ಗೋಧ್ರೋತ್ತರ ಗಲಭೆ: ಬದಲಾದ ವಾಜಪೇಯಿ ಧ್ವನಿ

7

ಗೋಧ್ರೋತ್ತರ ಗಲಭೆ: ಬದಲಾದ ವಾಜಪೇಯಿ ಧ್ವನಿ

Published:
Updated:

2002ರಲ್ಲಿ ಗುಜರಾತಿನಲ್ಲಿ ಭುಗಿಲೆದ್ದ ಗೋಧ್ರೋತ್ತರ ಗಲಭೆಗಳ ಜ್ವಾಲೆಗಳು ತಿಂಗಳುಗಟ್ಟಲೆ ತಣ್ಣಗಾಗಿರಲಿಲ್ಲ. ಮೋದಿಯವರಿಗೆ ರಾಜಧರ್ಮ ಪಾಲನೆಯ ಪಾಠ ಹೇಳಿದ್ದ ವಾಜಪೇಯಿ ದನಿ ಹಠಾತ್ತನೆ ಬದಲಾಗಿತ್ತು.

2002ರ ಏಪ್ರಿಲ್ 12ರಂದು ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಂದರ್ಭದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಆಡಿದ್ದ ಮಾತುಗಳು ಅವರನ್ನು ‘ಸೌಮ್ಯವಾದಿ’ ಎಂದು ನಂಬಿದ್ದವರ ಹುಬ್ಬೇರಿಸಿದ್ದವು. ಭಾರತವನ್ನು ಹಿಂದುತ್ವವಾದಿ ರಾಷ್ಟ್ರವಾಗಿ ಕಟ್ಟುವ ಬಿಜೆಪಿಯ ನಿಜ ಚಹರೆಯ ಮುಖವಾಡ ವಾಜಪೇಯಿ ಎಂಬ ಒಂದು ವರ್ಗದ ವ್ಯಾಖ್ಯಾನ ರುಜುವಾತಾಗಿತ್ತು.

ತಮಗಿದ್ದ ಮುಖವಾಡವನ್ನು ವಾಜಪೇಯಿ ಅಂದು ಕೈಯಾರೆ ಕಿತ್ತೊಗೆದಿದ್ದರು. ಪತ್ರಕರ್ತ ಬದುಕಿನುದ್ದಕ್ಕೂ ಭಾರತ ಕುರಿತು ವರದಿಗಳನ್ನು ಬರೆದ ಹೆಸರಾಂತ ಬ್ರಿಟಿಷ್ ಪತ್ರಕರ್ತ ಮಾರ್ಕ್ ಟಲಿ, ಸಿ.ಎನ್.ಎನ್.ಗೆ ಬರೆದ ವರದಿಯಲ್ಲಿ ಈ ಅಂಶವನ್ನು ದಾಖಲಿಸಿದ್ದಾರೆ.

ವಾಜಪೇಯಿ ಆ ಮಾತುಗಳನ್ನು ಬಾಯಿತಪ್ಪಿ ಆಡಿರಲಿಲ್ಲ. ‘ವಿಶ್ವದಲ್ಲಿ ಎಲ್ಲೆಲ್ಲಿ ಮುಸಲ್ಮಾನರಿದ್ದಾರೋ, ಅಲ್ಲೆಲ್ಲ ಕಲಹಗಳು... ಭಾರತದಲ್ಲಿ ಇತರೆ ಧರ್ಮಗಳಿಗೆ ಎಷ್ಟು ಸ್ವಾತಂತ್ರ್ಯ ನೀಡಬೇಕೆಂದು ತೀರ್ಮಾನಿಸುವ ಹಕ್ಕು ಹಿಂದೂಗಳಿಗೆ ಇದೆ’ ಎಂದು ಗುಡುಗಿದ್ದರು. ‘ಇಸ್ಲಾಂ ಎರಡು ಮುಖಗಳನ್ನು ಹೊಂದಿದೆ. ಒಂದು ಮುಖ ಸಹಿಷ್ಣುತೆಯನ್ನು ಬೋಧಿಸಿದರೆ ಇನ್ನೊಂದು ಮುಖ ಸೈರಣೆರಹಿತ ಉಗ್ರಗಾಮಿತನವನ್ನು ಪ್ರತಿಪಾದಿಸುತ್ತದೆ’ ಎಂದಿದ್ದರು.

ಅಂದಿಗೆ ಹದಿನೈದು ದಿನಗಳ ಹಿಂದೆಯಷ್ಟೇ ವ್ಯಕ್ತಪಡಿಸಿದ್ದ ವ್ಯಥೆ ಅವರ ದನಿಯಲ್ಲಿ ಮಾಯವಾಗಿತ್ತು. ‘ಶಾಂತಿಯ ಸಹಬಾಳ್ವೆಯಲ್ಲಿ ಮುಸಲ್ಮಾನರಿಗೆ ವಿಶ್ವಾಸ ಇಲ್ಲ. ಅವರು ಸಮಾಜದೊಂದಿಗೆ ಬೆರೆತು ಬದುಕುವುದಿಲ್ಲ. ಖಡ್ಗದ ಬಲದಿಂದ ಮತಪ್ರಚಾರ ಸಲ್ಲದು’ ಎಂದಿದ್ದರು.

ಗೋಧ್ರೋತ್ತರ ಮಾರಣಹೋಮ ಕುರಿತು ತಮ್ಮ ಪಕ್ಷದ ಕಟ್ಟರ್ ವಾದಿಗಳು ತಳೆದ ನಿಲುವಿನ ಜೊತೆ ವಾಜಪೇಯಿ ದನಿಗೂಡಿಸಿದ್ದರು. ‘ಮೊದಲು ಬೆಂಕಿ ಇಟ್ಟವರು ಯಾರು? ಬೆಂಕಿ ಹಬ್ಬಿದ್ದು ಹೇಗೆ?’ ಎಂದು ಸಾಬರಮತಿ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ ಬಿದ್ದು 59 ಮಂದಿ ಕರಸೇವಕರು ಮರಣಹೊಂದಿದ ದುರಂತದ ಕುರಿತು ಪ್ರಶ್ನಿಸಿದ್ದರು. ‘ಗೋಧ್ರಾದ ನಂತರ ನಡೆದದ್ದೂ ತಪ್ಪು’ ಎಂದರು.

‘ಗುಜರಾತ್ ದುರಂತದ ಆಳಕ್ಕಿಳಿದು ನೋಡಿದರೆ, ಜನ ಬಹು-ಧಾರ್ಮಿಕ ಸಂಸ್ಕೃತಿಯಲ್ಲಿ ಸಾಮರಸ್ಯದಿಂದ ಬದುಕಬಯಸುವುದನ್ನು ಕಾಣುತ್ತೇವೆ. ಜಾತ್ಯತೀತವಾದದಲ್ಲಿ ನಮ್ಮ ಗಾಢ ನಂಬಿಕೆಯನ್ನು ಯಾರೂ ಪ್ರಶ್ನಿಸಕೂಡದು’ ಎಂದಿದ್ದರು.

‘ಕೋಮುಗಲಭೆಗಳನ್ನು ಬೇಕೆಂದೇ ನಿಯಂತ್ರಿಸದೆ ನರಮೇಧ ನಡೆಯಲು ಬಿಟ್ಟರು’ ಎಂಬ ಕಟುಟೀಕೆಗಳಿಗೆ ಗುರಿಯಾಗಿದ್ದ ಮೋದಿಯವರ ಬೆಂಬಲಕ್ಕೆ ಬಿಜೆಪಿ ನಿಂತಿದ್ದನ್ನು ಅವರು ಸಮರ್ಥಿಸಿಕೊಂಡಿದ್ದರು. ಅದಕ್ಕೆ ತಿಂಗಳಿನ ಹಿಂದಷ್ಟೇ ಗೋಧ್ರಾ ಮತ್ತು ಗೋಧ್ರೋತ್ತರ ಗಲಭೆಗಳನ್ನು ಅವರು ಖಂಡಿಸಿದ್ದರು. ಕೋಮುಗಲಭೆಗಳು ಕೊನೆಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !