ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಸಲಹೆ ಪಾಲನೆ, ಧೈರ್ಯವೇ ದಾರಿ

ಕೋವಿಡ್‌ನಿಂದ ಗುಣಮುಖರಾದ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ನುಡಿ
Last Updated 15 ಜುಲೈ 2020, 20:58 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಕೋವಿಡ್‌–19 ಸೋಂಕಿನಿಂದ ಗುಣಮುಖರಾಗಲು ಇರುವ ಪರಿಹಾರ. ವೈದ್ಯರ ಸಲಹೆ, ಚಿಕಿತ್ಸೆ ಪಾಲನೆ, ಧೈರ್ಯ, ಸ್ವಯಂಶಿಸ್ತು, ಜಾಗರೂಕತೆಯಿಂದ ಇದ್ದರೆ ಈ ಕಾಯಿಲೆಯಿಂದ ಗುಣಮುಖರಾಗಬಹುದು...

–ಕೋವಿಡ್‌ನಿಂದ ಗುಣಮುಖರಾಗಿರುವ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಅವರ ನುಡಿಗಳಿವು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಂಟು ದಿನ ಚಿಕಿತ್ಸೆ ಪಡೆದಿದ್ದ ಅವರು ಪ್ರಸ್ತುತ ತೋಟದ ಮನೆಯಲ್ಲಿ ಇದ್ದಾರೆ. ಬುಧವಾರ ‘ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕಾಯಿಲೆ ವಾಸಿಯಾದ ಬಗೆ ಹಂಚಿಕೊಂಡರು.

‘ಮಾಮೂಲಿ ಜ್ವರ, ಕೆಮ್ಮು, ನೆಗಡಿಗೆ ಕೊಡುವ ಔಷಧ, ಚಿಕಿತ್ಸೆ ಕೊಟ್ಟರು. ಬಿಸಿನೀರು ಕುಡಿಯುತ್ತಿದ್ದೆ. ಉಪ್ಪುನೀರಿನಿಂದ ಬಾಯಿ ಮುಕ್ಕಳಿಸುತ್ತಿದ್ದೆ. ಕಾಳುಮೆಣಸು, ತುಳಸಿ, ಶುಂಠಿ ಕಷಾಯ ತಯಾರಿಸಿ ಕೊಟ್ಟಿದ್ದರು. ವೈದ್ಯರು ಸೂಚಿಸಿದ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸಿದೆ; ಕಾಯಿಲೆ ಹುಷಾರಾಯಿತು.

ಯಾವುದೇ ಬೇನೆ (ಕೈಕಾಲು ನೋವು, ತಲೆ ಸಿಡಿತ...) ಕಾಡಲಿಲ್ಲ. ಆರಾಮಾಗಿಯೇ ಇದ್ದೆ. ಯೋಗಾಭ್ಯಾಸ ರೂಢಿಸಿಕೊಂಡಿದ್ದೇನೆ. ಕಾಯಿಲೆ ಬೇಗನೆ ಗುಣವಾಯಿತು. ಈ ಕಾಯಿಲೆ ಚಿಕಿತ್ಸೆಗೆ ಆಪರೇಷನ್‌ ಗಿಪರೇಷನ್‌ ಏನು ಮಾಡಲ್ಲ. ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಮಾತ್ರ ಹುಷಾರಾಗಲು ಸಾಧ್ಯ.

ಸೋಂಕು ದೃಢಪಟ್ಟಾಗ ನನಗೂ ಸ್ವಲ್ಪ ಭಯವಾಗಿತ್ತು. ಆದರೆ, ಧೈರ್ಯಗೆಡಲಿಲ್ಲ. ಇಲ್ಲಿನ ಜಿಲ್ಲಾ ಸರ್ಜನ್‌, ವೈದ್ಯರು ಧೈರ್ಯ ಹೇಳಿದ್ದರು. ಬೆಂಗಳೂರಿನಲ್ಲಿ ಚಿಕಿತ್ಸೆಗೆ ದಾಖಲಾಗಿ, ಹುಷಾರಾದೆ’ ಎಂದರು.

‘ಕೋವಿಡ್‌ ಹಾವಳಿ ದಿನೇದಿನೇ ಹೆಚ್ಚುತ್ತಿದೆ. ಹೇಗೆ ಅಂಟುತ್ತದೆ ಎಂಬುದೂ ತಿಳಿಯುವುದಿಲ್ಲ. ತಾಲ್ಲೂಕು, ಜಿಲ್ಲಾ ಕೇಂದ್ರಗಳ ಕೋವಿಡ್‌ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಇದೆ. ಜನ ಜಾಗರೂಕರಾಗಬೇಕು. ರೋಗ ಬಾರದಂತೆ ಮುಂಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂಬುದು ಅವರ ಕಿವಿಮಾತು.

‘ಶ್ವಾಸಕೋಶ ಸಂಬಂಧಿ ಸಮಸ್ಯೆಗಳು, ಕಿಡ್ನಿ ತೊಂದರೆ, ಅಧಿಕ/ಕಡಿಮೆ ರಕ್ತದೊತ್ತಡ, ಮಧುಮೇಹ ಮೊದಲಾದ ರೋಗಗಳು ಇರುವವರಿಗೆ ಕೋವಿಡ್‌ ಬಾಧಿಸುವುದು ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಇಂತಹ ಸಮಸ್ಯೆ ಇರುವವರು ಅತೀವ ಎಚ್ಚರಿಕೆ ವಹಿಸುವುದು ಒಳಿತು’ ಎಂಬುದು ಅವರು ನೀಡುವ ಸಲಹೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT