ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನಜಾಲ: ಮತದಾರ ಅಯೋಮಯ

Last Updated 11 ಮೇ 2019, 9:56 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಪ್ರಧಾನಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಉತ್ತರ ಪ್ರದೇಶದ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಹೇಳಿಕೆಗಳನ್ನು ಹೇಗೆ ಅರ್ಥೈಸಿಕೊಳ್ಳುವುದು ಎಂಬುದೇ ಅವರಿಗೆ ತಿಳಿಯುತ್ತಿಲ್ಲ.

ಗೆಲ್ಲುವುದು ಅಥವಾ ಬಿಜೆಪಿಯ ಗೆಲುವಿನ ಸಾಧ್ಯತೆಗಳನ್ನು ಕಮರಿಸುವುದು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಉದ್ದೇಶ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದರು. ಬಿಎಸ್‌ಪಿ–ಎಸ್‌ಪಿ ಮೈತ್ರಿಕೂಟದ ಮತಗಳಿಗೆ ಕನ್ನ ಹಾಕುವುದು ತಮ್ಮ ಉದ್ದೇಶ ಅಲ್ಲವೇ ಅಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದರು. ಇದೇ ಅರ್ಥ ಧ್ವನಿಸುವ ಹೇಳಿಕೆಯನ್ನು ಮಾಯಾವತಿ ಅವರೂ ನೀಡಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಇಳಿಸುವುದಕ್ಕಾಗಿ ಬಿಎಸ್‌ಪಿ ಕೂಡ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

‘ದೇಶ ಮತ್ತು ಜನರ ಹಿತಾಸಕ್ತಿಗಾಗಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನ್ನು ದುರ್ಬಲಗೊಳಿಸುವುದಕ್ಕಾಗಿ ರಾಯಬರೇಲಿ ಮತ್ತು ಅಮೇಠಿ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಹಾಗಾಗಿ, ಕಾಂಗ್ರೆಸ್ ಪಕ್ಷದ ನಾಯಕರು ಈ ಎರಡು ಕ್ಷೇತ್ರಗಳ ಚಿಂತೆ ಬಿಟ್ಟು ದೇಶದ ಇತರ ಭಾಗಗಳಲ್ಲಿ ಪ್ರಚಾರ ಮಾಡಬಹುದು. ಕಾಂಗ್ರೆಸ್‌ನ ಪ್ರಮುಖ ನಾಯಕರು ಈ ಎರಡು ಕ್ಷೇತ್ರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವಂತಾಗಿದ್ದರೆ ಉತ್ತರ ಪ್ರದೇಶದ ಹೊರಗೆ ಬಿಜೆಪಿಗೆ ಹೆಚ್ಚು ಲಾಭವಾಗುತ್ತಿತ್ತು’ ಎಂದು ಮಾಯಾವತಿ ಹೇಳಿದ್ದಾರೆ.

ಇದು, ಮಾಯಾವತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ ತಿರುಗೇಟು ಕೂಡ ಹೌದು. ಎಸ್‌ಪಿ ಮತ್ತು ಕಾಂಗ್ರೆಸ್‌ ನಡುವೆ ಒಳ ಒಪ್ಪಂದ ಆಗಿದೆ. ಅದು ‘ಬೆಹನ್‌ಜಿ’ಗೆ ಗೊತ್ತಿಲ್ಲ ಎಂದು ಮೋದಿ ಅವರು ಹೇಳಿಕೆ ನೀಡಿದ್ದರು. ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟದ ನಡುವೆ ಬಿರುಕು ಮೂಡಿಸಲು ಮೋದಿ ಅವರು ಪ್ರಯತ್ನಿಸಿದ್ದು ಇದು ಮೊದಲೇನೂ ಅಲ್ಲ. ‘ಎಸ್‌ಪಿ–ಬಿಎಸ್‌ಪಿಯ ಹುಸಿ ಗೆಳೆತನ ಮೇ 23ರಂದು ಕೊನೆಯಾಗಲಿದೆ. ಮಾಯಾವತಿಯವರ ಗಮನಕ್ಕೆ ಬಾರದಂತೆ ಎಸ್‌ಪಿ ಮತ್ತು ಕಾಂಗ್ರೆಸ್‌ ದೊಡ್ಡ ಆಟ ಆಡುತ್ತಿದೆ’ ಎಂದು ಮೋದಿ ಅವರು ಹೇಳಿದ್ದರು.

ಬಿಎಸ್‌ಪಿ ಜತೆಗೆ ಹೊಂದಾಣಿಕೆ ಇರುವುದು ಅಥವಾ ಹೊಂದಾಣಿಕೆ ಇದೆ ಎಂಬ ಭಾವನೆ ಜನರಲ್ಲಿ ಉಂಟಾಗುವುದರಿಂದ ಬಿಜೆಪಿಗೆ ಬಹಳ ಅನುಕೂಲ ಇದೆ. ದಲಿತ ವಿರೋಧಿ ಎಂಬ ಭಾವನೆಯ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಬಿಜೆಪಿಗೆ ಇದು ಬಹಳ ಮುಖ್ಯ. ಯಾವುದೇ ಪಕ್ಷವನ್ನು ಬಿಜೆಪಿ ಚುನಾವಣೆ ಬಳಿಕ ಜತೆಗೆ ಸೇರಿಸಿಕೊಳ್ಳಬಹುದು. ನವೀನ್‌ ಪಟ್ನಾಯಕ್‌ ಅವರ ಬಿಜೆಡಿ, ಬಿಜೆಪಿಗೆ ಹಿಂದೆ ವಿಷಯಾಧಾರಿತ ಬೆಂಬಲ ನೀಡಿದ ಮಾದರಿ ಇಲ್ಲಿ ಇದೆ. ಮಾಯಾವತಿ ಮತ್ತು ಮಮತಾ ಅವರಿಬ್ಬರೂ ಹಿಂದೆ ಬಿಜೆಪಿ ಜತೆಗೆ ಕೈಜೋಡಿಸಿದ್ದರು. ಮಾಯಾವತಿ ಅವರು ಬಿಜೆಪಿ ಬೆಂಬಲದಿಂದ ಎರಡು ಬಾರಿ ಮುಖ್ಯಮಂತ್ರಿ ಕೂಡ ಆಗಿದ್ದರು.

2014ರ ಲೋಕಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿಯೂ ಗೆಲ್ಲಲಾಗದ ಮಾಯಾವತಿ ಅವರು ಒಬಿಸಿ–ದಲಿತ ಮತ್ತು ಮುಸ್ಲಿಂ ಒಗ್ಗಟ್ಟು ರೂಪಿಸಿ ತಮ್ಮ ಪಕ್ಷದ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ದಲಿತ ಮತದಾರರನ್ನು ಗೊಂದಲಕ್ಕೆ ಈಡು ಮಾಡುವ ಬಿಜೆಪಿ ಕಾರ್ಯತಂತ್ರ ಮಾಯಾವತಿ ಅವರಿಗೆ ಅರಿವಾಗಿದೆ. ಹಾಗಾಗಿಯೇ ಐದನೇ ಹಂತದ ಮತದಾನದ ಹೊತ್ತಿಗೆ ಅವರು ತಮ್ಮ ಪ್ರಚಾರ ಶೈಲಿಯನ್ನೇ ಬದಲಾಯಿಸಿದ್ದಾರೆ. ಅಮೇಠಿ ಮತ್ತು ರಾಯಬರೇಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮೈತ್ರಿಕೂಟದ ಬೆಂಬಲ ಇದೆ ಎಂದು ಘೋಷಿಸಿದ್ದಾರೆ.

ಮೋದಿ ಅವರು ವಿಭಜಿಸಿ ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಮಾಯಾವತಿ ಆರೋಪಿಸಿದ್ದಾರೆ. ‘ಹಿಂದಿನ ಹಂತಗಳ ಮತದಾನದಲ್ಲಿ ಬಹಳ ಹಿಂದೆ ಬಿದ್ದಿರುವ ಕಾರಣಕ್ಕೆ ಬಿಜೆಪಿ ಹೀಗೆಲ್ಲ ಮಾಡುತ್ತಿದೆ’ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ. ಎಲ್ಲಿ, ಯಾರು, ಯಾರನ್ನು ವಿಭಜಿಸಿದರು, ಯಾರು, ಯಾರ ಜತೆಗೆ ಸೇರಿಕೊಳ್ಳುತ್ತಾರೆ ಎಂಬುದು ಮೇ 23ರ ನಂತರವಷ್ಟೇ ಗೊತ್ತಾಗಲಿದೆ.

ದಲಿತರಿಗೆ ಸಂದೇಶ

ಚುನಾವಣೆಯ ಬಳಿಕ ಬಿಜೆಪಿ ಮತ್ತು ಬಿಎಸ್‌ಪಿ ಒಂದಾಗುವ ಸಾಧ್ಯತೆ ಇದೆ. ಹಾಗಾಗಿ, ಬಿಎಸ್‌ಪಿ ಸ್ಪರ್ಧೆಯಲ್ಲಿ ಇಲ್ಲದ ಕ್ಷೇತ್ರಗಳಲ್ಲಾದರೂ ದಲಿತರು ಬಿಜೆಪಿಗೆ ಮತ ಹಾಕಬೇಕು ಎಂಬ ಸಂದೇಶವನ್ನು ಪೂರ್ವಾಂಚಲದ ಮತದಾರರಿಗೆ ರವಾನಿಸುವುದು ಮೋದಿಯವರ ಉದ್ದೇಶವಾಗಿರಬಹುದು ಎಂದು ರಾಜಕೀಯ ವಿಶ್ಲೇಷಕ ರಶೀದ್‌ ಕಿದ್ವಾಯಿ ಹೇಳುತ್ತಾರೆ.

‘ಬಹುಮತ ಬಾರದಿರುವ ಸಾಧ್ಯತೆ ಹೆಚ್ಚು ಎಂಬ ಹತಾಶೆ ಬಿಜೆಪಿಯಲ್ಲಿ ಇದೆ ಎಂಬುದನ್ನೂ ಇದು ತೋರಿಸುತ್ತದೆ. ಹಾಗಾಗಿ, ಇಂತಹ ಮಾತಿನ ಮೂಲಕ ಮೈತ್ರಿ ಪಕ್ಷಗಳಿಗೆ ಬಿಜೆಪಿ ಬಲೆ ಬೀಸಿದೆ. ಸಿನಿಮಾ ನಟ ಅಕ್ಷಯ ಕುಮಾರ್‌ ಅವರಿಗೆ ನೀಡಿದ ಸಂದರ್ಶನದಲ್ಲಿ, ‘ಮಮತಾ ಬ್ಯಾನರ್ಜಿ ಅವರು ತಮಗೆ ಉಡುಗೊರೆ ಕಳುಹಿಸುತ್ತಿರುತ್ತಾರೆ’ ಎಂದು ಮೋದಿ ಹೇಳಿದ್ದನ್ನೂ ಈ ಹಿನ್ನೆಲೆಯಲ್ಲಿ ನೋಡಬಹುದು’ ಎಂದು ಕಿದ್ವಾಯಿ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT