ಬುಧವಾರ, ಜೂನ್ 3, 2020
27 °C
ನೋಟು ರದ್ದತಿ: ಆರ್‌ಬಿಐ ವಾರ್ಷಿಕ ವರದಿಯಲ್ಲಿ ಸ್ಪಷ್ಟ ಚಿತ್ರಣ

ಶೇ 99.3ರಷ್ಟು ನೋಟು ಬ್ಯಾಂಕಿಗೆ ವಾಪಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಕೇಂದ್ರ ಸರ್ಕಾರವು 2016ರಲ್ಲಿ ರದ್ದು ಮಾಡಿದ ₹500 ಮತ್ತು ₹1,000 ಮುಖಬೆಲೆಯ ನೋಟುಗಳ ಪೈಕಿ ಶೇ 99.3ರಷ್ಟು ಬ್ಯಾಂಕುಗಳಿಗೆ ವಾಪಸಾಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬುಧವಾರ ಹೇಳಿದೆ. 

ಕಪ್ಪುಹಣ  ಮತ್ತು ಭ್ರಷ್ಟಾಚಾರವನ್ನು ತಡೆಯುವ ಉದ್ದೇಶದಿಂದ ನೋಟು ರದ್ದತಿಯ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಆದರೆ, ಅತ್ಯಲ್ಪ ಪ್ರಮಾಣದ ನೋಟುಗಳು ಮಾತ್ರ ಬ್ಯಾಂಕುಗಳಿಗೆ ವಾಪಸಾಗಿಲ್ಲ. 

ಬ್ಯಾಂಕುಗಳಿಗೆ ವಾಪಸಾದ ನೋಟುಗಳನ್ನು ಲೆಕ್ಕ ಮಾಡಲು ಆರ್‌ಬಿಐ ಸುದೀರ್ಘ ಸಮಯ ತೆಗೆದುಕೊಂಡಿತ್ತು. ಈ ಬಗ್ಗೆಯೂ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕೊನೆಗೂ, 2017–18ರ ವಾರ್ಷಿಕ ವರದಿಯಲ್ಲಿ ವಾಪಸ್‌ ಬಂದಿರುವ ನೋಟುಗಳ ಪ್ರಮಾಣವನ್ನು ಆರ್‌ಬಿಐ ದಾಖಲಿಸಿದೆ. 

ನೋಟು ರದ್ದತಿಯ ನಂತರ ರದ್ದಾದ ನೋಟುಗಳನ್ನು ಬ್ಯಾಂಕುಗಳಿಗೆ ಹಿಂದಿರುಗಿಸಲು ಅಥವಾ ಠೇವಣಿ ಇರಿಸಲು ಅವಕಾಶ ನೀಡಲಾಗಿತ್ತು. ಆದರೆ, ಭಾರಿ ಮೊತ್ತದ ಠೇವಣಿಯ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿರಿಸಿತ್ತು. 

‘ನೋಟುಗಳ ಎಣಿಕೆ ಮತ್ತು ಪರಿಶೀಲನೆಯ ಬೃಹತ್‌ ಕೆಲಸವನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ನೋಟುಗಳು ಅಸಲಿಯೇ ಎಂಬುದರ ಪರಿಶೀಲನೆಗೆ ಮತ್ತು ಲೆಕ್ಕದ ನಿಖರತೆಗಾಗಿ ಅತ್ಯಾಧುನಿಕ ಮತ್ತು ಅತಿ ವೇಗದ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗಿತ್ತು’ ಎಂದು ಆರ್‌ಬಿಐ ಹೇಳಿದೆ. 

ಖೋಟಾ ನೋಟು ಇಳಿಕೆ: ಕಪ್ಪುಹಣ, ಭ್ರಷ್ಟಾಚಾರ ಮತ್ತು ಖೋಟಾ ನೋಟು ತಡೆಗಾಗಿ ನೋಟು ರದ್ದತಿ ಮಾಡಲಾಗಿತ್ತು. ನೋಟು ರದ್ದತಿಯ ಬಳಿಕ ಖೋಟಾ ನೋಟು ಪತ್ತೆಯ ಪ್ರಮಾಣ ಇಳಿಕೆಯಾಗಿದೆ. ₹500 ಮುಖಬೆಲೆ ಖೋಟಾ ನೋಟು ಪತ್ತೆ ಶೇ 59.7ರಷ್ಟು ಮತ್ತು ₹1,000 ಮುಖಬೆಲೆಯ ಖೋಟಾ ನೋಟು ಪತ್ತೆ ಶೇ 59.6ರಷ್ಟು ಇಳಿಕೆಯಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ₹100 ಮತ್ತು ₹50 ಮುಖಬೆಲೆಯ ಖೋಟಾ ನೋಟುಗಳು ಪತ್ತೆಯಾದ ಪ್ರಮಾಣದಲ್ಲಿ ಏರಿಕೆಯಾಗಿದೆ. ₹100 ಮುಖಬೆಲೆಯ ಖೋಟಾ ನೋಟು ಪತ್ತೆ ಪ್ರಮಾಣ ಶೇ 34ರಷ್ಟು ಮತ್ತು ₹50 ಮುಖಬೆಲೆಯ ಖೋಟಾ ನೋಟು ಪತ್ತೆ ಪ್ರಮಾಣ ಶೇ 154.3ರಷ್ಟು ಹೆಚ್ಚಳವಾಗಿದೆ. 2017–18ರಲ್ಲಿ ₹500 ಮುಖಬೆಲೆಯ 9,892 ಮತ್ತು ₹2,000 ಮುಖಬೆಲೆಯ 17,929 ಖೋಟಾ ನೋಟುಗಳು ಪತ್ತೆಯಾಗಿವೆ ಎಂದು ಆರ್‌ಬಿಐ ವರದಿಯಲ್ಲಿ ಹೇಳಲಾಗಿದೆ.

2016ರ ನವೆಂಬರ್‌ 8ರಂದು ನೋಟು ರದ್ದತಿ

ರದ್ದಾದ ನೋಟುಗಳನ್ನು ಬ್ಯಾಂಕುಗಳಿಗೆ ಹಿಂದಿರುಗಿಸಲು ಆ ವರ್ಷ ಡಿಸೆಂಬರ್‌ 30ರವರೆಗೆ ಅವಕಾಶ ನೀಡಲಾಗಿತ್ತು

₹15.41 ಲಕ್ಷ ಕೋಟಿ

ರದ್ದತಿ ನಿರ್ಧಾರ ಘೋಷಿಸಿದಾಗ ಚಲಾವಣೆಯಲ್ಲಿದ್ದ ₹500 ಮತ್ತು ₹1,000 ಮುಖಬೆಲೆಯ ನೋಟುಗಳ ಮೌಲ್ಯ

₹15.31 ಲಕ್ಷ ಕೋಟಿ

ಬ್ಯಾಂಕುಗಳಿಗೆ ವಾಪಸಾಗಿರುವ ನೋಟುಗಳ ಮೌಲ್ಯ

₹10,720 ಕೋಟಿ

ಬ್ಯಾಂಕುಗಳಿಗೆ ವಾಪಸಾಗದ ನೋಟುಗಳ ಮೌಲ್ಯ

₹7,965 ಕೋಟಿ

₹500 ಮತ್ತು ₹2,000 ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಆರ್‌ಬಿಐ ವೆಚ್ಚ ಮಾಡಿದ ಮೊತ್ತ (2016–17ರಲ್ಲಿ)

₹4,912 ಕೋಟಿ

2017ರ ಜುಲೈಯಿಂದ 2018ರ ಜೂನ್‌ ವರೆಗೆ ನೋಟು ಮುದ್ರಣಕ್ಕೆ ವೆಚ್ಚವಾದ ಮೊತ್ತ

 

ದೇಶ ತೆತ್ತ ಬೆಲೆ ದೊಡ್ಡದು: ಚಿದಂಬರಂ

ನವದೆಹಲಿ (ಪಿಟಿಐ): ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ ₹13 ಸಾವಿರ ಕೋಟಿ ಮಾತ್ರ ಬ್ಯಾಂಕಿಗೆ ಬಂದಿಲ್ಲ. ಆದರೆ, ಇದಕ್ಕೆ ದೇಶ ಭಾರಿ ಬೆಲೆ ತೆರಬೇಕಾಯಿತು. ಜನರು ಉದ್ಯೋಗ ಕಳೆದುಕೊಂಡರು, ಉದ್ಯಮಗಳು ಮುಚ್ಚಿದವು ಮತ್ತು ಒಟ್ಟು ದೇಶಿ ಉತ್ಪನ್ನ ಇಳಿಕೆಯಾಯಿತು ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ. 

‘ನೋಟು ರದ್ದತಿಯಿಂದಾಗಿ ಭಾರತದ ಜಿಡಿಪಿ ಶೇ 1.5ರಷ್ಟು ಕುಸಿತ ಕಂಡಿತು. ಇದರ ಮೌಲ್ಯವೇ ₹2.25 ಲಕ್ಷ ಕೋಟಿ. ಸುಮಾರು ನೂರು ಜನರು ಪ್ರಾಣ ಕಳೆದುಕೊಂಡರು. 15 ಕೋಟಿಯಷ್ಟು ದಿನಗೂಲಿ ನೌಕರರಿಗೆ ಹಲವು ವಾರ ಕೆಲಸವೇ ಇರಲಿಲ್ಲ. ಸಣ್ಣ ಮತ್ತು ಮಧ್ಯಮ ಗಾತ್ರದ ಸಾವಿರಾರು ಘಟಕಗಳು ಬಾಗಿಲು ಮುಚ್ಚಿದವು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು’ ಎಂದು ಚಿದಂಬರಂ ಅವರು ಟ್ವೀಟ್‌ ಮಾಡಿದ್ದಾರೆ. 

ಬ್ಯಾಂಕಿಗೆ ಬಾರದೇ ಇರುವ ₹13 ಸಾವಿರ ಕೋಟಿಯಲ್ಲಿ ಬಹುತೇಕ ನೋಟುಗಳು ನೇಪಾಳ ಮತ್ತು ಭೂತಾನ್‌ನಲ್ಲಿ ಇರಬಹುದು. ಸ್ವಲ್ಪ ಪ್ರಮಾಣದ ನೋಟುಗಳು ಹಾಳಾಗಿ ಹೋಗಿರಬಹುದು ಎಂದು ಅವರು ಅಂದಾಜಿಸಿದ್ದಾರೆ. 

 

* ನೋಟು ರದ್ದತಿಯಿಂದಾಗಿ ಜನರು ಭಾರಿ ಕಷ್ಟಪಟ್ಟರು. ಇದರಿಂದಾದ ಸಾಧನೆ ಏನು ಎಂಬುದನ್ನು ತಿಳಿಯುವ ಹಕ್ಕು ಜನರಿಗೆ ಇದೆ. ನೋಟು ರದ್ದತಿಯ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು

–ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

* ₹3 ಲಕ್ಷ ಕೋಟಿ ಮೌಲ್ಯದ ನೋಟುಗಳು ಬ್ಯಾಂಕುಗಳಿಗೆ ವಾಪಸ್‌ ಬರುವುದೇ ಇಲ್ಲ. ಅದು ಸರ್ಕಾರಕ್ಕೆ ಆಗುವ ಲಾಭ ಎಂದು ಒಬ್ಬರು ಹೇಳಿದ್ದರು

–ಪಿ. ಚಿದಂಬರಂ, ಕಾಂಗ್ರೆಸ್ ಮುಖಂಡ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು