ಉತ್ತರ ಪ್ರದೇಶದಲ್ಲಿ ನಕಲಿ ಎನ್‌ಕೌಂಟರ್: ಮೂವರು ಪೊಲೀಸರ ಅಮಾನತು

7
ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ

ಉತ್ತರ ಪ್ರದೇಶದಲ್ಲಿ ನಕಲಿ ಎನ್‌ಕೌಂಟರ್: ಮೂವರು ಪೊಲೀಸರ ಅಮಾನತು

Published:
Updated:

ಲಖನೌ: ನಕಲಿ ಎನ್‌ಕೌಂಟರ್ ನಡೆಸಿದ ಆರೋಪದಲ್ಲಿ ಉತ್ತರ ‍ಪ್ರದೇಶದಲ್ಲಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಲಂಚಕ್ಕಾಗಿ, ಪ್ರಚಾರ ಮತ್ತು ಹಣಕ್ಕಾಗಿ ಪೊಲೀಸರು ನಕಲಿ ಎನ್‌ಕೌಂಟರ್‌ಗಳನ್ನು ಮಾಡುತ್ತಿದ್ದಾರೆ ಎಂದು ಇಂಡಿಯಾ ಟುಡೆ ಟಿವಿ ವರದಿ ಮಾಡಿದೆ. ಇದರ ಬೆನ್ನಲ್ಲೇ ಪೇದೆಗಳನ್ನು ಅಮಾನತು ಮಾಡಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಒ.ಪಿ. ಸಿಂಗ್ ಆದೇಶ ಹೊರಡಿಸಿದ್ದಾರೆ.

ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈವರೆಗೆ ಉತ್ತರ ಪ್ರದೇಶದಲ್ಲಿ ಸುಮಾರು 1,500 ಎನ್‌ಕೌಂಟರ್‌ಗಳನ್ನು ನಡೆಸಲಾಗಿದ್ದು, 60ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಲಾಗಿದೆ. 400ರಷ್ಟು ಜನ ಗಾಯಗೊಂಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಆಗ್ರಾ ಪ್ರದೇಶವೊಂದರಲ್ಲೇ ಸುಮಾರು 241 ಎನ್‌ಕೌಂಟರ್‌ಗಳು ನಡೆದಿವೆ. ಚಿತ್ರಾ ಹಟ್ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಒಬ್ಬರು ಮುಗ್ಧ ನಾಗರಿಕನೊಬ್ಬನನ್ನು ಹತ್ಯೆ ಮಾಡಲು ₹8 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ತನಿಖೆಗೆ ಆದೇಶ: ಮೂವರು ಪೊಲೀಸರನ್ನು ಅಮಾನತು ಮಾಡಿರುವುದನ್ನು ಆಗ್ರಾದ ಎಸ್‌ಎಸ್‌ಪಿ ಅಮಿತ್ ಪಾಠಕ್ ದೃಢಪಡಿಸಿದ್ದಾರೆ. ಹೆಚ್ಚುವರಿ ಎಸ್‌ಪಿ ದರ್ಜೆಯ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಪಕ್ಷಗಳಿಂದ ವಾಗ್ದಾಳಿ

ರಾಜ್ಯದಲ್ಲಿ ನಕಲಿ ಎನ್‌ಕೌಂಟರ್‌ಗಳನ್ನು ನಡೆಸಲಾಗುತ್ತಿದೆ ಎಂದು ಪ್ರತಿಪಕ್ಷಗಳು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

‘ಯೋಗಿ ಸರ್ಕಾರ ಎನ್‌ಕೌಂಟರ್‌ಗಳ ಶ್ರೇಯ ಪಡೆದುಕೊಳ್ಳುವುದರಲ್ಲಿ ನಿರತವಾಗಿದೆ. ಈ ಎನ್‌ಕೌಂಟರ್‌ಗಳು ಅಸಲಿಯಾಗಿದ್ದಿದ್ದಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇರಬೇಕಿತ್ತು’ ಎಂದು ಸಮಾಜವಾದಿ ಪಕ್ಷದ ವಕ್ತಾರ ಸುನಿಲ್ ಸಜನ್ ಹೇಳಿದ್ದಾರೆ.

ಯೋಗಿ ನೇತೃತ್ವದ ಸರ್ಕಾರ ನಡೆಸುತ್ತಿರುವ ಎನ್‌ಕೌಂಟರ್‌ಗಳೆಲ್ಲವೂ ನಕಲಿ. ಜನರಲ್ಲಿ ಭೀತಿ ಸೃಷ್ಟಿಸಲು ಎನ್‌ಕೌಂಟರ್‌ಗಳನ್ನು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಇನ್ನಷ್ಟು...

ಉತ್ತರ ಪ್ರದೇಶ: 48 ಗಂಟೆಗಳಲ್ಲಿ 15 ಎನ್‌ಕೌಂಟರ್‌, 24 ಮಂದಿ ಬಂಧನ

ನಕಲಿ ಎನ್‌ಕೌಂಟರ್ ಪ್ರಕರಣ: ಉತ್ತರ ಪ್ರದೇಶಕ್ಕೆ ಅಗ್ರ ಸ್ಥಾನ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !