ಗುರುವಾರ , ಜನವರಿ 23, 2020
19 °C
ಕುಲಪತಿಗಳು ಸೇರಿದಂತೆ 200ಕ್ಕೂ ಹೆಚ್ಚು ಶಿಕ್ಷಣ ತಜ್ಞರಿಂದ ಪತ್ರ

ಎಡಪಂಥೀಯರಿಂದ ವಿ.ವಿ ಪರಿಸರಕ್ಕೆ ಧಕ್ಕೆ: ಪ್ರಧಾನಿಗೆ ಪತ್ರ ಬರೆದ ಶಿಕ್ಷಣ ತಜ್ಞರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ‘ಎಡಪಂಥೀಯ ಬುದ್ಧಿಜೀವಿಗಳ ಸಣ್ಣ ಗುಂಪಿನಿಂದಾಗಿ’ ದೇಶದ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ವಾತಾವರಣ ಹದಗೆಡುತ್ತಿದೆ ಎಂದು ಆರೋಪಿಸಿ ವಿಶ್ವವಿದ್ಯಾಲಯಗಳ ಕುಲಪತಿಗಳು ಸೇರಿದಂತೆ 200ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.

‘ವಿದ್ಯಾರ್ಥಿ ರಾಜಕಾರಣ ಹೆಸರಿನಲ್ಲಿ ವಿಚ್ಛಿದ್ರಕಾರಿ ಎಡ ವಿಚಾರಧಾರೆಯುಳ್ಳ ಕಾರ್ಯಸೂಚಿಯನ್ನು ವಿಶ್ವವಿದ್ಯಾಲಯಗಳಲ್ಲಿ ಅನುಕರಿಸಲಾಗುತ್ತಿರುವುದನ್ನು ನಾವು ತುಂಬಾ ಬೇಸರಿಂದ ಗಮನಿಸುತ್ತಿದ್ದೇವೆ. ಜೆಎನ್‌ಯುನಿಂದ ಹಿಡಿದು ಜಾಮಿಯಾ, ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಿಂದ ಹಿಡಿದು ಜಾಧವ್ ಪುರ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ನಡೆದ ಇತ್ತೀಚಿನ ಘಟನೆಗಳು ಎಡಪಂಥೀಯ ಕಾರ್ಯಕರ್ತರ ಹುಚ್ಚಾಟದಿಂದ ಉಂಟಾಗಿದೆ. ಇವು ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣವನ್ನು ಹದಗೆಡಿಸುವ ಮುನ್ಸೂಚನೆಯಾಗಿದೆ’ ಎಂದು ಪತ್ರದಲ್ಲಿ ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. 

ಪತ್ರಕ್ಕೆ ಸಹಿ ಹಾಕಿದವರಲ್ಲಿ ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದ ಕುಲಪತಿ ಆರ್‌.ಪಿ. ತಿವಾರಿ, ದಕ್ಷಿಣ ಬಿಹಾರದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಎಚ್‌.ಸಿ.ಎಸ್. ರಾಥೋಡ್, ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದ ಕುಲಪತಿ ಶಿರೀಶ್ ಕುಲಕರ್ಣಿ ಸೇರಿದಂತೆ ಹಲವು ಶಿಕ್ಷಣತಜ್ಞರಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಎಡಪಂಥೀಯ ರಾಜಕಾರಣವು ವಿಧಿಸಿರುವ ಸೆನ್ಸಾರ್‌ಶಿಪ್‌ನಿಂದಾಗಿ ವಿಶ್ವವಿದ್ಯಾಲಯಗಳಲ್ಲಿ ಮುಕ್ತವಾಗಿ ಸಾರ್ವಜನಿಕ ಸಭೆ ಸಮಾರಂಭಗಳನ್ನು ಆಯೋಜಿಸಲು ಕೂಡಾ ಸಾಧ್ಯವಾಗುತ್ತಿಲ್ಲ. ಬಡವರು ಮತ್ತು ಕೆಳವರ್ಗದ ವಿದ್ಯಾರ್ಥಿಗಳು ಎಡಪಂಥೀಯ ರಾಜಕಾರಣದಿಂದಾಗಿ ನೋವು ಅನುಭವಿಸುವಂತಾಗಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

‘ಇಂಥ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಲ್ಲಿ ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಅವಕಾಶವಂಚಿತರಾಗುತ್ತಿದ್ದಾರೆ. ಅಷ್ಟೇ ಅಲ್ಲ ಈ ವಿದ್ಯಾರ್ಥಿಗಳಿಗೆ ಸ್ವತಂತ್ರ ಮನೋಭಾವ ರೂಪಿಸಿಕೊಳ್ಳುವಿಕೆ ಮತ್ತು ಪರ್ಯಾಯ ರಾಜಕಾರಣದಲ್ಲಿ ಪಾಲ್ಗೊಳ್ಳಲೂ ಸಾಧ್ಯವಾಗುತ್ತಿಲ್ಲ. ಇವರಲ್ಲಿ ಬಹುತೇಕರು ಎಡಪಕ್ಷಗಳ ರಾಜಕಾರಣದಲಷ್ಟೇ ಸಕ್ರಿಯರಾಗುವಂತಾಗಿದೆ. ಹಾಗಾಗಿ, ಪ್ರಜಾಪ್ರಭುತ್ವ ಪರವಾಗಿರುವ ಎಲ್ಲಾ ಶಕ್ತಿಗಳು ಒಂದಾಗಿ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಕೈಜೋಡಿಸಬೇಕು’ ಎಂದೂ ಪತ್ರದಲ್ಲಿ ಬರೆಯಲಾಗಿದೆ. 

ಪ್ರತಿಕ್ರಿಯಿಸಿ (+)