ಶನಿವಾರ, ಸೆಪ್ಟೆಂಬರ್ 26, 2020
27 °C

ರಾಮ ಮಂದಿರ ಭೂಮಿ ಪೂಜೆಗೆ ಮುಹೂರ್ತ ನೀಡಿದ್ದು ಬೆಳಗಾವಿಯ ಜ್ಯೋತಿಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಆಗಸ್ಟ್ 5 ರಂದು ನಡೆಯಲಿದೆ. ಭೂಮಿ ಪೂಜೆಗೆ ಮುಹೂರ್ತವನ್ನು ನಿಗದಿಪಡಿಸಿರುವುದು ಬೆಳಗಾವಿಯ ಗೋವಾವೇಸ್ ವೃತ್ತ ಸಮೀಪದ ವಿದ್ಯಾವಿಹಾರ ವಿದ್ಯಾಲಯದ ಮುಖ್ಯಸ್ಥ ಪಂಡಿತ್ ಎನ್.ಆರ್. ವಿಜಯೇಂದ್ರ ಶರ್ಮಾ. 

75 ವರ್ಷದ ವಿಜಯೇಂದ್ರ ಶರ್ಮಾ ಅವರು ಭೂಮಿ ಪೂಜೆಗೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿದ್ದಾರೆ. ‘ಪಂಡಿತ್ ಶರ್ಮಾ’ ಎಂಬ ಹೆಸರಿನಿಂದಲೇ ಗುರುತಿಸಿಕೊಂಡಿರುವ ಶರ್ಮಾ ಅವರ ಜೊತೆಗೆ, ವಾರಣಾಸಿ ಮೂಲದ ಗಣೇಶ ಶಾಸ್ತ್ರಿ ದ್ರಾವಿಡ್ ಕೂಡ ‘ಮುಹೂರ್ತ’ ಹೊಂದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಶರ್ಮಾ ಅವರೀಗ ಭೂಮಿಪೂಜೆ ಸಮಾರಂಭಕ್ಕೆ ಹಾಜರಾಗುತ್ತಿಲ್ಲ.

ಅಕ್ಷಯ ತೃತೀಯ ಜೊತೆಗೆ, ಶರ್ಮಾ ಇನ್ನೂ ಹಲವಾರು ದಿನಾಂಕಗಳನ್ನು ಶಿಫಾರಸು ಮಾಡಿದ್ದರು. 'ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣದ ತಿಂಗಳು ಬಹಳ ಶುಭ. ನಾನು ಸೂಚಿಸಿದ ಎಲ್ಲಾ ದಿನಾಂಕಗಳು ಈ ಹಿಂದೂ ಕ್ಯಾಲೆಂಡರ್ ತಿಂಗಳಲ್ಲಿ ಬರುತ್ತವೆ' ಎಂದು ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಶ್ರೀರಾಮಮಂದಿರ ಭೂಮಿಪೂಜೆಗೆ ಮುಹೂರ್ತ ನೀಡಿದ ಶರ್ಮಾಗೆ ಬೆದರಿಕೆ ಕರೆ?

ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ಹಲವು ನಾಯಕರು ಮತ್ತು ಇತರರು ಪಾಲ್ಗೊಳ್ಳಲು ಅಯೋಧ್ಯೆಗೆ ತೆರಳುತ್ತಿರುವುದರಿಂದ ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ.

ವರದಿಗಳ ಪ್ರಕಾರ, ಭೂಮಿ ಪೂಜೆಗೆ ಬಳಸಲಿರುವ ಬೆಳ್ಳಿಯ ಇಟ್ಟಿಗೆಯನ್ನು ಮಧ್ಯಾಹ್ನ 12.15ಕ್ಕೆ, ‘ಅಭಿಜಿತ್ ಮುಹೂರ್ತ’ದ ಶುಭ ಸಮಯದಲ್ಲಿ ಇಡಲಾಗುವುದು. 22.6 ಕೆ.ಜಿಯ ಬೆಳ್ಳಿ ಇಟ್ಟಿಗೆಯನ್ನು ಇಟ್ಟು ಪ್ರಧಾನಿ ನರೇಂದ್ರ ಮೋದಿಯವರು ಪೂಜೆಯನ್ನು ನೆರವೇರಿಸಲಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದನ್ವಯ ರಚನೆಯಾಗಿರುವ ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಯನ್ನು ನಿರ್ವಹಿಸುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ಭೂಮಿ ಪೂಜೆಗೆ ಇದು ಅತ್ಯಂತ ಶುಭ ಸಮಯವಾಗಿದೆ.

ಭೂಮಿ ಪೂಜೆ ಕಾರ್ಯಕ್ರಮಕ್ಕೆ 200ಕ್ಕೂ ಹೆಚ್ಚಿನ ಅತಿಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಇತರರೊಂದಿಗೆ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಗಸ್ಟ್ 4 ಮತ್ತು 5 ರಂದು ‘ದೀಪೋತ್ಸವ’ ನಡೆಯಬೇಕೆಂದು ಬಯಸಿದ್ದರು. ದೀಪಾವಳಿಯ ರಾತ್ರಿಯಂತೆಯೇ ಅಲ್ಲಿ ಜನರು ದೀಪಗಳನ್ನು ಬೆಳಗಿಸುತ್ತಾರೆ. ಭೂಮಿ ಪೂಜೆಯ ನಿರೀಕ್ಷೆಯಲ್ಲಿ ನಗರದಾದ್ಯಂತ ಜನರು ಈಗಾಗಲೇ ದೀಪಗಳನ್ನು ಬೆಳಗಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು