ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ಗೆ ಶಾಂತಾರಾಮ ಸಿದ್ದಿ: ಸರಳ ವ್ಯಕ್ತಿತ್ವಕ್ಕೆ ಸಂದ ಗೌರವ

ವಿಧಾನ ಪರಿಷತ್‌ಗೆ ಶಾಂತಾರಾಮ ಸಿದ್ದಿ ನೇಮಕ
Last Updated 23 ಜುಲೈ 2020, 5:02 IST
ಅಕ್ಷರ ಗಾತ್ರ

ಶಿರಸಿ: ‘ಚಿಪಗೇರಿಯ ವನವಾಸಿ ಕಲ್ಯಾಣ ಹಾಸ್ಟೆಲ್ ನಿವೇಶನದ ಸಂಬಂಧ ಸಿದ್ಧಪಡಿಸಿದ್ದ ಮನವಿಯನ್ನು, ಯಲ್ಲಾಪುರದಲ್ಲಿ ಸ್ಪೀಡ್‌ಪೋಸ್ಟ್ ಮಾಡಿ ಬಂದು, ಊಟಕ್ಕೆ ಕುಳಿತಿದ್ದೆ. ಅದೇ ಹೊತ್ತಿಗೆ ಆತ್ಮೀಯರೊಬ್ಬರು ಕರೆ ಮಾಡಿ, ವಿಧಾನ ಪರಿಷತ್‌ಗೆ ನನ್ನ ಹೆಸರು ನಾಮನಿರ್ದೇಶನಗೊಂಡಿರುವ ವಿಷಯ ತಿಳಿಸಿದರು. ವಿಷಯ ಕೇಳಿ ನನಗೆ ಅಚ್ಚರಿಯಾಯಿತು’ ಎಂದು ಶಾಂತಾರಾಮ ಸಿದ್ದಿ ಪ್ರತಿಕ್ರಿಯಿಸಿದರು.

ಸಾಮಾಜಿಕ ಚಟುವಟಿಕೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಬುಡಕಟ್ಟು ಜನಾಂಗಗಳ ಉನ್ನತಿಗೆ, ತಳಮಟ್ಟದಲ್ಲಿ ಕಾರ್ಯ ಮಾಡುತ್ತಿರುವ ಶಾಂತಾರಾಮ ಸಿದ್ದಿ ಜಿಲ್ಲೆಯ ಜನರಿಗೆ ಪರಿಚಿತರು. ಕ್ರಿಯಾಶೀಲ ವ್ಯಕ್ತಿತ್ವದ ಶಾಂತಾರಾಮ ಸಿದ್ದಿ ಅವರು, ಯಾವತ್ತೂ ಜನರ ನಡುವೆ ಇರುವ ಸಾಮಾನ್ಯ ವ್ಯಕ್ತಿ. ಪತ್ನಿ ಸುಶೀಲಾ, ಪುತ್ರಿ ಸಂಗೀತಾ, ಪುತ್ರ ಮಂಜುನಾಥ ಅವರೊಂದಿಗೆ ಯಲ್ಲಾಪುರ ತಾಲ್ಲೂಕು ಹಿತ್ಲಳ್ಳಿಯಲ್ಲಿ ಸಣ್ಣ ಮನೆಯಲ್ಲಿ ನೆಲೆಸಿದ್ದಾರೆ.

‘ಶಾಂತಾರಾಮ ಸಿದ್ದಿ ಅವರದು ಸವಾಲಿನ ಬದುಕು. ಮೂರು ದಶಕಗಳಿಂದ ಸಮಾಜ ಸೇವೆ ಮತ್ತು ಪರಿಸರ ರಕ್ಷಣೆಯಲ್ಲಿ ಅವರ ಸಲ್ಲಿಸುತ್ತಿರುವ ಸೇವೆ ಅಗಾಧವಾದದ್ದು. ಮಲೆನಾಡು, ಕರಾವಳಿಯಲ್ಲಿರುವ ಸಿದ್ದಿ, ಗೌಳಿ, ಕುಣಬಿ, ಗೊಂಡ, ಹಾಲಕ್ಕಿ ಮೊದಲಾದ ಬುಡಕಟ್ಟು ಸಮುದಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಉನ್ನತಿಗೆ ಅವರು ಶ್ರಮಿಸುತ್ತಿದ್ದಾರೆ. ವನವಾಸಿಗಳ ವಸತಿ ಶಾಲೆ, ಸಮುದಾಯ ಶಿಕ್ಷಣ, ಆರೋಗ್ಯ ಶಿಬಿರ, ಕೌಶಲ ತರಬೇತಿ ಬಗ್ಗೆ ಅವರಿಗೆ ವಿಶೇಷ ಆಸಕ್ತಿ. ಹಳ್ಳಿಗರಿಗೆ ವನೌಷಧ ಶಿಬಿರ ಆಯೋಜನೆ, ದೇವರಕಾಡು ಸಂರಕ್ಷಣೆ, ಪವಿತ್ರವನ ಸ್ಥಾಪನೆಯಂತಹ ಕಾರ್ಯಗಳನ್ನು ವನವಾಸಿಗಳ ಸಹಭಾಗಿತ್ವದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ’ ಎನ್ನುತ್ತಾರೆ ಅವರ ಒಡನಾಡಿಗಳು.

ವನವಾಸಿ ಕಲ್ಯಾಣ ಸಂಘಟನೆಯ ಪೂರ್ಣಾವಧಿ ಕಾರ್ಯಕರ್ತರಾಗಿದ್ದ ಅವರು, ವಿದ್ಯಾರ್ಥಿ ನಿಲಯದ ವಾರ್ಡನ್‌ ಆಗಿ, ತಾಲ್ಲೂಕು, ಜಿಲ್ಲಾ ಪ್ರಮುಖರಾಗಿ, ರಾಜ್ಯದ ವಸತಿ ನಿಲಯಗಳ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದಾರೆ.

‘ಸಿದ್ದಿ ಜನಾಂಗಕ್ಕೆ ರಾಜಕೀಯ, ಸಹಕಾರ ಸೇರಿದಂತೆ ಯಾವ ಕ್ಷೇತ್ರಗಳಲ್ಲೂ ಇಲ್ಲಿಯವರೆಗೆ ಪ್ರಾತಿನಿಧ್ಯ ದೊರೆತಿರಲಿಲ್ಲ. ಸಾಮಾಜಿಕವಾಗಿ ಹಿಂದುಳಿದ ಜನಾಂಗದ ಅರ್ಹ ವ್ಯಕ್ತಿಯೊಬ್ಬರಿಗೆ ವಿಧಾನ ಪರಿಷತ್‌ಗೆ ನೇಮಕ ಮಾಡಿರುವುದು ಸರ್ಕಾರದ ಉತ್ತಮ ನಿರ್ಧಾರ.ಪ್ರಾಜ್ಞರಿಗೆ ಮೀಸಲಾಗಿರುವ ಮೇಲ್ಮನೆಯ ಸ್ಥಾನಕ್ಕೆ ಪ್ರತಿಭಾವಂತ, ಅಧ್ಯಯನಶೀಲ ಹಾಗೂ ಸಾಮಾಜಿಕ ಕಳಕಳಿ ಇರುವ, ರಾಜಕಾರಣಿಯಲ್ಲದ ಶಾಂತಾರಾಮ ಸಿದ್ದಿಯಂತಹ ವ್ಯಕ್ತಿಯನ್ನು ನೇಮಕ ಮಾಡಿದ್ದು ಯೋಗ್ಯ ಆಯ್ಕೆ’ ಎಂದು ವನವಾಸಿ ಕಲ್ಯಾಣ ಸಂಘಟನೆಯ ಮಾರ್ಗದರ್ಶಿ ಸಚ್ಚಿದಾನಂದ ಹೆಗಡೆ ಪ್ರತಿಕ್ರಿಯಿಸಿದರು.

ಶಾಂತಾರಾಮ ಸಿದ್ದಿ ಅವರ ಪರಿಸರ ಕಾರ್ಯ ಗುರುತಿಸಿ, ಕರ್ನಾಟಕ ಜೀವವೈವಿಧ್ಯ ಮಂಡಳಿಯು, ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯ ಸಂದರ್ಭದಲ್ಲಿ ಜೀವವೈವಿಧ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಗುರುತರ ಸಮಸ್ಯೆ ಪರಿಹರಿಸುವ ಸವಾಲು

‘ಬುಡಕಟ್ಟು ಸಮುದಾಯಗಳಲ್ಲಿ ಅನೇಕ ಗುರುತರ ಸಮಸ್ಯೆಗಳಿವೆ. ಅರಣ್ಯ ಹಕ್ಕು ಕಾಯ್ದೆಯಡಿ ಎಲ್ಲರಿಗೂ ಹಕ್ಕುಪತ್ರ ದೊರೆತಿಲ್ಲ. ಬುಡಕಟ್ಟು ಸಮುದಾಯಗಳ ಶಿಕ್ಷಣಕ್ಕೆ ಸಾಕಷ್ಟು ಸವಲತ್ತು ದೊರೆತಿದ್ದರೂ, ನಮ್ಮ ಜನಾಂಗ ಇನ್ನೂ ಮುಂದೆ ಹೋಗಿಲ್ಲ. ಇದರ ಬಗ್ಗೆ ಗಂಭೀರವಾಗಿ ಯೋಚಿಸಿ, ಪರಿಹಾರ ಕಂಡುಕೊಳ್ಳಬೇಕಾಗಿದೆ. ಪರಿಶಿಷ್ಟ ಪಂಗಡದವರಂತೆ ಜೀವನ ನಡೆಸುತ್ತಿರುವ ಕೆಲ ಸಮುದಾಯಗಳನ್ನು ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಸೇರಿಸಬೇಕಾಗಿದೆ. ಇಂತಹ ಅನೇಕ ಸವಾಲುಗಳು ಎದುರಿಗಿವೆ’ ಎಂದು ಶಾಂತಾರಾಮ ಸಿದ್ದಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪತ್ನಿ ಮಕ್ಕಳೊಂದಿಗೆ ಶಾಂತಾರಾಮ ಸಿದ್ದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT