ಶನಿವಾರ, ಆಗಸ್ಟ್ 17, 2019
24 °C

ಟಿಟಿಡಿ; ವಿಐಪಿ ದರ್ಶನ ರದ್ದತಿಗೆ ತಡೆ

Published:
Updated:

ಅಮರಾವತಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ಮೂರು ವರ್ಗದ ವಿಐಪಿ ದರ್ಶನ ವ್ಯವಸ್ಥೆಗೆ ಕೊನೆಹಾಡುವ ಟಿಟಿಡಿ ಅಧ್ಯಕ್ಷ ವೈ.ಎಸ್‌. ಸುಬ್ಬಾರೆಡ್ಡಿ ಅವರ ಘೋಷಣೆಗೆ ಆಂಧ್ರಪ್ರದೇಶ ಹೈಕೋರ್ಟ್‌ ತಡೆನೀಡಿದೆ. ಸುಬ್ಬಾರೆಡ್ಡಿ ಅವರ ಘೋಷಣೆಯನ್ನು ಮಾನ್ಯ ಮಾಡಲು ಹೈಕೋರ್ಟ್‌ ನಿರಾಕರಿಸಿದೆ.

ಈ ಬದಲಾವಣೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಟಿಟಿಡಿ ಮಂಡಳಿಗೆ ಹೈಕೋರ್ಟ್‌ ಸೂಚನೆ ನೀಡಿದೆ. ಈ ಘೋಷಣೆಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಏಕೆ ಮುಂದುವರಿಸಬೇಕು ಎಂಬುದಕ್ಕೆ ಅಗತ್ಯ ಕಾರಣವನ್ನು ಒದಗಿಸುವಂತೆಯೂ ಮಂಡಳಿಗೆ ಸೂಚನೆ ನೀಡಿದೆ.

ಟಿಟಿಡಿಯಲ್ಲಿ ಎಲ್‌–1, ಎಲ್‌–2 ಮತ್ತು ಎಲ್‌–3 ಎಂಬ ಮೂರ್ಗದ ವಿಐಪಿ ದರ್ಶನ ವ್ಯವಸ್ಥೆ ಜಾರಿಯಲ್ಲಿತ್ತು. ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ ಟಿಟಿಡಿ ಮುಖ್ಯಸ್ಥರನ್ನು ತೆರವು ಮಾಡಿತ್ತು. ಆ ಸ್ಥಾನಕ್ಕೆ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರ ಸಂಬಂಧಿ ವೈ.ಎಸ್‌.ಸುಬ್ಬಾರೆಡ್ಡಿ ಅವರನ್ನು ಸರ್ಕಾರವು ನೇಮಕ ಮಾಡಿತ್ತು. ಇದರ ಬೆನ್ನಲ್ಲೇ ಟಿಟಿಡಿ ಮಂಡಳಿಯ ಎಲ್ಲಾ ಸದಸ್ಯರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.‌ ಈ ಸ್ಥಾನಗಳಿಗೆ ನೂತನ ಸದಸ್ಯರನ್ನು ಸರ್ಕಾರವು ಇನ್ನಷ್ಟೇ ನೇಮಕ ಮಾಡಬೇಕಿದೆ.

ವಿಐಪಿ ದರ್ಶನ ವ್ಯವಸ್ಥೆಯನ್ನು ರದ್ದುಪಡಿಸುವ ಸುಬ್ಬಾರೆಡ್ಡಿ ಅವರ ಘೋಷಣೆಯ ವಿರುದ್ಧ ಹೈಕೋರ್ಟ್‌ನಲ್ಲಿ ಹಲವರು ಅರ್ಜಿ ಸಲ್ಲಿಸಿದ್ದರು.

ಟಿಟಿಡಿ ಮಂಡಳಿಯಲ್ಲಿ ಈಗ ಸದಸ್ಯರೇ ಇಲ್ಲ. ಕೇವಲ ಮಂಡಳಿಯ ಅಧ್ಯಕ್ಷರು ಹೊರಡಿಸಿದ ಘೋಷಣೆಯನ್ನು ಆದೇಶ ಎಂದು ಪರಿಗಣಿಸಲು ಸಾಧ್ಯವಿಲ್ಲ. ಈಗಿರುವ ವಿಐಪಿ ದರ್ಶನ ವ್ಯವಸ್ಥೆಯನ್ನು ರದ್ದುಪಡಿಸಿ, ಹೊಸ ವಿಐಪಿ ದರ್ಶನ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಹುನ್ನಾರ ನಡೆಸಿದೆ ಎಂಬುದು ಅರ್ಜಿದಾರರ ವಾದ.

Post Comments (+)