ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ–ಮಗನ ಮಾತಿನಲ್ಲೂ ಅರ್ಥಶಾಸ್ತ್ರ...

‘ಅತ್ಯಂತ ಸಂಕೀರ್ಣವಾದ ವಿಚಾರಗಳನ್ನು ಸರಳವಾಗಿ ತಿಳಿಸಿಕೊಡುವಂಥ ಸಾಮರ್ಥ್ಯ ನನ್ನ ಮಗನಲ್ಲಿದೆ’
Last Updated 14 ಅಕ್ಟೋಬರ್ 2019, 20:23 IST
ಅಕ್ಷರ ಗಾತ್ರ

ಕೋಲ್ಕತ್ತ: ಮಧ್ಯಾಹ್ನ ಸುಮಾರು 2.30ರ ಸಮಯ, ನಿರ್ಮಲಾ ಬ್ಯಾನರ್ಜಿ ಅವರು ದಕ್ಷಿಣ ಕೋಲ್ಕತ್ತದಲ್ಲಿರುವ ತಮ್ಮ ಮನೆಯಲ್ಲಿ ಅಧ್ಯಯನದಲ್ಲಿ ತೊಡಗಿದ್ದರು. ಅವರ ಫೋನ್‌ ಸದ್ದು ಮಾಡಿತು. ಅದು ಅವರ ಕಿರಿಯ ಪುತ್ರ ಮಾಡಿದ ಕರೆಯಾಗಿತ್ತು. ‘ಅಣ್ಣನಿಗೆ ನೊಬೆಲ್‌ ಪ್ರಶಸ್ತಿ ಬಂದಿದೆ’ ಎಂದು ಅವರು ನಿರ್ಮಲಾ ಅವರಿಗೆ ತಿಳಿಸಿದರು.

ಆ ಕರೆ ಬರುವವರೆಗೂ ತಮ್ಮ ಪುತ್ರನಿಗೆ ನೊಬೆಲ್‌ ಪ್ರಶಸ್ತಿ ಘೋಷಣೆಯಾಗಿದೆಎಂಬ ಸುದ್ದಿ ನಿರ್ಮಲಾಗೆ ತಿಳಿದಿರಲಿಲ್ಲ. ‘ಟಿ.ವಿ. ನೋಡು' ಎಂದು ಪುತ್ರ ಹೇಳಿದ. ಆಗತಾನೇ ಮಾಧ್ಯಮಗಳು ‘ಅಭಿಜಿತ್‌ಗೆ ನೊಬೆಲ್‌ ಪುರಸ್ಕಾರ’ ಎಂಬ ಸುದ್ದಿ ಬಿತ್ತರಿಸಲು ಆರಂಭಿಸಿದ್ದವು’ ಎಂದು ನಿರ್ಮಲಾ ಅವರು ತಮ್ಮ ಮನೆಗೆ ಬಂದಿದ್ದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಹೇಳಿದರು.

‘ನಾನಿನ್ನೂ ಆತನ ಜೊತೆ ಮಾತನಾಡಿಲ್ಲ. ಪ್ರಸಕ್ತ ಆತ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಆದರೆ ಅಭಿಜಿತ್‌ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ’ ಎಂದು ಅವರು ಹೇಳಿದರು.

ನಿರ್ಮಲಾ ಅರ್ಥಶಾಸ್ತ್ರದ ನಿವೃತ್ತ ಪ್ರಾಧ್ಯಾಪಕಿ. ಆದರೂ ‘ಅರ್ಥಶಾಸ್ತ್ರವನ್ನೇ ಕಲಿ’ ಎಂದು ಪುತ್ರನಿಗೆ ಒತ್ತಾಯ ಮಾಡಿದವರಲ್ಲ. ‘ಶಿಕ್ಷಣದ ವಿಚಾರದಲ್ಲಿ ಕೈ ಹಿಡಿದು ಮಕ್ಕಳನ್ನು ಮುನ್ನಡೆಸುವುದು ನನ್ನ ಸ್ವಭಾವವಲ್ಲ’ ಎಂದು ಅವರು ಹೇಳುತ್ತಾರೆ. ಆದರೆ, ‘ಅರ್ಥಶಾಸ್ತ್ರ ವಿಚಾರವಾಗಿ ಆಗಾಗ ಅಭಿಜಿತ್‌ ಜೊತೆ ಚರ್ಚಿಸುತ್ತಿದ್ದೆ. ಆತನಿಗೆ ಇಂಥ ವಿಚಾರಗಳಲ್ಲಿ ವಿಶೇಷ ಕುತೂಹಲವಿತ್ತು. ಇಂದು ಏನು ಮಾಡಿದೆ, ಊಟ ಆಯಿತೇ... ಮುಂತಾದ ಲೋಕಾಭಿರಾಮದ ವಿಚಾರಗಳನ್ನು ನಾವು ಚರ್ಚಿಸುತ್ತಿದ್ದುದು ಕಡಿಮೆಯೇ’ ಎಂದರು.

‘ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಯಾವುದೇ ಆಸಕ್ತಿದಾಯಕ ವಿಚಾರ ಬಂದಾಗ ನಾನು ಅವನ ಜೊತೆ ಚರ್ಚಿಸುತ್ತೇನೆ. ಅವನೂ ಹಾಗೆ ಮಾಡುತ್ತಿದ್ದ. ಸಾಮಾನ್ಯವಾಗಿ ಅದು ತಾಯಿ– ಮಗನ ನಡುವಿನ ಸಂವಾದ ಆಗಿರುತ್ತಿರಲಿಲ್ಲ. ನನಗೆ ಅರ್ಥವಾಗದ ವಿಚಾರಗಳನ್ನು ನಾನು ಆತನಿಂದ ಕೇಳಿ ತಿಳಿಯುತ್ತಿದ್ದೆ. ಉದಾಹರಣೆಗೆ ‘ಈಗಿನ ತೆರಿಗೆ ಪದ್ಧತಿ ಸರಿಯಾಗಿದೆಯೇ’ ಎಂದು ಈಚೆಗೆ ಆತನಲ್ಲಿ ಕೇಳಿದ್ದೆ. ಅದಕ್ಕೆ ಆತ, ‘ಅದರಲ್ಲಿ ನ್ಯೂನತೆಗಳಿವೆ ಎಂದಿದ್ದ’ ಎಂದು ಮಗನೊಡನೆ ನಡೆಸುತ್ತಿದ್ದ ಚರ್ಚೆಯ ವಿಚಾರಗಳನ್ನು ನಿರ್ಮಲಾ ತೆರೆದಿಟ್ಟರು.

‘ಅತ್ಯಂತ ಸಂಕೀರ್ಣವಾದ ವಿಚಾರಗಳನ್ನು ಸರಳವಾಗಿ ತಿಳಿಸಿಕೊಡುವಂಥ ಸಾಮರ್ಥ್ಯ ನನ್ನ ಮಗನಲ್ಲಿದೆ’ ಎಂದು ನಿರ್ಮಲಾ ಹೆಮ್ಮೆಯಿಂದ ಹೇಳಿದರು.

ಮೊದಲ ದಂಪತಿ

ಸ್ಟಾಕ್‌ಹೋಮ್ (ಪಿಟಿಐ): ಅಭಿಜಿತ್‌ ಬ್ಯಾನರ್ಜಿ ಮತ್ತು ಪತ್ನಿ ಎಸ್ತರ್‌ ಡಫ್ಲೊ (ಫ್ರೆಂಚ್‌– ಅಮೆರಿಕನ್‌) 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ಗೆ ಆಯ್ಕೆಯಾಗಿದ್ದಾರೆ. ಪತಿ–ಪತ್ನಿ ಒಂದೇ ವರ್ಷದಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್‌ ಪಡೆದಿದ್ದು ಇದೇ ಮೊದಲು.

46 ವರ್ಷದ ಡಫ್ಲೊ ಅವರು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಸಲಹೆಗಾರರಾಗಿದ್ದರು. ಅರ್ಥಶಾಸ್ತ್ರಕ್ಕಾಗಿ ನೊಬೆಲ್‌ ಪಡೆದ ಎರಡನೆಯ ಮಹಿಳೆ ಮಾತ್ರವಲ್ಲದೆ ಈ ಪ್ರಶಸ್ತಿ ಪಡೆದ ಅತಿ ಕಿರಿಯ ಮಹಿಳೆ ಎನಿಸಿದ್ದಾರೆ.

ತಿಹಾರ್ ಜೈಲಿಗೆ ಹೋಗಿದ್ದ ಅಭಿಜಿತ್!

26 ವರ್ಷಗಳ ಹಿಂದೆ ದೆಹಲಿಯ ಜವಾಹರಲಾಲ್‌ ನೆಹರೂ (ಜೆಎನ್‌ಯು) ವಿಶ್ವವಿದ್ಯಾಲಯದ ಕುಲಪತಿ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕೆ ಅಭಿಜಿತ್‌ ತಿಹಾರ್‌ ಜೈಲಿಗೆ ಹೋಗಬೇಕಾಯಿತು. ಹತ್ತು ದಿನಗಳ ಬಳಿಕ ಅವರು ಬಿಡುಗಡೆಯಾಗಿದ್ದರು.

ಈ ಅಂಶವನ್ನು ಅಭಿಜಿತ್ ಅವರು ಮೂರು ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನದಲ್ಲಿ ನೆನಪಿಸಿಕೊಂಡಿದ್ದರು.

ಬಡತನ ನಿರ್ಮೂಲನೆಯ ಕೆಲಸ

‘ಜಾಗತಿಕ ಮಟ್ಟದಲ್ಲಿ ಬಡತನದ ನಿರ್ಮೂಲನೆಯ ನಮ್ಮ ಸಾಮರ್ಥ್ಯವನ್ನು ಈ ವರ್ಷ ಪ್ರಶಸ್ತಿ ಪಡೆದವರ ಸಂಶೋಧನೆಯು ಗಣನೀಯವಾಗಿ ಹೆಚ್ಚಿಸಿದೆ. ಅವರ ಪ್ರಯೋಗ ಆಧಾರಿತ ಧೋರಣೆಯು ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಎರಡೇ ದಶಕಗಳಲ್ಲಿ ದೊಡ್ಡ ಪರಿವರ್ತನೆ ಉಂಟು ಮಾಡಿದೆ. ಅಭಿವೃದ್ಧಿ ಅರ್ಥಶಾಸ್ತ್ರವು ಈಗ ಹುಲುಸಾಗಿ ಬೆಳೆಯುತ್ತಿರುವ ಸಂಶೋಧನಾ ವಿಭಾಗವಾಗಿದೆ’ ಎಂದು ಪ್ರಶಸ್ತಿ ಘೋಷಿಸಿದ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್ ಸೈನ್ಸಸ್‌ ಹೇಳಿದೆ.

ಈ ಮೂವರು ಪರಿಚಯಿಸಿದ ಹೊಸ ಧೋರಣೆಯು ಬಡತನ ನಿರ್ಮೂಲನೆಗೆ ವಿಶ್ವಾಸಾರ್ಹ ಉತ್ತರಗಳನ್ನು ಕೊಡುತ್ತದೆ ಎಂದೂ ತಿಳಿಸಿದೆ.

ಇವರ ಒಂದು ಪ್ರಯೋಗದಿಂದಾಗಿ ಭಾರತದ 50 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಮಕ್ಕಳಿಗೆ ಪರಿಹಾರ ಬೋಧನೆಯ ಪ್ರಯೋಜನ ಪಡೆಯಲು ಸಾಧ್ಯವಾಗಿದೆ. ಅನಾರೋಗ್ಯ ತಡೆಗಾಗಿ ಭಾರಿ ಸಹಾಯಧನಗಳ ಯೋಜನೆಯು ಹಲವು ದೇಶಗಳಲ್ಲಿ ಜಾರಿಯಾಗಿದೆ. ಇದು ಇನ್ನೊಂದು ಉದಾಹರಣೆ ಎಂದು ಅಕಾಡೆಮಿ ಹೇಳಿದೆ.

‘ಭಾರತ: ಪುನಶ್ಚೇತನದ ಲಕ್ಷಣವಿಲ್ಲ’

ಈಗ ಲಭ್ಯ ಇರುವ ದತ್ತಾಂಶಗಳನ್ನು ಗಮನಿಸಿದರೆ ಭಾರತದ ಅರ್ಥ ವ್ಯವಸ್ಥೆಯು ಸದ್ಯಕ್ಕೆ ಪುನಶ್ಚೇತನಗೊಳ್ಳುವ ಯಾವುದೇ ಸೂಚನೆಗಳು ಕಾಣಿಸುತ್ತಿಲ್ಲ ಎಂದು ಅಭಿಜಿತ್‌ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

‘ಕಳೆದ ಐದಾರು ವರ್ಷಗಳಲ್ಲಿ ಅಲ್ಪ ಪ್ರಮಾಣದ ಪ್ರಗತಿಯನ್ನಾದರೂ ಕಾಣಬಹುದಿತ್ತು. ಆದರೆ, ಈಗ ಆ ಭರವಸೆಯೂ ಇಲ್ಲ’ ಎಂದು ಅಮೆರಿಕದ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಭಿಜಿತ್‌ ಹೇಳಿದ್ದಾರೆ.

ಕೋಲ್ಕತ್ತದಲ್ಲಿ ಕಳೆದ ದಿನಗಳು ತಮ್ಮ ಎರಡು ದಶಕಗಳ ಸಂಶೋಧನೆಯ ಅವಧಿಯಲ್ಲಿ ವಿವಿಧ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಯಿತು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT