ಬುಧವಾರ, ಆಗಸ್ಟ್ 4, 2021
24 °C
ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಹೇಳಿಕೆ : ವಿವಾದದಿಂದ ಅಂತರ

ರಫೇಲ್ ಸರ್ಕಾರ–ಸರ್ಕಾರಗಳ ನಡುವಣ ಒಪ್ಪಂದ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ವಿಶ್ವಸಂಸ್ಥೆ: ‘ರಫೇಲ್ ಪೂರ್ಣಪ್ರಮಾಣದಲ್ಲಿ ಫ್ರಾನ್ಸ್ ಸರ್ಕಾರ ಮತ್ತು ಭಾರತ ಸರ್ಕಾರದ ನಡುವಣ ಒಪ್ಪಂದ. ಇದು ಕೇವಲ ಕೈಗಾರಿಕಾ ಒಪ್ಪಂದವಲ್ಲ. ಎರಡೂ ದೇಶಗಳ ನಡುವಣ ಸೇನೆ ಮತ್ತು ರಕ್ಷಣಾ ಕಾರ್ಯತಂತ್ರದ ಭಾಗ’ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ‘ರಫೇಲ್ ಒಪ್ಪಂದದಲ್ಲಿ ಭಾರತೀಯ ಪಾಲುದಾರನಾಗಿ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಭಾರತ ಸರ್ಕಾರ ಒತ್ತಾಯಿಸಿತ್ತೇ’ ಎಂದು ಪತ್ರಕರ್ತರು ಮ್ಯಾಕ್ರನ್ ಅವರನ್ನು ಪ್ರಶ್ನಿಸಿದ್ದರು.

‘ರಫೇಲ್ ಒಪ್ಪಂದ ನಡೆದಾಗ ನಾನು ಅಧಿಕಾರದಲ್ಲಿ ಇರಲಿಲ್ಲ. ಹೀಗಾಗಿ ಈ ಒಪ್ಪಂದದ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ ಇಂತಹ ಒಪ್ಪಂದಗಳಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಜಾರಿಯಲ್ಲಿರುವ ನಿಯಮಗಳ ಬಗ್ಗೆ ನನಗೆ ಗೊತ್ತಿದೆ’ ಎಂದು ಮ್ಯಾಕ್ರನ್ ಹೇಳಿದ್ದಾರೆ.

‘ಇದು ಸರ್ಕಾರಗಳ ನಡುವಣ ಒಪ್ಪಂದ ಎಂದು ಭಾರತದ ಪ್ರಧಾನಿ ಸಹ ಕೆಲವೇ ದಿನಗಳ ಹಿಂದೆ ಹೇಳಿದ್ದರು. ನಾನು ಅದನ್ನೇ ಹೇಳುತ್ತೇನೆ’ ಎಂದು ಅವರು ಹೇಳಿದ್ದಾರೆ.

ಆದರೆ ರಫೇಲ್ ಒಪ್ಪಂದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

**

‘56 ಇಂಚಿನ ಎದೆಯ ಮನುಷ್ಯ ಸತ್ಯ ಬಿಚ್ಚಿಡಲಿ’

‘ಬಿಜೆಪಿ ಸರ್ಕಾರ ತನ್ನದೇ ವೈಫಲ್ಯಗಳು ಮತ್ತು ಹಗರಣಗಳ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿದಾಗಲೆಲ್ಲಾ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ. ನನ್ನ ಮೇಲೆ ಆಧಾರರಹಿತವಾಗಿ ಆರೋಪ ಮಾಡುವುದು ಈ ಸರ್ಕಾರಕ್ಕೆ ಅಭ್ಯಾಸವಾಗಿ ಹೋಗಿದೆ’ ಎಂದು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಬರ್ಟ್ ವಾದ್ರಾ ಗೆಳೆಯನ ಕಂಪನಿಗೆ ಪಾಲುದಾರಿಕೆ ಸಿಗಲಿಲ್ಲ ಎಂಬ ಕಾರಣಕ್ಕೆ ಯುಪಿಎ ಸರ್ಕಾರವು ರಫೇಲ್ ಒಪ್ಪಂದವನ್ನು ರದ್ದುಪಡಿಸಿತ್ತು’ ಎಂದು ಬಿಜೆಪಿ ಆರೋಪಿಸಿತ್ತು. ಈ ಆರೋಪಕ್ಕೆ ವಾದ್ರಾ ತಮ್ಮ ಫೇಸ್‌ಬುಕ್‌ ಪೋಸ್ಟ್‌ ಮೂಲಕ ತಿರುಗೇಟು ನೀಡಿದ್ದಾರೆ.

‘ಈ ಸರ್ಕಾರ ಹೇಳಿದ ಸುಳ್ಳುಗಳನ್ನೇ ಪದೇ–ಪದೇ ಹೇಳುತ್ತಿದೆ. ಅವನ್ನು ಕೇಳಿ ಜನರೂ ರೋಸಿ ಹೋಗಿದ್ದಾರೆ. ಬಿಜೆಪಿಯು ತನ್ನ 56 ಇಂಚಿನ ಎದೆಯ ಮನುಷ್ಯನನ್ನು ತಯಾರು ಮಾಡಿ, ದೇಶದ ಜನರ ಎದುರು ಸತ್ಯವನ್ನು ಬಿಚ್ಚಿಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

**

‘ಸ್ಕಿಲ್ ಅಲ್ಲ, ಕಿಲ್ ಇಂಡಿಯಾ’

‘ಪಿ.ಎಂ. ಎಸ್‌–ಕಿಲ್‌ ಇಂಡಿಯಾ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

‘ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್‌ನಿಂದ (ಎಚ್ಎಎಲ್‌) ₹ 30,000 ಕೋಟಿಯನ್ನು ಕಸಿದುಕೊಂಡು, ವಿಮಾನ ತಯಾರಿಕೆಯ ಸ್ಕಿಲ್‌ (ಕೌಶಲ) ಇಲ್ಲದ ವ್ಯಕ್ತಿಗೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ದೇಶದ ಕೋಟ್ಯಂತರ ಕೌಶಲಯುತ ಯುವಜನರು 20 ವರ್ಷಗಳಲ್ಲೇ ಹೆಚ್ಚಿನ ಪ್ರಮಾಣದ ನಿರುದ್ಯೋಗವನ್ನು ಎದುರಿಸುತ್ತಿದ್ದಾರೆ’ ಎಂದು ಟ್ವೀಟ್‌ನಲ್ಲಿ ರಾಹುಲ್ ಕುಟುಕಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು