ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಯಂತ್ರ; ಅಪಪ್ರಚಾರಕ್ಕೆ ಕಿವಿಗೊಡಬೇಡಿ

ಸಾಮಾಜಿಕ ಜಾಲ ತಾಣಗಳಲ್ಲಿ ಮತಯಂತ್ರ ಕಾರ್ಯದ ಬಗ್ಗೆ ಅಪಪ್ರಚಾರ, ಜನಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸಿಇಒ ಸೂಚನೆ
Last Updated 30 ಮಾರ್ಚ್ 2018, 7:12 IST
ಅಕ್ಷರ ಗಾತ್ರ

ತುಮಕೂರು: ‘ಸಾಮಾಜಿಕ ಜಾಲ ತಾಣಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಜನರು ಇಂತಹ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಮತದಾರರಿಗೆ ಚುನಾವಣಾ ಸಿಬ್ಬಂದಿ ಮನವರಿಕೆ ಮಾಡಿಕೊಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮತದಾನ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ ಜಾಗೃತಿ ಸಮಿತಿ (ಸ್ವೀಪ್ ಸಮಿತಿ) ಅಧ್ಯಕ್ಷೆ ಅನೀಸ್ ಕಣ್ಮಣಿ ಜಾಯ್ ಹೇಳಿದರು.

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗೆ ಗುರುವಾರ ಇವಿಎಂ ಹಾಗೂ ಮತ ದೃಢೀಕರಣ ಯಂತ್ರ (ವಿವಿಪ್ಯಾಟ್) ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಮತದಾನ ಪ್ರಕ್ರಿಯೆಯಲ್ಲಿ ಬಳಸಲಾಗುವ ಮತಯಂತ್ರದಲ್ಲಿ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್, ವಿವಿ ಪ್ಯಾಟ್ ಹಾಗೂ ವಿವಿ ಪ್ಯಾಟ್ ಡಿಸ್‌ಪ್ಲೇ ಯುನಿಟ್ ಸೇರಿದಂತೆ ನಾಲ್ಕು ಯುನಿಟ್‌ಗಳು ಇರುತ್ತವೆ. ಮತದಾರ ಬ್ಯಾಲೆಟ್ ಯುನಿಟ್‌ನಲ್ಲಿ ಮತ ಚಲಾಯಿಸಿದ ಬಳಿಕ ವಿವಿ ಪ್ಯಾಟ್ ಯಂತ್ರದಲ್ಲಿರುವ ಡಿಜಿಟಲ್ ಪರದೆಯ ಮೇಲೆ ಮತದಾರ ಮತ ಚಲಾಯಿಸಿದ ವಿವರ ಮೂಡಿ ಬರಲಿದೆ ಎಂದು ಹೇಳಿದರು.

ಪುಸ್ತಕ ಬಿಡುಗಡೆ: ಮತದಾನ ಪ್ರಮಾಣ ಹೆಚ್ಚಿಸುವ ಪ್ರಯುಕ್ತ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಸ್ವೀಪ್ ಚಟುವಟಿಕೆ ಕುರಿತ ಕ್ರಿಯಾ ಯೋಜನೆಯ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.

ಇದಕ್ಕೂ ಮೊದಲು ರಿಜ್ವಾನ್ ಹೊಸಕೇರಿ ಹಾಗೂ ಇತರ ಅಧಿಕಾರಿಗಳು ಇವಿಎಂ ಮತ್ತು ವಿವಿಪ್ಯಾಟ್ ಕಾರ್ಯನಿರ್ವಹಣೆ, ಜೋಡಣೆ, ಬಳಕೆ ವಿಧಾನ, ತಾಂತ್ರಿಕ ಸಿಬ್ಬಂದಿಯ ನೆರವು ಹೇಗೆ ಪಡೆಯಬೇಕು. ಬಳಕೆ ಮುನ್ನ ಮತ್ತು ಬಳಕೆ ಮಾಡುವಾಗ ಅನುಸರಿಸುವ ಕ್ರಮಗಳನ್ನು ಅಧಿಕಾರಿ ಮತ್ತು ಸಿಬ್ಬಂದಿಗೆ ತಿಳಿಸಿಕೊಟ್ಟರು.

ತರಬೇತಿಯಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಆಯ್ದು ಯಂತ್ರಗಳ ಕಾರ್ಯ ನಿರ್ವಹಣೆ, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪ್ರಶ್ನಿಸಿ ಖಾತ್ರಿ ಪಡಿಸಿಕೊಂಡರು.

ಇವಿಎಂ ಮತ್ತು ವಿವಿಪ್ಯಾಟ್ ಬಳಕೆ ಬಗ್ಗೆ ಭಯಬೇಡ. ಅನವಶ್ಯಕ ಗೊಂದಲು ಪಡುವುದು ಬೇಡ ಎಂದು ತಿಳಿಸಿದರು.

ವಿವಿಪ್ಯಾಟ್ ಯಂತ್ರದ ನೋಡಲ್ ಅಧಿಕಾರಿ ಗಾಯಿತ್ರಿ, ನಿರ್ಮಿತಿ ಕೇಂದ್ರದ ಅಧಿಕಾರಿ ರಾಜಶೇಖರ್, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ರಾಜಕುಮಾರ್, ಬಿಇಎಲ್ ಎಂಜಿನಿಯರ್‌ಗಳು ಇದ್ದರು.

**

ವಿವಿಪ್ಯಾಟ್ ಕಾರ್ಯವಿಧಾನ ತಿಳಿಸಿ

ಇದೇ ಪ್ರಪ್ರಥಮ ಬಾರಿಗೆ ಇವಿಎಂನೊಂದಿಗೆ ವಿವಿ ಪ್ಯಾಟ್ ಬಳಸಲಾಗುತ್ತಿದೆ. ವಿವಿಪ್ಯಾಟ್ ಯಂತ್ರದ ವಿಶೇಷ, ಅದರ ಕಾರ್ಯದ ಮಹತ್ವ ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ಸಿಇಒ ಹೇಳಿದರು.

ವಿವಿ ಪ್ಯಾಟ್‌ನಲ್ಲಿ ಕ್ರಮ ಸಂಖ್ಯೆ, ಅಭ್ಯರ್ಥಿಯ ಹೆಸರು, ಚಿಹ್ನೆ ಮೂಡಲಿದ್ದು, ಇದರಿಂದ ಮತದಾರ ತಾನು ಯಾವ ಅಭ್ಯರ್ಥಿಗೆ, ಪಕ್ಷಕ್ಕೆ ಮತ ಚಲಾಯಿಸಿದ್ದೇನೆ ಎನ್ನುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ ಎಂಬುದನ್ನು ತಿಳಿಸಿಕೊಡಬೇಕು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT