ಆಂಧ್ರಪ್ರದೇಶದಲ್ಲಿ ಅಬ್ಬರಿಸಿದ ತಿತ್ಲಿ: 8 ಮಂದಿ ಬಲಿ

7
ಒಡಿಶಾದಲ್ಲಿ 3 ಲಕ್ಷ ಮಂದಿ ಸ್ಥಳಾಂತರ, ಆಂಧ್ರಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತ

ಆಂಧ್ರಪ್ರದೇಶದಲ್ಲಿ ಅಬ್ಬರಿಸಿದ ತಿತ್ಲಿ: 8 ಮಂದಿ ಬಲಿ

Published:
Updated:
Deccan Herald

ನವದೆಹಲಿ: ಅತ್ಯುಗ್ರ ಎಂದು ಕರೆಸಿಕೊಂಡಿರುವ ‘ತಿತ್ಲಿ’ ಚಂಡಮಾರುತ ಒಡಿಶಾದ ಗೋಪಾಲಪುರ ಸಮೀಪ ಭೂಮಿಗೆ ಅಪ್ಪಳಿಸಿತು. ರಾಜ್ಯದಲ್ಲಿ ಸುಮಾರು 3 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ, ಆಂಧ್ರಪ್ರದೇಶದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಗುರುವಾರ ತಿಳಿಸಿದೆ.

‘ಉತ್ತರ ಆಂಧ್ರಪ್ರದೇಶ ಹಾಗೂ ದಕ್ಷಿಣ ಒಡಿಶಾದ ಕರಾವಳಿ ತೀರ ಗೋಪಾಲಪುರಕ್ಕೆ ಮುಂಜಾನೆ 5.30ಕ್ಕೆ ತಿತ್ಲಿ ಚಂಡಮಾರುತವು 150 ಕಿ.ಮೀ. ವೇಗದಲ್ಲಿ ಅಪ್ಪಳಿಸಿತು’ ಎಂದು ಗೃಹ ಇಲಾಖೆ ಪ್ರಕಟಿಸಿರುವ ಪ್ರಕಟನೆಯಲ್ಲಿ ತಿಳಿಸಿದೆ.

ಒಡಿಶಾದ ಗಂಜಾಂ, ಖೋರ್ದಾ, ಪುರಿ, ಗಜಪತಿ, ಜಗತ್‌ಸಿಂಹಪುರ್‌, ಕೇಂದ್ರಪಾರಾ, ಭದ್ರಕ್‌ ಹಾಗೂ ಬಲಸೋರ್‌ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಗಿದೆ.

ರಾಜ್ಯದ 30 ಜಿಲ್ಲೆಗಳಲ್ಲಿ ತುರ್ತು ನಿರ್ವಹಣಾ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಅನಾಹುತವನ್ನು ಎದುರಿಸಲು 30 ಪವರ್‌ಬೋಟ್‌ಗಳನ್ನು ಸನ್ನದ್ಧಸ್ಥಿತಿಯಲ್ಲಿಡಲಾಗಿದೆ.

3 ಲಕ್ಷ ಮಂದಿ ಸ್ಥಳಾಂತರ: ರಾಜ್ಯದಾದ್ಯಂತ 3 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, 879 ಪರಿಹಾರ ಕೇಂದ್ರಗಳಲ್ಲಿ ಇವರಿಗೆ ಆಶ್ರಯ ಕಲ್ಪಿಸಲಾಗಿದೆ. 

‘ಗಂಜಾಂನಲ್ಲಿ 105 ಹಾಗೂ ಜಗತ್‌ಸಿಂಗ್‌ಪುರ್‌ ಜಿಲ್ಲೆಯಲ್ಲಿ 18 ಗರ್ಭಿಣಿಯರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ’ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಎಲ್ಲ ಶಾಲಾ– ಕಾಲೇಜುಗಳಿಗೆ ಶುಕ್ರವಾರದವರೆಗೂ ರಜೆ ಘೋಷಿಸಲಾಗಿದೆ.  ಒಡಿಶಾದ ದಕ್ಷಿಣ ಕರಾವಳಿ, ಆಂಧ್ರ ಪ್ರದೇಶದ ಉತ್ತರ ಕರಾವಳಿ ಮತ್ತು ಪಶ್ಚಿಮ ಬಂಗಾಳದ ಕೆಲ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರಗಳು ಕಟ್ಟೆಚ್ಚರ ಘೋಷಿಸಿದೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್) 1000 ಸಿಬ್ಬಂದಿಯನ್ನು ಮೂರೂ ರಾಜ್ಯಗಳಿಗೆ ಕಳಿಸಿಕೊಟ್ಟಿದೆ.

ಎರಡು ಜಿಲ್ಲೆಗಳಲ್ಲಿ ಭಾರಿ ಹಾನಿ

ಅಮರಾವತಿ: ಅತ್ಯಂತ ಅಪಾಯಕಾರಿಯಾದ ‘ತಿತ್ಲಿ’ ಚಂಡಮಾರುತಕ್ಕೆ ಆಂಧ್ರಪ್ರದೇಶದ ಶ್ರೀಕಾಕುಳಂ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಆಸ್ತಿಪಾಸ್ತಿಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಬಿರುಗಾಳಿಯಿಂದ ಎರಡು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬುಧವಾರ ರಾತ್ರಿಯಿಂದಲೇ ನಿರಂತರ ಮಳೆಯಾಗುತ್ತಿದೆ.

‘ಶ್ರೀಕಾಕುಳಂ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ‍್ಪಿದ್ದಾರೆ, ಸಮುದ್ರದಲ್ಲಿ ದೋಣಿ ಮುಳುಗಡೆಯಾಗಿ ಆರು ಮಂದಿ ಮೀನುಗಾರರು ಮೃತಪಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಕಚೇರಿಯ (ಸಿಎಂಒ) ಅಧಿಕಾರಿಗಳು ತಿಳಿಸಿದ್ದಾರೆ.

‘ಕಾಕಿನಾಡ, ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ 67 ಬೋಟ್‌ಗಳ ಪೈಕಿ 65 ಹಿಂತಿರುಗಿದ್ದು, ಇನ್ನೆರಡು ಬೋಟ್‌ಗಳನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ಸಿಎಂಒ ತಿಳಿಸಿದೆ.

ಸಂಚಾರ ಅಸ್ತವ್ಯಸ್ತ: ಶ್ರೀಕಾಕುಳಂ ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ರಸ್ತೆಗಳು ಬಿರುಕುಬಿಟ್ಟಿದ್ದು, ವಿದ್ಯುತ್‌, ದೂರವಾಣಿ ಸಂಪರ್ಕ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯ 4,319 ಗ್ರಾಮಗಳು ಹಾಗೂ ಆರು ಪಟ್ಟಣಗಳಲ್ಲಿ ವಿದ್ಯುತ್‌ ವ್ಯತ್ಯಯಗೊಂಡಿದೆ ಎಂದು ಈಸ್ಟರ್ನ್‌ ಪವರ್‌ ಡಿಸ್ಟ್ರಿಬ್ಯೂಷನ್‌ ಕಂಪನಿ ತಿಳಿಸಿದೆ. ಚೆನ್ನೈ–ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಕಡೆಗಳಲ್ಲಿ ಮರಗಳು ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ. 

ದಕ್ಷಿಣ ಮಧ್ಯರೈಲ್ವೆ ಹಾಗೂ ಪೂರ್ವ ರೈಲ್ವೆ ಭಾಗದಲ್ಲಿ ಮಧ್ಯರಾತ್ರಿಯಿಂದಲೇ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ತಿತ್ಲಿ ಎಂದರೇನು ?

ಹಿಂದಿಯಲ್ಲಿ ‘ತಿತ್ಲಿ’ ಎಂದರೆ ಚಿಟ್ಟೆ ಎಂದು ಅರ್ಥ. ಈ ಚಂಡಮಾರುತವನ್ನು ಹವಾಮಾನ ಇಲಾಖೆಯು ‘ಅತ್ಯುಗ್ರ’ (very severe cyclonic storm) ಎಂದು ವರ್ಗೀಕರಿಸಿದೆ. ಮುಂಜಾಗ್ರತ ಕ್ರಮವಾಗಿ ಸಮುದ್ರ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !