ನಾಲೆಗೆ ಬಿದ್ದ ಬಸ್‌: 29 ಸಾವು

ಶುಕ್ರವಾರ, ಜೂಲೈ 19, 2019
26 °C

ನಾಲೆಗೆ ಬಿದ್ದ ಬಸ್‌: 29 ಸಾವು

Published:
Updated:
Prajavani

ಆಗ್ರಾ: ಲಖನೌದಿಂದ ದೆಹಲಿಗೆ ಹೊರಟಿದ್ದ ಉತ್ತರ ಪ್ರದೇಶದ ರಾಜ್ಯ ಸಾರಿಗೆ ಸಂಸ್ಥೆಯ ಸ್ಲೀಪರ್‌ ಕೋಚ್‌ ಬಸ್‌ ಆಯತಪ್ಪಿ ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ಸೇತುವೆಯಿಂದ 20 ಅಡಿ ಆಳದ ದೊಡ್ಡ ನಾಲೆಗೆ ಬಿದ್ದಿದ್ದರಿಂದ 29 ಮಂದಿ ಮೃತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ. 

ಆಗ್ರಾ ಜಿಲ್ಲೆಯ ಎತ್ಮದ್‌ಪುರ್‌ ಸಮೀಪ ಸೋಮವಾರ ಬೆಳಿಗ್ಗೆ 4.30ಕ್ಕೆ ಈ ಅಪಘಾತ ನಡೆದಿದೆ. ಅತಿ ವೇಗವಾಗಿ ಹೊರಟಿದ್ದ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಬಸ್ಸು 6 ರಿಂದ 8 ಅಡಿಯಷ್ಟು ನೀರಿದ್ದ ನಾಲೆಗೆ ಬಿದ್ದಿದೆ. ಹೆಚ್ಚಿನ ಪ್ರಯಾಣಿಕರು ನಿದ್ರೆಯಲ್ಲಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕ್ರೇನ್‌ಗಳ ಸಹಾಯದಿಂದ ಬಸ್ಸನ್ನು ನಾಲೆಯಿಂದ ಮೇಲಕ್ಕೆತ್ತಲಾಯಿತು. 

ತನಿಖೆಗೆ ಸೂಚನೆ: ಅಪಘಾತಕ್ಕೆ ಕಾರಣವೇನು ಎಂಬುದರ ಪತ್ತೆಗಾಗಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಿರ್ದೇಶಿಸಿದ್ದಾರೆ. 24 ಗಂಟೆಯೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ತನಿಖೆಗೆ ಸಾರಿಗೆ ಆಯುಕ್ತ, ವಿಭಾಗೀಯ ಆಯುಕ್ತ ಹಾಗೂ ಪೊಲೀಸ್‌ ಮಹಾನಿರೀಕ್ಷಕರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಇಂಥ ಅಪಘಾತಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಶಿಫಾರಸುಗಳನ್ನು ಸಹ ತಿಳಿಸಬೇಕು ಎಂದು ಸಮಿತಿಗೆ ಸೂಚಿಸಲಾಗಿದೆ.

ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರವನ್ನು ಸಾರಿಗೆ ಇಲಾಖೆ ಘೋಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !