ಸೋಮವಾರ, ಸೆಪ್ಟೆಂಬರ್ 23, 2019
24 °C

ಅರುಣ್‌ ಜೇಟ್ಲಿ ನಿಧನ: ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಂತಿಮ ದರ್ಶನ

Published:
Updated:

ನವದೆಹಲಿ: ತೀವ್ರ ಅನಾರೋಗ್ಯದಿಂದ ದೆಹಲಿಯ ಏಮ್ಸ್‌ನಲ್ಲಿ ನಿಧನರಾದ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರ ಪಾರ್ಥೀವ ಶರೀರವನ್ನು ದೆಹಲಿಯ ಬಿಜೆಪಿ ಕಚೇರಿಗೆ ತರಲಾಗಿದ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಇನ್ನಿಲ್ಲ

ಶನಿವಾರ ಮಧ್ಯಾಹ್ನವೇ ಅವರ ದೇಹವನ್ನು ದೆಹಲಿಯ ಅವರ ನಿವಾಸಕ್ಕೆ ತರಲಾಗಿತ್ತು, ಅಲ್ಲಿ ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಸೇರಿದಂತೆ ಬಿಜೆಪಿಯ ಹಲವು ನಾಯಕರು, ಕಾಂಗ್ರೆಸ್‌ ವರಿಷ್ಠೆ ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಮೋತಿಲಾಲ್‌ ವೋರಾ, ಎನ್‌ಸಿಪಿ ನಾಯಕ ಶರದ್ ಪವಾರ್‌, ಪ್ರಫುಲ್‌ ಪಟೇಲ್‌, ಆರ್‌ಎಲ್‌ಡಿ ನಾಯಕ ಅಜಿತ್‌ ಸಿಂಗ್‌, ಟಿಡಿಪಿ ನಾಯಕ ಎನ್‌.ಚಂದ್ರಬಾಬು ನಾಯ್ಡು  ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಜೇಟ್ಲಿ ಅವರ ಅಂತಿಮ ದರ್ಶನ ಪಡೆದರು.

ಇದನ್ನೂ ಓದಿ: ಕರ್ನಾಟಕದೊಂದಿಗೆ ಜೇಟ್ಲಿ ನಂಟು 

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅರುಣ್‌ ಜೇಟ್ಲಿ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದು ಪಕ್ಷದ ಕಾರ್ಯಕರ್ತರ ಹಾಗೂ ಸಂಘ ಪರಿವಾರದ ಮುಖಂಡರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮಧ್ಯಾಹ್ನ 1.30ರ ವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಯಮುನಾ ನದಿಯ ದಡದಲ್ಲಿರುವ ನಿಗಂಬೋದ್‌ ಘಾಟ್‌ಗೆ ಜೇಟ್ಲಿ ಅವರ ದೇಹವನ್ನು ಮೆರವಣಿಗೆಯ ಮೂಲಕ ತರಲಾಗುವುದು.

2.30ರ ಸುಮಾರಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಅರುಣ್‌ ಜೇಟ್ಲಿ ಅವರ ಕುಟುಂಬ ಮೂಲಗಳು ತಿಳಿಸಿವೆ. 

ಬಿಜೆಪಿ ಕೇಂದ್ರ ಕಚೇರಿಯ ಸುತ್ತಮುತ್ತ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ಅಂತಿಮ ಯಾತ್ರೆಯ ಮೆರವಣಿಗೆ ಸಾಗುವ ರಸ್ತೆಗಳಲ್ಲೂ ಪೊಲೀಸ್‌ ಭದ್ರತೆ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. 

ಇದನ್ನೂ ಓದಿ: ಆಪದ್ಬಾಂಧವ, ಸುಧಾರಕ ಹಣಕಾಸು ಸಚಿವ ಅರುಣ್ ಜೇಟ್ಲಿ

ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿದ್ದ ಅರುಣ್‌ ಜೇಟ್ಲಿ  ಹಣಕಾಸು, ಕಾನೂನು ಮತ್ತು ಸಂಸದೀಯ, ಕೈಗಾರಿಕೆ ಮತ್ತು ವಾಣಿಜ್ಯ, ರಕ್ಷಣ ಸಚಿವರಾಗಿ ಕೆಲಸ ಮಾಡಿದ್ದರು. ಮೃತರು ಪತ್ನಿ ಸಂಗೀತಾ, ಮಗಳು ಸೋನಾಲಿ, ಪುತ್ರ ರೋಹನ್ ಅವರನ್ನು ಅಗಲಿದ್ದಾರೆ. 

‍ಇದನ್ನೂ ಓದಿ: ಮೋದಿ ಹಿಂದಿನ ಶಕ್ತಿಯಾಗಿದ್ದ ಜೇಟ್ಲಿ

Post Comments (+)