ಭಾನುವಾರ, ಜುಲೈ 3, 2022
27 °C

ದೆಹಲಿ ಕೊರೊನಾ ಚಿತ್ರಣ: ಕೇಜ್ರಿವಾಲ್‌ ಕೈ ಹಿಡಿಯದ ಜನಜಾಗೃತಿ ಅನುಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಾಣು ವಿರುದ್ಧದ ಹೋರಾಟಕ್ಕೆ ಸಂಬಂಧಿಸಿ ಎಲ್ಲ ಜಿಲ್ಲೆಗಳೂ ಕೆಂಪು ವಲಯದಲ್ಲಿಯೇ ಇರುವ ಏಕೈಕ ರಾಜ್ಯ ದೆಹಲಿ. ದೇಶದ ಮೊದಲ ಕೊರೊನಾ ಪ್ರಕರಣ ಜನವರಿ 30ರಂದು ಕೇರಳದಿಂದ ವರದಿಯಾಗಿತ್ತು. ಅದಾಗಿ ಸುಮಾರು ಒಂದು ತಿಂಗಳ ನಂತರ, ಮಾರ್ಚ್‌ 2ರಂದು ದೆಹಲಿಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಈ ರೋಗಿ ಇಟಲಿಗೆ ಹೋಗಿ ಬಂದಿದ್ದರು. ನಂತರ, ಮಾರ್ಚ್‌ 5ರಂದು ಗಾಜಿಯಾಬಾದ್‌ ಮತ್ತು 6ರಂದು ಉತ್ತಮ್‌ನಗರದಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾದವು. ಈ ಇಬ್ಬರು ರೋಗಿಗಳು ಕೂಡ ವಿದೇಶಕ್ಕೆ ಹೋಗಿ ಬಂದ ಹಿನ್ನೆಲೆ ಹೊಂದಿದ್ದರು. 

ನಂತರದ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದದ್ದು ಬಹಳ ನಿಧಾನವಾಗಿ. ದೇಶದಾದ್ಯಂತ ಲಾಕ್‌ಡೌನ್‌ ಆರಂಭವಾದ ಮಾರ್ಚ್‌ 24ರಂದು ದೆಹಲಿಯಲ್ಲಿ ಇದ್ದ ರೋಗಿಗಳ ಸಂಖ್ಯೆ 30 ಮಾತ್ರ. ದೇಶವನ್ನು ಸ್ತಬ್ಧಗೊಳಿಸಿ, ಕೊರೊನಾ ಪಿಡುಗು ಎದುರಿಸಲು ಸಜ್ಜಾಗುವ ವಿಚಾರದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸಹಮತವಿತ್ತು. ‘ಅಸಾಧಾರಣ ಸನ್ನಿವೇಶದಲ್ಲಿ ಅಸಾಮಾನ್ಯ ಕ್ರಮ ಕೈಗೊಳ್ಳಲೇಬೇಕಾಗುತ್ತದೆ’ ಎಂದು ಅವರು ಅಂದು ಹೇಳಿದ್ದರು. 

ಮಾರ್ಚ್‌ 24ರ ಹಿಂದಿನ 40 ತಾಸುಗಳಲ್ಲಿ ದೆಹಲಿಯಲ್ಲಿ ಒಂದು ಪ್ರಕರಣವೂ ದೃಢಪಟ್ಟಿರಲಿಲ್ಲ. ಆದರೆ, ಕೊರೊನಾ ನಿಯಂತ್ರಣಕ್ಕೆ ಬಂತು ಎಂದು ಸಂಭ್ರಮಿಸಲು ಸಾಧ್ಯವಿಲ್ಲ. ಪಾಶ್ಚಾತ್ಯ ದೇಶಗಳ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ ಎಂಬ ಎಚ್ಚರಿಕೆಯ ಮಾತನ್ನು ಕೇಜ್ರಿವಾಲ್‌ ಅಂದೇ ಆಡಿದ್ದರು.

ಡೆಂಘಿ ಜ್ವರ ದೆಹಲಿಯ ಬಹುದೊಡ್ಡ ಸಮಸ್ಯೆ. ಕಳೆದ ವರ್ಷ ಈ ಸಮಸ್ಯೆಯನ್ನು ಕೇಜ್ರಿವಾಲ್‌ ಯಶಸ್ವಿಯಾಗಿ ನಿಭಾಯಿಸಿದ್ದರು. ಜನರಲ್ಲಿ ಜಾಗೃತಿ ಮೂಡಿಸುವ ಹತ್ತು ದಿನಗಳ ಅಭಿಯಾನವನ್ನು ನಡೆಸಿದ್ದರು. ಕೊರೊನಾವನ್ನು ಎದುರಿಸಲು ಕೂಡ ಜನಜಾಗೃತಿಯೇ ಬಹುದೊಡ್ಡ ಅಸ್ತ್ರ. ಕೇಜ್ರಿವಾಲ್‌ ಅವರಿಗೆ ಇಂತಹ ಜಾಗೃತಿ ಮೂಡಿಸಿದ ಅನುಭವ ಇತ್ತು. ಆದರೆ, ಹೊಸ ಪಿಡುಗಿನ ಸಂದರ್ಭದಲ್ಲಿ ಆ ಮಟ್ಟದ ಜನಜಾಗೃತಿ ಮೂಡಿಸಲು ಸಾಧ್ಯವಾಗಲಿಲ್ಲ ಎಂಬುದು ನಂತರದ ದಿನಗಳಲ್ಲಿ ಸ್ಪಷ್ಟವಾಗುತ್ತಾ ಹೋಗಿದೆ.

ದೆಹಲಿಗೆ ದೊಡ್ಡ ಆಘಾತವಾಗಿ ಎರಗಿದ್ದು ನಿಜಾಮುದ್ದೀನ್‌ನ ತಬ್ಲೀಗ್‌ ಜಮಾತ್‌ ಧರ್ಮಸಭೆ. ಇಲ್ಲಿನ ತಬ್ಲೀಗ್‌ ಕೇಂದ್ರದಲ್ಲಿ ಮಾರ್ಚ್‌ 12ರಿಂದ 22ರವರೆಗೆ ನಡೆದ ಧರ್ಮಸಭೆಯಲ್ಲಿ ಭಾರತದ ವಿವಿಧ ಭಾಗದ ಮತ್ತು ವಿವಿಧ ದೇಶಗಳ ಸಾವಿರಾರು ಜನರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಮಂದಿ ಅಲ್ಲಿಯೇ ಉಳಿದಿದ್ದರು. ಮಾರ್ಚ್‌ 22ರ ಜನತಾ ಕರ್ಫ್ಯೂ ಮತ್ತು ನಂತರದ ಲಾಕ್‌ಡೌನ್‌ನಿಂದಾಗಿ ಅವರು ಹೊರಗೆ ಹೋಗುವುದು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. 

ಮಾರ್ಚ್‌ 25ರಂದು ಸಿಕ್ಕ ಮಾಹಿತಿ ದೆಹಲಿ ಆಡಳಿತಕ್ಕೆ ದುಃಸ್ವಪ್ನವೇ ಆಗಿತ್ತು. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ದೃಢಪಟ್ಟ ಎಲ್ಲ ಆರು ರೋಗಿಗಳು ತಬ್ಲೀಗ್‌ ಸಭೆಯಲ್ಲಿ ಭಾಗವಹಿಸಿದ್ದರು ಎಂಬುದೇ ಆ ಮಾಹಿತಿ. ಈ ಆರು ಮಂದಿ ಭಾಗವಹಿಸಿದ್ದ ಸಭೆಯಲ್ಲಿ 4,500ಕ್ಕೂ ಹೆಚ್ಚು ಜನರು ಇದ್ದರು. ಅವರಿಗೆ ಯಾರಿಗೂ ಕೊರೊನಾ ಸೋಂಕಿನ ಬಗ್ಗೆ ತಿಳಿದೇ ಇರಲಿಲ್ಲ. ಅಲ್ಲಿ ಅಂತರ ಕಾಯ್ದುಕೊಳ್ಳುವಿಕೆಯಂತಹ ಮುನ್ನೆಚ್ಚರಿಕೆಯನ್ನೂ ತೆಗೆದುಕೊಂಡಿರಲಿಲ್ಲ. ಹಾಗಾಗಿ, ಈ ಎಲ್ಲ ಜನರ ಜತೆ ಸಂಪರ್ಕ ಹೊಂದಿದ್ದವರನ್ನು ಪತ್ತೆ ಮಾಡುವುದು, ಕೇಂದ್ರದಲ್ಲಿ ಉಳಿದುಕೊಂಡಿದ್ದವರನ್ನು ಪರೀಕ್ಷೆ ಮಾಡಿ ತೆರವು ಮಾಡುವುದು ಆಡಳಿತಕ್ಕೆ ದೊಡ್ಡ ಸವಾಲಾಗಿತ್ತು. ಇದರೊಂದಿಗೆ ದೆಹಲಿಯ ಕೊರೊನಾ ಹೋರಾಟದ ಚಿತ್ರಣವೇ ಬದಲಾಯಿತು. ಕೊರೊನಾ ಪಿಡುಗಿನ ಸಂದರ್ಭದಲ್ಲಿ ಇಷ್ಟೊಂದು ದೊಡ್ಡ ಸಮಾವೇಶಕ್ಕೆ ಅನುಮತಿ ಕೊಟ್ಟವರಾರು, ವಿದೇಶದಿಂದ ಬರುವವರಿಗೆ ವೀಸಾ ಯಾಕೆ ನೀಡಲಾಯಿತು ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗಲೇ ಇಲ್ಲ. 

ಕೊರೊನಾ ಪಿಡುಗಿನ ಜತೆಗೆ ವಲಸೆ ಕಾರ್ಮಿಕರ ಸಮಸ್ಯೆಯೂ ದೆಹಲಿ ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿತ್ತು. ಇದನ್ನು ನಿಭಾಯಿಸುವಲ್ಲಿಯೂ ಕೇಜ್ರಿವಾಲ್‌ ಹೆಚ್ಚಿನ ಎಚ್ಚರ ವಹಿಸಿದ್ದಾರೆ. ಸುಮಾರು ಒಂದು ಕೋಟಿ ಜನರಿಗೆ ಆಹಾರ ಪೂರೈಸುವ ವ್ಯವಸ್ಥೆ ಮಾಡಿದ್ದಾಗಿ ಅವರು ಲಾಕ್‌ಡೌನ್‌ನ ಆರಂಭದ ದಿನಗಳಲ್ಲಿಯೇ ಹೇಳಿದ್ದರು. ದಿನಗೂಲಿ ಕಾರ್ಮಿಕರಿಗೆ ಒಂದು ಬಾರಿಯ ಪರಿಹಾರವಾಗಿ ₹5,000 ನೀಡುವ ವಾಗ್ದಾನವನ್ನೂ ನೀಡಿದ್ದಾರೆ. ದೆಹಲಿಯಲ್ಲಿರುವ ವಲಸೆ ಕಾರ್ಮಿಕರು ಮನೆಗೆ ಮರಳಲು ಬಯಸಿದರೆ, ಅವರ ರೈಲು ಪ್ರಯಾಣದ ಶುಲ್ಕ ಭರಿಸಲು ತವರು ರಾಜ್ಯಗಳು ಸಿದ್ಧವಿಲ್ಲದಿದ್ದರೆ ಅದನ್ನೂ ದೆಹಲಿ ಸರ್ಕಾರ ಭರಿಸಲಿದೆ ಎಂಬ ಹೃದಯ ವೈಶಾಲ್ಯವನ್ನೂ ಕೇಜ್ರಿವಾಲ್ ತೋರಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು