಮುಖರಾಗುವ ಸಂಖ್ಯೆ ಹೆಚ್ಚಿದೆ. ಆದರೆ, ಕೊರೊನಾ ಸಂಕಷ್ಟ ಎದುರಾದ ಮೇಲೆ ಗ್ರಾಮಕ್ಕೆ ಬಂದಿರುವ ಯುವಕರು, ಕೃಷಿಯತ್ತ ಮನಸ್ಸು ಮಾಡುತ್ತಿದ್ದಾರೆ. ಗಣೇಶ್‌ ಅವರಿಂದಲೂ ಮಾಹಿತಿ ಪಡೆದುಕೊಂಡು ಕೃಷಿಯತ್ತ ಚಿತ್ತ ಹರಿಸುತ್ತಿದ್ದಾರೆ. ಅವರಿಗೆ ತಮ್ಮ ಕೃಷಿ ಜ್ಞಾನವನ್ನು ಗಣೇಶ್‌ಧಾರೆ ಎರೆಯುತ್ತಿದ್ದಾರೆ.

ತೋಟದಲ್ಲೂ ಬಗೆ ಬಗೆಯ ಹಣ್ಣುಗಳು:ಕಾಫಿ, ಶುಂಠಿ ಮಾತ್ರವಲ್ಲದೆ ಗಣೇಶ್ ಅವರು ವಿವಿಧ ಹಣ್ಣುಗಳನ್ನು ಬೆಳೆದು ಮಾರುಕಟ್ಟೆ ಕಲ್ಪಿಸಿದ್ದಾರೆ. ಬಟರ್‌ಫ್ರೂಟ್‌, ಸಪೋಟ, ಮಾವು, ಹಲಸು, ಕಿತ್ತಳೆ, ಎಗ್‌ಫ್ರೂಟ್‌, ರಾಂಬುಟನ್‌ ಬೆಳೆದಿದ್ದಾರೆ. ಇವರೇ ವಾರ್ಷಿಕವಾಗಿ 350ರಿಂದ 400 ಕ್ವಿಂಟಲ್‌ನಷ್ಟು ಭತ್ತ, ಅಂದಾಜು 200 ಮೂಟೆ ಕಾಫಿ ಬೆಳೆಯುತ್ತಾರೆ. ಕಾಳುಮೆಣಸು ಇವರ ಸಂ‍ಪಾದನೆ ಮಾರ್ಗವಾಗಿದೆ. ಕೃಷಿಯನ್ನೇ ನಂಬಿರುವ ಗಣೇಶ್‌ ಅವರು ಕೊಡಗಿನ ಪ್ರಗತಿಪರ ಕೃಷಿಕರಲ್ಲಿ ಒಬ್ಬರಾಗಿ ಹೆಸರು ಮಾಡಿದ್ದಾರೆ.

ಕೃಷಿ ಜ್ಞಾನಧಾರೆ:ಗಣೇಶ್‌ ತಿಮ್ಮಯ್ಯ ಅವರು ಕೇವಲ ತಮ್ಮಷ್ಟಕ್ಕೆ ತಾವು ಕೃಷಿ ಮಾಡುತ್ತಿಲ್ಲ. ಯುವಕರಲ್ಲಿ ಹಾಗೂ ಕೃಷಿ ಜಮೀನು ಪಾಳು ಬಿಟ್ಟವರಲ್ಲಿ ಕೃಷಿಯ ಉತ್ಸಾಹ ತುಂಬುತ್ತಿದ್ದಾರೆ. – ಹೀಗೆ ಕೃಷಿ ಜಾಗೃತಿ ಮೂಡಿಸಿದ ಪರಿಣಾಮ ನೂರಾರು ರೈತರು ಒಂದು ಸಾವಿರ ಎಕರೆಯಲ್ಲಿ ಭತ್ತ ಬೆಳೆಯುವಂತೆ ಆಗಿದೆ. ಕೃಷಿ ಕಾಯಕದೊಂದಿಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಕೃಷಿ ವಿಜ್ಞಾನಿಗಳು ಸಂತಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT