ಶುಕ್ರವಾರ, ಸೆಪ್ಟೆಂಬರ್ 20, 2019
21 °C
ವಿವಿಧ ಕಾರಣಗಳಿಂದ ಮನೆಬಿಟ್ಟಿದ್ದ, ಹೆತ್ತವರಿಂದ ದೂರಾಗಿದ್ದವರು ಒಂದಾದರು

ಒಡೆದಿದ್ದ ಕುಟುಂಬಗಳನ್ನು ಸೇರಿಸಿದ ಎನ್‌ಆರ್‌ಸಿ

Published:
Updated:
Prajavani

ಗುವಾಹಟಿ: ಅಸ್ಸಾಂನಲ್ಲಿ ವಿವಿಧ ಕಾರಣಗಳಿಂದ ದೂರವಾಗಿದ್ದ ಕುಟುಂಬಗಳನ್ನು ರಾಷ್ಟ್ರೀಯ ಪೌರತ್ವ ನೋಂದಣಿಯು (ಎನ್‌ಆರ್‌ಸಿ) ಮತ್ತೆ ಒಂದುಗೂಡಿಸಿದೆ. ಎನ್‌ಆರ್‌ಸಿಯಲ್ಲಿ ಸ್ಥಾನಪಡೆಯಲು ವಂಶವೃಕ್ಷ ಅತ್ಯಗತ್ಯವಾಗಿತ್ತು. ವಂಶವೃಕ್ಷ ಪರಿಶೀಲನೆಯ ನೆಪದಲ್ಲಿ ಎನ್‌ಆರ್‌ಸಿ ಅಧಿಕಾರಿಗಳು ಇಂತಹ ಕುಟುಂಬಗಳು ಒಂದಾಗುವಲ್ಲಿ ಪರೋಕ್ಷವಾಗಿ ನೆರವಾಗಿದ್ದಾರೆ.

ತಂದೆಯ ಕಡೆಗಣನೆಗೆ ಕೊನೆ

ತಿನ್ಸೂಕಿಯಾ ಜಿಲ್ಲೆಯ ರೂಪ ದೇವ್ ಅವರು ತಮ್ಮ ಮತ್ತು ತಮ್ಮ ಇಬ್ಬರು ಮಕ್ಕಳ ದಾಖಲೆಗಳನ್ನು ವಂಶವೃಕ್ಷ ಸಮೇತ ಎನ್‌ಆರ್‌ಸಿ ಕೇಂದ್ರಕ್ಕೆ ಸಲ್ಲಿಸಿದ್ದರು. ವಂಶವೃಕ್ಷದಲ್ಲಿ ರೂಪ ದೇವ್ ಅವರು ತಮ್ಮ ತಂದೆ ನೋನಿ ಗೋಪಾಲ್ ದೇವ್ ಅವರ ಹೆಸರನ್ನು ನಮೂದಿಸಿದ್ದರು. ನೋನಿ ಗೋಪಾಲ್ ಅವರು ಎನ್‌ಆರ್‌ಸಿಗಾಗಿ ಸಲ್ಲಿಸಿದ್ದ ವಂಶವೃಕ್ಷದಲ್ಲಿ ತಮ್ಮ ಮಗ ರೂಪ ದೇವ್‌ ಅವರ ಹೆಸರನ್ನು ನಮೂದಿಸಿರಲಿಲ್ಲ. ಎನ್‌ಆರ್‌ಸಿ ಅಧಿಕಾರಿಗಳು ಇಬ್ಬರು ಅರ್ಜಿದಾರರನ್ನೂ ಪರಿಶೀಲನೆಗೆ ಕರೆಸಿದರು. ರೂಪ ದೇವ್ ಅವರು ನೋನಿ ಗೋಪಾಲ್ ಅವರನ್ನು ಮನೆಯಿಂದ ಹೊರಗೆ ಹಾಕಿದ್ದಿದ್ದು ತಿಳಿಯಿತು. ನಂತರ ರೂಪ ದೇವ್ ಅವರು ತಮ್ಮ ತಂದೆಯ ಕ್ಷಮೆಯಾಚಿಸಿ, ಅವರನ್ನು ಮನೆಗೆ ಕರೆದುಕೊಂಡು ಹೋದರು.

ಒಂದಾದ ಸೋದರರು

ಕೋಕ್ರಜಹಾರ್‌ನ ದಿವಂಗತ ಪ್ರೇಮಲಾಲ್ ಶರ್ಮಾ ಅವರ ಮಗ ಮೋನ್‌ ಬಹಾದ್ದೂರ್ ಶರ್ಮಾ (61) ಎನ್‌ಆರ್‌ಸಿಗಾಗಿ ಅರ್ಜಿ ಸಲ್ಲಿಸಿದ್ದರು. ಪ್ರೇಮಲಾಲ್ ಅವರು ತಮ್ಮ ಮೊದಲ ಪತ್ನಿ ನಿಧನರಾದ ನಂತರ ಮೋನ್‌ ಅವರನ್ನು ತ್ಯಜಿಸಿದ್ದರು. ನಂತರ ಅಲ್ಲಿಂದ 500 ಕಿ.ಮೀ. ದೂರದ ತಿನ್ಸೂಕಿಯಾದಲ್ಲಿ ನೆಲೆಸಿ, ಬೇರೊಂದು ಮದುವೆಯಾಗಿದ್ದರು. ಈ ವಿಚಾರ ಮೋನ್ ಅವರಿಗೆ ತಿಳಿದಿರಲಿಲ್ಲ. ತಿನ್ಸೂಕಿಯಾದಲ್ಲಿ ಪ್ರೇಮಲಾಲ್ ಅವರ ಎರಡನೇ ಪತ್ನಿಯ ಮಗ ಭವಾನಿ ಶಂಕರ್ ಶರ್ಮಾ ಸಹ ಎನ್‌ಆರ್‌ಸಿಗಾಗಿ ಅರ್ಜಿ ಸಲ್ಲಿಸಿದ್ದರು. ಇಬ್ಬರು ಅರ್ಜಿದಾರರ ವಂಶವೃಕ್ಷವೂ ಒಂದೇ ಆಗಿದ್ದರಿಂದ ಪರಿಶೀಲನೆಗೆ ಕರೆಸಲಾಯಿತು. ಆಗಲೇ ಇಬ್ಬರಿಗೂ ತಾವಿಬ್ಬರು ಸೋದರರು ಎಂಬುದು ಗೊತ್ತಾಗಿದ್ದು, ಅದೂ 45 ವರ್ಷಗಳ ನಂತರ.

ಸೋದರಿಯರ ಕಣ್ಣೀರು

ನಾಗಾಂವ್‌ ಜಿಲ್ಲೆಯ ಮಾಕನ್ ಬೋರಾ ಅವರು 35 ವರ್ಷಗಳ ಹಿಂದೆ ಮುಸ್ಲಿಂ ಯುವಕನನ್ನು ಮದುವೆಯಾಗಿ, ಮನೆಬಿಟ್ಟು ಹೋಗಿದ್ದರು. ಅಂದಿನಿಂದ ಅವರು ತಮ್ಮ ತಂದೆಯ ಕುಟುಂಬದಿಂದ ದೂರವೇ ಇದ್ದರು. ತಮ್ಮ ಹೆಸರನ್ನು ಸೋಫಿಯಾ ಬೇಗಂ ಎಂದು ಬದಲಿಸಿಕೊಂಡಿದ್ದರು. ಮಾಕನ್ ಅವರ ಸೋದರಿ ಅಂಜಲಿ ದಾಸ್ ಸಹ ಎನ್‌ಆರ್‌ಸಿಗಾಗಿ ಅರ್ಜಿ ಸಲ್ಲಿಸಿದ್ದರು. ಇಬ್ಬರೂ ತಮ್ಮ ಅರ್ಜಿಗಳಲ್ಲಿ ತಂದೆಯ ಹೆಸರನ್ನು ಕಾಳೀರಾಮ್ ಬೋರಾ ಎಂದೇ ನಮೂದಿಸಿದ್ದರು. ಇಬ್ಬರ ಧರ್ಮ ಬೇರೆ–ಬೇರೆಯಾಗಿದ್ದ ಕಾರಣ ಅಧಿಕಾರಿಗಳು ಪರಿಶೀಲನೆಗೆ ಕರೆಸಿದರು. ಪರಸ್ಪರನ್ನು ನೋಡಿದ ಸೋದರಿಯರು ಕಣ್ಣೀರಿಟ್ಟರು. 35 ವರ್ಷಗಳ ನಂತರ ಮಾಕನ್ ಅವರು ತಮ್ಮ ತಂದೆಯ ಮನೆಗೆ ಹೋದರು.

ಆರ್‌ಎಸ್‌ಎಸ್ ಕಳವಳ

ಪುಷ್ಕರ್: ‘ನೈಜ ಭಾರತೀಯರನ್ನು ಅಸ್ಸಾಂ ಎನ್‌ಆರ್‌ಸಿಯಿಂದ ಕೈಬಿಡಲಾಗಿದೆ. ಹೀಗೆ ಪಟ್ಟಿಯಿಂದ ತೆಗೆದುಹಾಕಿದವರಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಳವಳ ವ್ಯಕ್ತಪಡಿಸಿದೆ. 

ಇಲ್ಲಿ ಶನಿವಾರ ಆರಂಭವಾದ ಮೂರುದಿನಗಳ ಬೈಠಕ್‌ನಲ್ಲಿ ಈ ಕಳವಳ ವ್ಯಕ್ತವಾಗಿದೆ. ಆರ್‌ಎಸ್‌ಎಸ್‌ನ ಅಂಗಸಂಸ್ಥೆ ಸೀಮಾ ಜಾಗರಣ ಮಂಚ್‌, ಎನ್‌ಆರ್‌ಸಿಗೆ ಸಂಬಂಧಿಸಿದ ದತ್ತಾಂಶಗಳನ್ನು ವಿಶ್ಲೇಷಣೆ ಮಾಡಿತು. ಈ ಸಮಸ್ಯೆಯನ್ನು ನಿವಾರಿಸುವಲು ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಿತು.

Post Comments (+)