ಮಂಗಳವಾರ, ಆಗಸ್ಟ್ 11, 2020
23 °C
ರಫೇಲ್‌ ಒಪ್ಪಂದ ವಿವಾದ: ‘ರಿಲಯನ್ಸ್‌ ಫ್ಲ್ಯಾಗ್‌ ಅಟ್ಲಾಂಟಿಕ್‌ ಫ್ರಾನ್ಸ್‌ ಎಸ್‌ಎಎಸ್‌’ಗೆ ಫ್ರಾನ್ಸ್‌ ಸರ್ಕಾರದ ನೆರವು

ಅನಿಲ್‌ ಅಂಬಾನಿಗೆ ಸಾವಿರ ಕೋಟಿ ತೆರಿಗೆ ವಿನಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅನಿಲ ಅಂಬಾನಿ ಮಾಲೀಕತ್ವದ ಕಂಪನಿಗೆ 143.7 ಮಿಲಿಯನ್‌ ಯುರೊ (₹1124.9 ಕೋಟಿ) ತೆರಿಗೆ ವಿನಾಯಿತಿಯನ್ನು ಫ್ರಾನ್ಸ್‌ ಸರ್ಕಾರ ನೀಡಿರುವುದು ವರದಿಯಾಗಿದೆ.

ಫ್ರಾನ್ಸ್‌ನಲ್ಲಿರುವ ಅನಿಲ ಅಂಬಾನಿ ಅವರ ’ರಿಲಯನ್ಸ್‌ ಫ್ಲ್ಯಾಗ್‌ ಅಟ್ಲಾಂಟಿಕ್‌ ಫ್ರಾನ್ಸ್‌ ಎಸ್‌ಎಎಸ್‌’ ಕಂಪನಿಗೆ ಅಲ್ಲಿನ ಸರ್ಕಾರ 2015ರಲ್ಲಿ ಅಪಾರ ಮೊತ್ತದ ತೆರಿಗೆ ವಿನಾಯಿತಿ ನೀಡಿದೆ ಎಂದು ಫ್ರಾನ್ಸ್‌ನ ‘ಲೆ ಮಾಂಡೆ’ ದಿನಪತ್ರಿಕೆ ವರದಿ ಮಾಡಿದೆ.

ರಿಲಯನ್ಸ್‌ ಕಮ್ಯೂನಿಕೇಷನ್‌ ಈ ಕಂಪನಿಯ ಮಾಲೀಕತ್ವ ಹೊಂದಿದ್ದು, ‘ಲೆ ಮಾಂಡೆ’ ವರದಿಯನ್ನು ತಳ್ಳಿ ಹಾಕಿದೆ. ಫ್ರಾನ್ಸ್‌ನಲ್ಲಿ ಕೇಬಲ್‌ ನೆಟ್‌ವರ್ಕ್‌ ಮತ್ತು ಇತರ ದೂರಸಂಪರ್ಕ ಮೂಲಸೌಕರ್ಯಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಈ ಕಂಪನಿ ಕೈಗೊಳ್ಳುತ್ತಿದೆ.

ತೆರಿಗೆ ಬಾಕಿ ಉಳಿಸಿಕೊಂಡಿದ್ದ ’ರಿಲಯನ್ಸ್‌ ಫ್ಲ್ಯಾಗ್‌ ಅಟ್ಲಾಂಟಿಕ್‌ ಫ್ರಾನ್ಸ್‌ ಎಸ್‌ಎಎಸ್‌’ನಿಂದ ಫ್ರಾನ್ಸ್‌ನ ತೆರಿಗೆ ಇಲಾಖೆ ಅಧಿಕಾರಿಗಳು 151 ಮಿಲಿಯನ್‌ ಯುರೊ ಪಾವತಿಸುವಂತೆ ಸೂಚಿಸಿದ್ದರು. ಆದರೆ, ರಫೇಲ್‌ ಒಪ್ಪಂದ ಕೈಗೊಳ್ಳುವುದು ಖಚಿತವಾದ ಬಳಿಕ, ವಿನಾಯಿತಿ ನೀಡಲು ಮುಂದಾದ ಅಧಿಕಾರಿಗಳು ಕೇವಲ 7.3 ಮಿಲಿಯನ್‌ ಯುರೊ (₹57.15 ಕೋಟಿ) ಪಡೆಯಲು ಒಪ್ಪಿಕೊಂಡರು ಎಂದು ವರದಿ ತಿಳಿಸಿದೆ.

ಡಸಾಲ್ಟ್‌ ಕಂಪನಿಯಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ಆರು ತಿಂಗಳ ಬಳಿಕ ಈ ವಿನಾಯಿತಿ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೊಯಿಸ್‌ ಹಾಲಂಡ್‌ ಜತೆ ಪ್ಯಾರಿಸ್‌ನಲ್ಲಿ 2015ರ ಏಪ್ರಿಲ್‌ 10ರಂದು ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ ಬಳಿಕ ರಫೇಲ್‌ ಖರೀದಿಸುವುದಾಗಿ ಪ್ರಕಟಿಸಲಾಗಿತ್ತು. 2016ರ ಸೆಪ್ಟೆಂಬರ್‌ 23ರಂದು ಅಂತಿಮ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಫ್ರಾನ್ಸ್‌ ತೆರಿಗೆ ಅಧಿಕಾರಿಗಳು ಕಂಪನಿಯನ್ನು ತನಿಖೆಗೆ ಒಳಪಡಿಸಿದಾಗ 2007ರಿಂದ 2010ರ ಅವಧಿಯಲ್ಲಿನ 60 ಮಿಲಿಯನ್‌ ಯುರೊ (₹469.72 ಕೋಟಿ) ಬಾಕಿ ಪಾವತಿಸದಿರುವುದು ಪತ್ತೆಯಾಗಿತ್ತು. ಆದರೆ, ರಿಲಯನ್ಸ್ ಕಂಪನಿ 7.6 ಮಿಲಿಯನ್‌ ಯುರೊ(₹59.498 ಕೋಟಿ) ಪಾವತಿಸಿ ಬಾಕಿ ಇತ್ಯರ್ಥಗೊಳಿಸುವುದಾಗಿ ತಿಳಿಸಿದಾಗ ಫ್ರಾನ್ಸ್‌ ತೆರಿಗೆ ಅಧಿಕಾರಿಗಳು ನಿರಾಕರಿಸಿದರು.

ತೆರಿಗೆ ಅಧಿಕಾರಿಗಳು 2010–2012ರ ಅವಧಿಯಲ್ಲಿನ ತೆರಿಗೆ ಬಗ್ಗೆಯೂ ಪರಿಶೀಲನೆ ನಡೆಸಿದಾಗ ಹೆಚ್ಚುವರಿಯಾಗಿ 91 ಮಿಲಿಯನ್‌ ಯುರೊ (₹712.41 ಕೋಟಿ) ತೆರಿಗೆ ಪಾವತಿಸುವಂತೆ ಸೂಚಿಸಿದರು. ಒಟ್ಟಾರೆಯಾಗಿ 2015ರ ಏಪ್ರಿಲ್‌ಗೆ 151 ಮಿಲಿಯನ್‌ ಯುರೊ ತೆರಿಗೆಯನ್ನು ಫ್ರಾನ್ಸ್‌ ಅಧಿಕಾರಿಗಳಿಗೆ ರಿಲಯನ್ಸ್‌ ಕಂಪನಿ ನೀಡಬೇಕಾಗಿತ್ತು. ರಫೇಲ್‌ ಒಪ್ಪಂದ ಘೋಷಿಸಿ ಆರು ತಿಂಗಳ ಬಳಿಕ 7.3 ಮಿಲಿಯನ್‌ ಯುರೊ ಸ್ವೀಕರಿಸಲು ಅಧಿಕಾರಿಗಳು ಒಪ್ಪಿಕೊಂಡರು ಎಂದು ವರದಿ ತಿಳಿಸಿದೆ.

‘2008–2012ರ ಅವಧಿಯನ್ನು ಫ್ರಾನ್ಸ್‌ನ ತೆರಿಗೆ ಅಧಿಕಾರಿಗಳು ಪರಿಶೀಲಿಸಿದಾಗ ಫ್ಲ್ಯಾಗ್‌ ಫ್ರಾನ್ಸ್‌ಗೆ ₹20 ಕೋಟಿ (2.7 ಮಿಲಿಯನ್‌ ಯುರೊ) ನಷ್ಟವಾಗಿತ್ತು. ಇದೇ ಅವಧಿಯಲ್ಲಿ ತೆರಿಗೆ ಅಧಿಕಾರಿಗಳು ₹1100 ಕೋಟಿ ಪಾವತಿಸುವಂತೆಯೂ ಸೂಚಿಸಿದ್ದರು.

 ‘2015ರ ಫೆಬ್ರುವರಿ ಮತ್ತು ಅಕ್ಟೋಬರ್‌ ನಡುವಣ ಅವಧಿಯಲ್ಲಿ ರಫೇಲ್‌ ಒಪ್ಪಂದ ಕುರಿತು ಭಾರತದ ಜತೆ ಫ್ರಾನ್ಸ್‌ ಮಾತುಕತೆ ನಡೆಸುತ್ತಿದ್ದಾಗ ಅನಿಲ ಅಂಬಾನಿ 143.7 ಮಿಲಿಯನ್‌ ಯುರೊ ತೆರಿಗೆ ವಿನಾಯಿತಿ ಪಡೆದಿದೆ’ ಎಂದು ವರದಿ ಬರೆದಿರುವ ಜುಲಿಯನ್‌ ಬೌಯಿಸ್ಸೌಯು ಟ್ವೀಟ್‌ ಮಾಡಿದ್ದಾರೆ. ಅನ್ನೆ ಮಿಶೆಲ್‌ ಜತೆ ಜುಲಿಯನ್‌ ವರದಿ ಬರೆದಿದ್ದಾರೆ.

‘ಹಸ್ತಕ್ಷೇಪ ಮಾಡಿಲ್ಲ’

ಅನಿಲ್ ಅಂಬಾನಿ ಅವರ ಕಂಪನಿಗೆ ತೆರಿಗೆ ವಿನಾಯಿತಿ ನೀಡಿರುವುದಕ್ಕೆ ಸಂಬಂಧಿಸಿ ಯಾವುದೇ ರೀತಿ ರಾಜಕೀಯ ಹಸ್ತಕ್ಷೇಪ ಮಾಡಿಲ್ಲ ಎಂದು ಫ್ರಾನ್ಸ್‌ ಸರ್ಕಾರ ಸ್ಪಷ್ಟಪಡಿಸಿದೆ. 2008 ಮತ್ತು 2012ರ ನಡುವಣ ತೆರಿಗೆ ವಿವಾದವನ್ನು ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ರಿಲಯನ್ಸ್‌ ಕಂಪನಿ ಇತ್ಯರ್ಥ ಮಾಡಿಕೊಂಡಿವೆ ಎಂದು ತಿಳಿಸಿದೆ.

**
ಒಪ್ಪಂದದಿಂದ ಯಾವುದೇ ವಿನಾಯಿತಿ ಅಥವಾ ಲಾಭ ಪಡೆದಿಲ್ಲ. ತೆರಿಗೆ ವಿವಾದವನ್ನು ಕಾನೂನು ಚೌಕಟ್ಟಿನಲ್ಲೇ ಇತ್ಯರ್ಥಗೊಳಿಸಲಾಗಿದೆ.
– ರಿಲಯನ್ಸ್‌ ಕಮ್ಯೂನಿಕೇಷನ್‌

**
ರಫೇಲ್‌ ಹಗರಣ ಹೇಗೆ ನಡೆದಿದೆ ಎನ್ನುವುದು ಬಯಲಾಗುತ್ತಿದೆ. ಪ್ರಧಾನಿ ಕಚೇರಿಯೇ ಇದರಲ್ಲಿ ನೇರವಾಗಿ ಭಾಗಿಯಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರರು ಪ್ಯಾರಿಸ್‌ನಲ್ಲಿ ಕಾನೂನುಬಾಹಿರವಾಗಿ ಸಂಧಾನ ಮಾಡಿದ್ದಾರೆ.
– ಸೀತಾರಾಂ ಯೆಚೂರಿ, ಸಿಪಿಐಎಂ ಪ್ರಧಾನ ಕಾರ್ಯದರ್ಶಿ

**
ರಫೇಲ್‌ ಒಪ್ಪಂದದ ಭ್ರಷ್ಟಾಚಾರ ಮತ್ತು ಹಣದ ವಹಿವಾಟು ನಡೆದಿರುವುದು ಕೊನೆಗೂ ಬಹಿರಂಗವಾಗಿದೆ. ಪ್ರಧಾನಿ ಮತ್ತು ಅನಿಲ್‌ ಅಂಬಾನಿ ಸಂಬಂಧವೂ ಬಯಲಾಗಿದೆ. ಇದು ಸ್ಫೋಟಕ!
–ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ವಕ್ತಾರ

**
ಖಾಸಗಿ ಕಂಪನಿ ತೆರಿಗೆ ವಿನಾಯಿತಿ ಪಡೆದಿರುವುರನ್ನು ರಫೇಲ್‌ ಒಪ್ಪಂದದ ಜತೆ ಸಂಬಂಧ ಕಲ್ಪಿಸುವುದು ಸಂಪೂರ್ಣ ತಪ್ಪು. ಈಗಿನ ಸರ್ಕಾರಕ್ಕೂ ಹಾಗೂ ತೆರಿಗೆ ವಿನಾಯಿತಿ ವಿಷಯಕ್ಕೂ ಸಂಬಂಧವೇ ಇಲ್ಲ.
– ರಕ್ಷಣಾ ಸಚಿವಾಲಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು