ಭಾನುವಾರ, ಮೇ 31, 2020
27 °C

ಜಮ್ಮು, ಕಾಶ್ಮೀರ ನಾಗರಿಕರಿಗೆ ವಿಶೇಷಾಧಿಕಾರ: ‘ಸುಪ್ರೀಂ’ನಲ್ಲಿ ಇಂದು ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷಾಧಿಕಾರ ನೀಡಿರುವ ಸಂವಿಧಾನದ ಕಲಂ 35–ಎ ಪ್ರಶ್ನಿಸಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ನಡೆಯಲಿದೆ.

ಕಲಂ 35–ಎ ಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸ್ವಯಂಸೇವಾ ಸಂಸ್ಥೆಯೊಂದು ಅರ್ಜಿ ಸಲ್ಲಿಸಿತ್ತು. ಬಲಪಂಥೀಯ ಸಂಘಟನೆಗಳ ಬೆಂಬಲದೊಂದಿಗೆ ಈ ಅರ್ಜಿ ಸಲ್ಲಿಕೆಯಾಗಿದೆ.

ಏನಿದು ಕಲಂ 35–ಎ?

ಇದು ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದ್ದು. 35–ಎ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿಲ್ಲ. ಅಲ್ಲದೆ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು. ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ. ಆದರೆ, ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ. ಜತೆಗೆ, ಆತನ ಪತ್ನಿಗೂ ಈ ಎಲ್ಲ ಹಕ್ಕುಗಳು ಪ್ರಾಪ್ತವಾಗುತ್ತವೆ. ಸಂವಿಧಾನಕ್ಕೆ ಈ ಕಲಂ ಸೇರ್ಪಡೆಯಾಗಿದ್ದು ಕೂಡ ಸಂಸತ್ತಿನ ನಿರ್ಣಯದ ಮೂಲಕ ಅಲ್ಲ. ಬದಲಿಗೆ, ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಇರುವ ವಿಶೇಷಾಧಿಕಾರ ಬಳಸಿ ರಾಷ್ಟ್ರಪತಿ ಹೊರಡಿಸಿದ ಅಧಿಸೂಚನೆಯ ಮೂಲಕ. 1954ರಲ್ಲಿ ರಾಷ್ಟ್ರಪತಿಗಳು ಅಧಿಸೂಚನೆ ಹೊರಡಿಸಿದ್ದರು.

ಅರ್ಜಿದಾರರ ವಾದವೇನು?

ದೇಶದ ಯಾವುದೇ ಭಾಗದಲ್ಲಿ ಆಸ್ತಿ ಹೊಂದಲು ಮತ್ತು ವಾಸ ಮಾಡಲು ಭಾರತದ ನಾಗರಿಕರಿಗೆ ಮೂಲಭೂತ ಹಕ್ಕಿದೆ. ಇದನ್ನು 35–ಎ ಉಲ್ಲಂಘಿಸುತ್ತದೆ. ಅಲ್ಲದೆ, ದೇಶದ ಸಂವಿಧಾನಕ್ಕೆ ಸಂಸತ್‌ನಲ್ಲಿ ಮಾತ್ರ ತಿದ್ದುಪಡಿ ತರಲು ಸಾಧ್ಯ. ಆದರೆ 35–ಎಯನ್ನು ಸಂಸತ್‌ನ ಹೊರಗೆ, ರಾಷ್ಟ್ರಪತಿಗಳು ವಿಶೇಷಾಧಿಕಾರ ಬಳಸಿ ಅಧಿಸೂಚನೆ ಹೊರಡಿಸಿದ್ದಾರೆ ಎಂಬುದು ಅರ್ಜಿದಾರರ ವಾದವಾಗಿದೆ.

ರಾಜ್ಯದವರ ವಾದವೇನು?

35–ಎ ರದ್ದಾದರೆ ಇಡೀ ರಾಜ್ಯದ ಜನಸಂಖ್ಯೆ ಮತ್ತು ಜನಾಂಗೀಯ ಸ್ವರೂಪವೇ ಏರುಪೇರಾದೀತು ಎಂಬುದು ಅಲ್ಲಿನವರ ಆತಂಕ. 35–ಎ ರದ್ದುಪಡಿಸುವುದಕ್ಕೆ ಪ್ರತ್ಯೇಕತಾವಾದಿ ಸಂಘಟನೆಗಳೂ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಕಾಶ್ಮೀರ ಬಂದ್‌, ಜನಜೀವನ ಅಸ್ತವ್ಯಸ್ತ

ಕಲಂ 35–ಎ ಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಮುಂದಾಗಿರುವುದನ್ನು ಪ್ರತಿಭಟಿಸಿ ಪ್ರತ್ಯೇಕವಾದಿಗಳು ಕರೆ ನೀಡಿದ್ದ ಎರಡು ದಿನಗಳ ಬಂದ್‌ಗೆ ಭಾನುವಾರ ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು