ಕಾಷ್ಠ ಕಟ್ಟಡ ಮಾದರಿ ಕಲೆ

7

ಕಾಷ್ಠ ಕಟ್ಟಡ ಮಾದರಿ ಕಲೆ

Published:
Updated:
ಕಲಾಕೃತಿಗಳು

ವಿಧಾನಸೌಧ, ಮೈಸೂರು ಅರಮನೆ, ಚಾರ್‌ಮಿನಾರ್‌ ಎಂದಾಕ್ಷಣ ಭವ್ಯ ಕಟ್ಟಡಗಳು ಕಣ್ಮುಂದೆ ಬರುತ್ತವೆ. ಈ ಕಟ್ಟಡಗಳು ವಾಸ್ತುಶಿಲ್ಪಗಳಿಂದ ಹೆಸರಾದವು. ಇಂತಹ ಕಟ್ಟಡಗಳ ಮಾದರಿಗಳನ್ನು ಮರದ ದಿಣ್ಣೆಗಳಿಂದ  ನಯ, ನಾಜೂಕಿನಿಂದ, ಕಲಾತ್ಮಕತೆಯಿಂದ ತಯಾರಿಸಿದ್ದಾರೆ ವಿಜಯನಗರದ ಬಿ.ಜಿ. ರಾಜ್‌ಕುಮಾರ್‌.

ಅಪರೂಪದ ಕಲಾಕೃತಿಗಳನ್ನು ತಮ್ಮ ಕೈಚಳಕದಲ್ಲಿ ಅಚ್ಚರಿಪಡುವಂತೆ ಕೆತ್ತುವ ರಾಜ್‌ಕುಮಾರ್‌ ಅವರು ಇದಕ್ಕೆ ಆಲೆ ಮರ, ಮೃದು ಮರಗಳನ್ನು ಬಳಸುತ್ತಾರೆ. ಇದು ಕೆನೆಹಾಲು ಬಣ್ಣ, ಗೆದ್ದಲೂ ಹಿಡಿಯದಿರುವುದು ಈ ಮರದ ವಿಶೇಷ. ಇದು ನೂರಾರು ವರ್ಷ ಬಾಳಿಕೆ ಬರುವಂತಹ ಗಟ್ಟಿ ಮರವಾಗಿದ್ದು, ಹಗುರವೂ ಆಗಿರುತ್ತದೆ’ ಎಂದು ವಿವರಿಸುತ್ತಾರೆ.

(ರಾಜ್‌ಕುಮಾರ್‌ ಕೆತ್ತಿದ ವಿಧಾನಸೌಧ ಮಾದರಿ)

ಇವರ ಕಲಾಕೃತಿಗಳಲ್ಲಿ ವಿಶೇಷವಾಗಿ ಆಕರ್ಷಿಸುವುದು ವಿಧಾನಸೌಧ ಮಾದರಿ. 6 ಅಡಿ ಎತ್ತರ, 4 ಅಡಿ 9 ಇಂಚು ಅಗಲ ಇರುವ ಈ ಕಲಾಕೃತಿ ರಚನೆಗೆ ಇವರು ತೆಗೆದುಕೊಂಡಿದ್ದು ಬರೋಬ್ಬರಿ 10 ತಿಂಗಳು. ಕಟ್ಟಡದ ನಾಲ್ಕು ದಿಕ್ಕುಗಳು ಪೂರ್ಣಾಕಾರದಲ್ಲಿರುವುದಲ್ಲದೇ ಕಟ್ಟಡದ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ, ರಸ್ತೆಗಳು, ಉದ್ಯಾನ, ಹುಲ್ಲು ಹಾಸು, ಟಾರು ರಸ್ತೆಗಳಲ್ಲಿ ವಾಹನಗಳು ಸಂಚರಿಸುವಂತೆ ಮಾದರಿಯನ್ನು ನಿರ್ಮಿಸಿರುವುದು ಆಕರ್ಷಕವಾಗಿದೆ. 

ಶಿವಮೊಗ್ಗ ಜಿಲ್ಲೆಯವರಾದ  ರಾಜ್‌ಕುಮಾರ್‌ ಸದ್ಯ ಬೆಂಗಳೂರಿನ ವಿಜಯನಗರದಲ್ಲಿ ಇದ್ದಾರೆ. ಮರದ ಕಲಾಕೃತಿ ರಚನೆಯನ್ನೇ 18 ವರ್ಷಗಳಿಂದ ಉದ್ಯೋಗವನ್ನಾಗಿಸಿಕೊಂಡ ಇವರು, ಇಲ್ಲಿಯವರೆಗೂ 100ಕ್ಕೂ ಹೆಚ್ಚು ಕಲಾಕೃತಿ ಗಳನ್ನು ರಚಿಸಿದ್ದು, ಇವುಗಳಲ್ಲಿ ಯುಟಿಲಿಟಿ ಬಿಲ್ಡಿಂಗ್‌, ಎಂ.ಜಿ.ರಸ್ತೆ, ತಾಜ್‌ಮಹಲ್‌, ಶ್ರೀರಂಗಪಟ್ಟಣದ ಕೋಟೆ, ಮೈಸೂರು ಸೇಂಟ್‌ ಫಿಲೋಮಿನಾಸ್‌ ಚರ್ಚ್‌, ಯು.ಬಿ ಸಿಟಿ ಕಟ್ಟಡ ಮಾದರಿ, ಬುರ್ಜ್‌ ಖಲೀಫಾ ಮಾದರಿ ಪ್ರಮುಖವಾದವು. ಇವರು ಕೆತ್ತಿದ ಮೈಸೂರು ಅರಮನೆ ಕಲಾಕೃತಿಯನ್ನು ಮೈಸೂರು ಅರಮನೆಯಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ. ಶ್ರೀರಂಗಪಟ್ಟಣದ ಕೋಟೆಯ ಮಾದರಿಯನ್ನೂ ಅಲ್ಲಿನ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ.

(ರಾಜ್‌ಕುಮಾರ್‌ ಕೆತ್ತಿದ ಮೈಸೂರು ಅರಮನೆ ಮಾದರಿ)

ಇವರು ತಯಾರಿಸುವ ಕಲಾಕೃತಿಗಳು ಮೂಲ ಮಾದರಿಯ ವಾಸ್ತುಶಿಲ್ಪದಂತೆ ತಯಾರಿಸಿರುವುದು ವಿಶೇಷ.  ಕಟ್ಟಡದ ಸುತ್ತಮುತ್ತ ಪ್ರಕೃತಿ ಸೌಂದರ್ಯ, ರಸ್ತೆಗಳು,ಗಿಡಮರಗಳು, ಹುಲ್ಲು ಹಾಸು ಮತ್ತು ರಸ್ತೆಗಳಲ್ಲಿ ಸಹಜವಾಗಿ ವಾಹನಗಳು ಸಂಚರಿಸುವಂತೆ ಸುಂದರ ನೋಟದೊಂದಿಗೆ ಕಂಗೊಳಿಸುವಂತೆ ಕಲಾಕೃತಿಗಳನ್ನು ತಯಾರಿಸುವಲ್ಲಿ ಇವರು ನಿಪುಣರು. ಪ್ರತಿಕೃತಿಗಳನ್ನು ಬೇಕಾದೆಡೆಗೆ ಸುರಕ್ಷಿತವಾಗಿ ಸಾಗಿಸಲೂಬಹುದು.

ಕಟ್ಟಡದ ಮಾದರಿಗಳನ್ನು ನಿರ್ಮಿಸುವುದಲ್ಲದೇ ಗಾಯನ, ಚಿತ್ರಕಲೆ, ಕುಶಲಕಲೆ, ಅಭಿನಯ, ಏಕಪಾತ್ರಾಭಿನಯ, ವೃತ್ತಪತ್ರಿಕೆಯಲ್ಲಿ ಪ್ರಕಟವಾಗುವ ಆರೋಗ್ಯ, ಯೋಗಾಸನ, ಆಯುರ್ವೇದ ಔಷಧಿ, ಸುಭಾಷಿತ, ನಗೆ ಚಟಾಕಿ, ಇನ್ನೂ ಅನೇಕ ವಿಷಯಗಳ ಬಗ್ಗೆ ಲೇಖನಗಳನ್ನು ಸಂಗ್ರಹಿಸುವುದು, ಪುಸ್ತಕಗಳನ್ನು ಓದುವುದು, ಬರೆಯುವುದು ಇವರ ಇತರ ಹವ್ಯಾಸಗಳಾಗಿವೆ.

ಸಂಪರ್ಕಕ್ಕೆ– 99454 69973, 99029 49795

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !