ಮಧ್ಯಪ್ರದೇಶದಲ್ಲಿ ಗಜ ಕುಟುಂಬಗಳಿಗೆ 7 ದಿನಗಳ ಪಿಕ್‌ನಿಕ್‌

7

ಮಧ್ಯಪ್ರದೇಶದಲ್ಲಿ ಗಜ ಕುಟುಂಬಗಳಿಗೆ 7 ದಿನಗಳ ಪಿಕ್‌ನಿಕ್‌

Published:
Updated:
Deccan Herald

ಭೋಪಾಲ್‌: ರಜೆ ಬಂತೆಂದರೆ ’ಪಿಕ್‌ನಿಕ್‌, ಪಿಕ್‌ನಿಕ್‌..’ ಎಂದು ಹಠ ಹಿಡಿಯುವ ಮಕ್ಕಳು, ನಿತ್ಯದ ಕೆಲಸಗಳಿಂದ ದಿನವಾದರೂ ಬಿಡುವು ಸಿಗುವ ಬಯಕೆ ಹೊತ್ತ ಮನೆಯವರು, ಹೀಗೆ ಪಿಕ್‌ನಿಕ್‌ ಒಂದಲ್ಲಾ ಒಂದು ರೀತಿ ಬಹುತೇಕರಿಗೆ ಅಚ್ಚುಮೆಚ್ಚು. ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಸಹ ಪಿಕ್‌ನಿಕ್‌ ಬಲು ಪ್ರಿಯ. ಹಾಗಾಗಿಯೇ ಮಧ್ಯಪ್ರದೇಶದಲ್ಲಿ ಆನೆಗಳಿಗಾಗಿಯೇ 7 ದಿನಗಳ ಪಿಕ್‌ನಿಕ್‌ ಆಯೋಜಿಸಲಾಗಿದೆ. 

ಕಾನ್ಹಾ ನ್ಯಾಷನಲ್‌ ಪಾರ್ಕ್‌ನಲ್ಲಿ ಆನೆಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಜತೆಯಾಗಿ ಕಾಲ ಕಳೆಯಲು ಏಳು ದಿನಗಳ ಈ ಪಿಕ್‌ನಿಕ್‌ ಆಯೋಜಿಸಿರುವುದಾಗಿ ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಸುತ್ತಲಿನ ಜಾಗದಲ್ಲಿ ಓಡಾಡುತ್ತ ವಿರಮಿಸುವುದು ಮಾತ್ರವಲ್ಲದೇ ಗಜ ಕುಟುಂಬಗಳಿಗೆ ಭರ್ಜರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಒಂದು ವಾರದ ಸಮಯದಲ್ಲಿ ಆನೆಗಳಿಗೆ ತಲೆ ಮತ್ತು ದೇಹಕ್ಕೆ ಮಸಾಜ್‌ ಹಾಗೂ ಆರೋಗ್ಯ ತಪಾಸಣೆ ಕೂಡ ನಡೆಯುತ್ತಿದೆ. 

ಪ್ರತಿ ವರ್ಷವೂ ನಡೆಯುವ ಆನೆಗಳ ಪಿಕ್‌ನಿಕ್‌ ಯಾ ಆರೋಗ್ಯ ಶಿಬಿರದಲ್ಲಿ ಆನೆಗಳು ಇಷ್ಟ ಪಡುವಂತಹ ಆಹಾರದ ಪಟ್ಟಿ ಸಿದ್ಧಪಡಿಸಿ, ಅದರಂತೆ ನಿತ್ಯವೂ ಭಿನ್ನ ಆಹಾರ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಮಧ್ಯಪ್ರದೇಶದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನ ಕಾನ್ಹಾ, ಹುಲಿ ಸಂರಕ್ಷಿತ ಪ್ರದೇಶವಾಗಿಯೂ ಗುರುತಿಸಿಕೊಂಡಿದೆ. 1955ರಲ್ಲಿ ಅಧಿಕೃತವಾಗಿ ಸ್ಥಾಪನೆಯಾದ ರಾಷ್ಟ್ರೀಯ ಉದ್ಯಾನದಲ್ಲಿ ಬಂಗಾಳದ ಹುಲಿ, ಇಂಡಿಯನ್‌ ಲೆಪರ್ಡ್‌, ಕರಡಿ, ಕಾಡು ನಾಯಿಗಳು, ಜಿಂಕೆ(ಬರಸಿಂಗ)ಗಳನ್ನು ಕಾಣಬಹುದು. 

 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !