ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೇಠಿ, ರಾಯಬರೇಲಿಯಲ್ಲಿ ಪ್ರಿಯಾಂಕಾ ಬೆವರು

ಬಿಜೆಪಿಯಿಂದ ಮೊನಚಿನ ಪ್ರಚಾರ ಕಾರ್ಯ * ತಾಯಿ, ಸೋದರನ ಪರವಾಗಿ ಪ್ರಿಯಾಂಕಾ ಪ್ರಚಾರ
Last Updated 4 ಮೇ 2019, 20:00 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಗಳಾದ ಅಮೇಠಿ ಮತ್ತು ರಾಯಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಈ ಕ್ಷೇತ್ರಗಳನ್ನು ತಮ್ಮ ಸೋದರ ರಾಹುಲ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರಿಗೆ ಉಳಿಸಿಕೊಡಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬೆವರು ಸುರಿಸುತ್ತಿದ್ದಾರೆ.

ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರು, ತಾರಾ ಪ್ರಚಾರಕರು ಹಲವು ಸುತ್ತಿನ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಜತೆಗೆ ಆರ್‌ಎಸ್‌ಎಸ್‌ ಸ್ವಯಂಸೇವಕರು, ಬಜರಂಗ ದಳ ಮತ್ತು ಎಬಿವಿಪಿ ಕಾರ್ಯಕರ್ತರು ಮತಗಟ್ಟೆ ಮಟ್ಟದಲ್ಲೂ ಪ್ರಚಾರ ನಡೆಸುತ್ತಿದ್ದಾರೆ.

ಕೇಂದ್ರ ಸಚಿವ ರಾಮ್‌ ವಿಲಾಸ್ ಪಾಸ್ವಾನ್ ಅವರನ್ನು ಬಿಜೆಪಿಯು ಈ ಕ್ಷೇತ್ರಗಳಲ್ಲಿ ಪ್ರಚಾರಕ್ಕೆಂದು ನಿಯೋಜಿಸಿದೆ. ಪಾಸ್ವಾನ್‌ ಅವರು ‘ಪಾಸಿ’ ಸಮುದಾಯದ ನಾಯಕ. ದಲಿತರಲ್ಲಿ ಒಂದಾದ ಪಾಸಿ ಸಮುದಾಯದ ಜನರು ಈ ಎರಡೂ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಾಸ್ವಾನ್ ಅವರನ್ನು ಪ್ರಚಾರಕ್ಕೆ ಇಳಿಸುವ ಮೂಲಕ ಈ ಸಮುದಾಯದ ಜನರ ಮತಗಳನ್ನು ಸೆಳೆಯಬಹುದು ಎಂದು ಬಿಜೆಪಿ ಜಾತಿಯ ಲೆಕ್ಕಾಚಾರ ಮಾಡಿದೆ.

ಬಿಜೆಪಿಯ ತಾರಾ ಪ್ರಚಾರಕರಾದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಹ ಈ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಹಲವು ಸುತ್ತಿನ ಪ್ರಚಾರ ನಡೆಸಿದ್ದಾರೆ.

‘ಅಮೇಠಿಯಲ್ಲಿ ಸ್ಮೃತಿ ಇರಾನಿ ಜಯಗಳಿಸುವ ಎಲ್ಲಾ ಸಾಧ್ಯತೆಗಳೂ ಇವೆ. ರಾಯ್‌ಬರೇಲಿಯಲ್ಲಿ ನಮ್ಮ (ಬಿಜೆಪಿಯ) ಸ್ಥಾನ ಉತ್ತಮಪಡಿಸಿಕೊಳ್ಳಲು ಯತ್ನಿಸುತ್ತಿದ್ದೇವೆ’ ಎಂದು ಬಿಜೆಪಿಯ ಸ್ಥಳೀಯ ನಾಯಕರೊಬ್ಬರು ಹೇಳಿದ್ದಾರೆ.

ತಂತ್ರಕ್ಕೆ ಪ್ರತಿತಂತ್ರ:ಬಿಜೆಪಿಯ ಪ್ರಚಾರ ತಂತ್ರಕ್ಕೆ ಕಾಂಗ್ರೆಸ್‌ ಸಹ ಪ್ರತಿತಂತ್ರ ರೂಪಿಸಿದೆ. ಆದರೆ ಈ ಹಿಂದೆ ಅನುಸರಿಸಿದ್ದಕ್ಕಿಂತ ಭಿನ್ನವಾದ ತಂತ್ರವನ್ನು ಕಾಂಗ್ರೆಸ್‌ ಅಳವಡಿಸಿಕೊಂಡಿದೆ. ಬೃಹತ್ ಸಭೆಗಳು ಮತ್ತು ರ‍್ಯಾಲಿಗಳಿಗಿಂತ ಜನರ ಜತೆ ನೇರವಾಗಿ ಸಂವಾದ ನಡೆಸುವ ಹಾದಿಯನ್ನು ಕಾಂಗ್ರೆಸ್‌ ತುಳಿಯುತ್ತಿದೆ.

ಈ ಎರಡೂ ಕ್ಷೇತ್ರಗಳಲ್ಲಿ ಪ್ರಚಾರದ ಹೊಣೆಯನ್ನು ಪ್ರಿಯಾಂಕಾ ಗಾಂಧಿ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ನಿರ್ವಹಿಸುತ್ತಿದ್ದಾರೆ. ಅಮೇಠಿ ಮತ್ತು ರಾಯಬರೇಲಿಯ ನಂಟು ಹೊಂದಿರುವ ಹಲವು ಕಾಂಗ್ರೆಸ್‌ ನಾಯಕರು ಛತ್ತೀಸಗಡದಲ್ಲಿ ಸಚಿವರಾಗಿದ್ದಾರೆ. ಆ ನಾಯಕರೆಲ್ಲರೂ ಈ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ಜತೆಗೆ ಇಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ದಂಡೇ ಇದೆ. ಹೀಗಾಗಿ ಯೋಜಿತ ರೀತಿಯಲ್ಲಿ ಪ್ರಚಾರ ಸಾಧ್ಯ.

ಪ್ರಿಯಾಂಕಾ ಗಾಂಧಿ ಅವರು ಏಳು ದಿನಗಳಿಂದ ಈ ಕ್ಷೇತ್ರಗಳನ್ನು ಬಿಟ್ಟು ಕದಲಲಿಲ್ಲ. ಅಮೇಠಿ ಮತ್ತು ರಾಯಬರೇಲಿಯ ಹಳ್ಳಿ–ಹಳ್ಳಿಗಳನ್ನು ಮತ್ತು ಬೀದಿ–ಬೀದಿಗಳನ್ನು ಪ್ರಿಯಾಂಕ ಸುತ್ತುತ್ತಿದ್ದಾರೆ. ಬೀದಿಗಳಲ್ಲೇ ದಿಢೀರ್‌ ಸಭೆ ನಡೆಸಿ, ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಹಳ್ಳಿಗಳಲ್ಲಿ ಸಭೆ ನಡೆಸಿ, ಜನರೊಂದಿಗೆ ಚರ್ಚೆ ಮಾಡುತ್ತಿದ್ದಾರೆ. ಹಿಂದುಳಿದ ಮತ್ತು ವಂಚಿತ ಸಮುದಾಯದ ಜನರ ಜತೆ ವಿಶೇಷ ಮಾತುಕತೆ ನಡೆಸುತ್ತಿದ್ದಾರೆ.ಬುಧವಾರ ಹಾವಾಡಿಗರ ಜತೆಅವರು ನಡೆಸಿದ ಕಿರುಸಭೆಯೂ ಅಂಥದ್ದೇ ಒಂದು ಪ್ರಯತ್ನ. ಆಸಭೆ ವೇಳೆ ಅವರು ಹಾವನ್ನು ಕೈಯಲ್ಲಿ ಹಿಡಿದುಕೊಂಡು ಬುಟ್ಟಿಯಲ್ಲಿ ಬಿಟ್ಟ ವಿಡಿಯೊ ವೈರಲ್ ಆಗಿತ್ತು.

ಈ ಕ್ಷೇತ್ರಗಳ ಜತೆ ತಮ್ಮ ಕುಟುಂಬ ಹೊಂದಿರುವ ನಂಟಿನ ಬಗ್ಗೆಯೂ ಅವರು ಪ್ರತಿ ಸಭೆಯಲ್ಲಿ ಉಲ್ಲೇಖಿಸುತ್ತಿದ್ದಾರೆ. ಆ ಮೂಲಕ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇಂಥದ್ದೇ ಕಾರ್ಯವನ್ನು ರಾಹುಲ್ ಸಹ ಮಾಡಿದ್ದಾರೆ. ‘ಅಮೇಠಿ ಜನರು ನನ್ನ ಕುಟುಂಬದ ಸದಸ್ಯರಿದ್ದಂತೆ’ ಎಂದು ರಾಹುಲ್ ಗಾಂಧಿ ಶುಕ್ರವಾರವಷ್ಟೇ ಬಹಿರಂಗ ಪತ್ರ ಬರೆದಿದ್ದರು.

ರಾಯಬರೇಲಿ; 2014ರ ಫಲಿತಾಂಶ–

5.26 ಲಕ್ಷ ಸೋನಿಯಾ ಗಾಂಧಿ ಪಡೆದಿದ್ದ ಮತಗಳು

1.73 ಲಕ್ಷ ಬಿಜೆಪಿಯ ಅಜಯ್ ಅಗರ್‌ವಾಲ್ ಪಡೆದಿದ್ದ ಮತಗಳು

3.53 ಲಕ್ಷ ಸೋನಿಯಾ ಅವರ ಗೆಲುವಿನ ಅಂತರ

* ಅಮೇಠಿಯಲ್ಲಿ ಪ್ರಚಾರದ ಹೊಣೆಯನ್ನು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿಯೇ ನಿರ್ವಹಿಸುತ್ತಿದ್ದಾರೆ. ಅವರ ಜತೆಗೆ ಎಬಿವಿಪಿ ಮತ್ತು ಬಜರಂಗ ದಳದ ಕಾರ್ಯಕರ್ತರ ದಂಡೇ ಇದೆ

* ರಾಯಬರೇಲಿಯಲ್ಲಿ ಸೋನಿಯಾ ಗಾಂಧಿ ಅವರೇ ಈ ಬಾರಿಯೂ ಗೆಲ್ಲುವ ನೆಚ್ಚಿನ ಅಭ್ಯರ್ಥಿಯಾಗಿದ್ದಾರೆ. ಸೋನಿಯಾ ವಿರುದ್ಧ ಸ್ಪರ್ಧಿಸುತ್ತಿರುವ ದಿನೇಶ್ ಪ್ರತಾಪ್ ಸಿಂಗ್ ಅವರು ಕ್ಷೇತ್ರದಲ್ಲಿ ಜನಜನಿತವಾದ ಹೆಸರೇನಲ್ಲ. ದಿನೇಶ್ ಅವರು ಮೋದಿಯ ಹೆಸರಿನಲ್ಲೇ ಮತ ಕೇಳುತ್ತಿದ್ದಾರೆ. ದಿನೇಶ್ ಪರವಾಗಿ ಪ್ರಚಾರ ನಡೆಸುತ್ತಿರುವ ಬಿಜೆಪಿ ನಾಯಕರದ್ದೂ ಇದೇ ವರಸೆ

* ರಾಯಬರೇಲಿಯಲ್ಲಿ ಈ ಹಿಂದೆ ನಡೆದ ಮೂರು ಚುನಾವಣೆಗಳಲ್ಲಿ ಸೋನಿಯಾ ಅವರ ಗೆಲುವಿನ ಅಂತರ 3.5 ಲಕ್ಷಕ್ಕೂ ಹೆಚ್ಚು. ಜತೆಗೆ ಬಿಎಸ್‌ಪಿ ಮತ್ತು ಎಸ್‌ಪಿ ಅಭ್ಯರ್ಥಿಗಳು ತಲಾ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಮತ ಪಡೆದಿದ್ದಾರೆ. ಈ ಬಾರಿ ಎಸ್‌ಪಿ ಮತ್ತು ಬಿಎಸ್‌ಪಿಗಳು ಇಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಇದರಿಂದ ಸೋನಿಯಾ ಅವರ ಗೆಲುವು ಮತ್ತಷ್ಟು ಸುಲಭವಾಗಲಿದೆ ಎನ್ನುತ್ತಾರೆ ರಾಜಕೀಯ ಪರಿಣಿತರು

* ಮೋದಿ ವಿರೋಧಿ ಅಲೆ, ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧದ ಅಲೆಗಳು ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರಿಗೆ ಪ್ರತಿಕೂಲವಾಗಿ ಪರಿಣಮಿಸಲಿದೆ. ಇಲ್ಲಿಯೂ ಎಸ್‌ಪಿ–ಬಿಎಸ್‌ಪಿ ಅಭ್ಯರ್ಥಿಗಳು ಇಲ್ಲದಿರುವ ಕಾರಣ ರಾಹುಲ್ ಅವರ ಗೆಲುವು ಸುಲಭವಾಗಲಿದೆ ಎಂದು ಎಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT