ಜನಮನದಲ್ಲಿ ನೆಲೆನಿಂತ ಮೋಡಿಗಾರ!

7

ಜನಮನದಲ್ಲಿ ನೆಲೆನಿಂತ ಮೋಡಿಗಾರ!

Published:
Updated:
Deccan Herald

ಜವಾಹರಲಾಲ್‌ ನೆಹರೂ ಮತ್ತು ಇಂದಿರಾ ಗಾಂಧಿ ನಂತರ ಜನಮಾನಸದಲ್ಲಿ ನೆಲೆನಿಂತ ರಾಜಕೀಯ ನಾಯಕ ಅಟಲ್ ಬಿಹಾರಿ ವಾಜಪೇಯಿ!

ಅಪರೂಪದ ವ್ಯಕ್ತಿತ್ವದ ವಾಜಪೇಯಿ ಈ ದೇಶ ಕಂಡ ವಿಭಿನ್ನ ರಾಜಕಾರಣಿ. ಅವರು ಪ್ರಧಾನಿಯಾಗಿ ಗುರುತಿಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ಉತ್ತಮ ಸಂಸದೀಯ ಪಟುವಾಗಿ, ಮುತ್ಸದ್ದಿಯಾಗಿ, ಪ್ರಖರ ವಾಗ್ಮಿಯಾಗಿಯೇ ಹೆಚ್ಚು ಪರಿಚಿತ. ಪ್ರಖರ ಪಾಂಡಿತ್ಯ, ಎಲ್ಲರೂ ತಲೆದೂಗುವಂತಹ ವಾಕ್ಚಾತುರ್ಯ ಮತ್ತು ಕವಿಹೃದಯದಿಂದ ಉಳಿದ ರಾಜಕಾರಣಿಗಳಿಗಿಂತ ಭಿನ್ನವಾಗಿ ನಿಂತಿದ್ದ ಅವರು ದೇಶದ ರಾಜಕಾರಣಕ್ಕೆ ಹೊಸ ಮೆರುಗು ನೀಡಿದ್ದರು.

1957ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿ ಐದು ದಶಕಗಳ ಕಾಲ ಸಂಸತ್ತಿನ ಸದಸ್ಯತ್ವ ಹೊಂದಿದ್ದ ಹೆಗ್ಗಳಿಕೆ ಅವರದು. ಪ್ರಧಾನಿಯಾಗುವ ಮೊದಲು 40 ವರ್ಷ ಅವರು ಸಂಸತ್‌ನಲ್ಲಿಯೇ ಕಳೆದಿದ್ದರು.

ಕ್ರಿಯಾಶೀಲ ಸಂಸದೀಯ ಪಟುವಾಗಿದ್ದ ಅವರಿಗೆ ಸಂಸತ್‌ ಮೊದಲ ಪ್ರೀತಿಯಾಗಿತ್ತು. ಸಂಸತ್‌ಗೆ ಬರುವ ಮುಂಚೆ ಅವರು ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಹಾಗಾಗಿಯೇ 1994ರಲ್ಲಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿತ್ತು.

ಉತ್ತಮ ವಾಗ್ಮಿಯಾಗಿದ್ದ ವಾಜಪೇಯಿ ಅವರ ಮಾತಿನ ಮೋಡಿಗೆ ಮರುಳಾಗದವರೇ ಇರಲಿಲ್ಲ. ಸದನದಲ್ಲಿ ವಾಜಪೇಯಿ ಎದ್ದು ನಿಂತರೆ ಮಾತಿನ ಹಬ್ಬದಂತಿರುತ್ತಿತ್ತು. ಸದನದ ಬಹುತೇಕ ಎಲ್ಲ ಕುರ್ಚಿಗಳು ಭರ್ತಿಯಾಗುತ್ತಿದ್ದವು. ವಿರೋಧ ಪಕ್ಷದ ಸದಸ್ಯರ ಆದಿಯಾಗಿ ಎಲ್ಲರೂ ತದೇಕಚಿತ್ತದಿಂದ ಅವರ ಮಾತನ್ನು ಆಲಿಸುತ್ತಿದ್ದರು. ಅಷ್ಟೊಂದು ತಾಕತ್ತು ಅವರ ಮಾತಿಗಿತ್ತು.

ಗಂಭೀರ ವಿಷಯಗಳ ಚರ್ಚೆಯ ಮಧ್ಯೆ ಅವರ ನಗೆ ಚಟಾಕಿಗಳು ಸದನವನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವು. ಮೊನಚು ಮಾತುಗಳಿಗೆ ತಿಳಿಹಾಸ್ಯದ ಲೇಪನ, ವಿಡಂಬನೆ, ಶಾಯರಿಗಳಿಂದ ಅವರ ಮಾತು ಕಾವ್ಯವಾಗಿ ಹರಿಯುತ್ತಿತ್ತು.

ವಾಜಪೇಯಿ ಮಾತನ್ನು ಆಲಿಸಲು ಜನಸಾಗರವೇ ಹರಿದು ಬರುತ್ತಿತ್ತು. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಲಕ್ಷಾಂತರ ಜನರು ಸೇರುತ್ತಿದ್ದರು.

ಸಂಸತ್‌ನಲ್ಲಿ ಐತಿಹಾಸಿಕ ಭಾಷಣ: 1996ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ವಾಜಪೇಯಿ 13 ದಿನಗಳಿಗೆ ಅಧಿಕಾರ ಕಳೆದುಕೊಳ್ಳುವ ಸನ್ನಿವೇಶ ಎದುರಾಯಿತು. ರಾಜೀನಾಮೆ ನೀಡುವ ಮುನ್ನ ಅವರು ಸಂಸತ್‌ನಲ್ಲಿ ಮಾಡಿದ ಭಾವನಾತ್ಮಕ ಭಾಷಣವನ್ನು ಇಡೀ ದೇಶ ಕಿವಿಗೊಟ್ಟು ಆಲಿಸಿತ್ತು.

ಅಯೋಧ್ಯೆಯಲ್ಲಿ 1992ರ ಡಿಸೆಂಬರ್‌ 6ರಂದು ಬಾಬರಿ ಮಸೀದಿ ಧ್ವಂಸವಾದಾಗ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ವಾಜಪೇಯಿ ಘಟನೆಯನ್ನು ಖಂಡಿಸಿ ಅಚ್ಚರಿ ಮೂಡಿಸಿದ್ದರು. ಬಾಬರಿ ಮಸೀದಿ ಧ್ವಂಸವನ್ನು ಹಿರಿಯ ನಾಯಕರಾಗಿದ್ದ ಎಲ್‌.ಕೆ. ಅಡ್ವಾಣಿ ಅವರಂತಹ ಹಿರಿಯ ನಾಯಕರು ಸಮರ್ಥಿಸಿಕೊಂಡಿದ್ದರು. ಆದರೆ, ಅವರೆಲ್ಲರ ಮಧ್ಯೆ ಅಟಲ್‌ ಭಿನ್ನವಾಗಿ ನಿಂತಿದ್ದರು.

ವ್ಯಕ್ತಿತ್ವದಷ್ಟೇ ಭಾಷೆಯೂ ಶುದ್ಧ: ವಾಜಪೇಯಿ ಅವರ ಭಾಷೆ ಅವರ ವ್ಯಕ್ತಿತ್ವದಷ್ಟೇ ಶುದ್ಧ ಮತ್ತು ಶುಭ್ರವಾಗಿತ್ತು. ಅವರ ಬಾಯಲ್ಲಿ ಸ್ವಚ್ಛ ಹಿಂದಿಯ ಉಚ್ಚಾರಣೆ ಕೇಳುವುದೇ ಒಂದು ಪರಮಾನಂದ. ನೇರ ನಡೆನುಡಿಗೂ ಹೆಸರಾಗಿದ್ದ ವಾಜಪೇಯಿ ಬ್ರಹ್ಮಚರ್ಯದ ಬಗ್ಗೆ ಮಾತು ಬಂದಾಗ ಸಿಡಿಸಿದ ಬಾಂಬ್‌ ಸಂಪ್ರದಾಯವಾದಿಗಳ ಕಸಿವಿಸಿಗೆ ಕಾರಣವಾಗಿತ್ತು. ‘ನಾನು ಬ್ರಹ್ಮಚಾರಿಯಲ್ಲ, ಅವಿವಾಹಿತ ಅಷ್ಟೆ’ ಎಂಬ ಅಪ್ರಿಯ ಸತ್ಯ ಹೇಳಿದ್ದರು.

ಸಾಮಾನ್ಯವಾಗಿ ಅವರು ಯಾರ ವಿರುದ್ಧವೂ ಉಗ್ರ ಟೀಕೆ ಮಾಡುತ್ತಿರಲಿಲ್ಲ. ಧ್ವನಿ ಏರಿಸಿ ಮಾತನಾಡಿದ್ದು ಬಲು ಅಪರೂಪ. ಅವರು ಟೀಕೆ ಮಾಡಿದ್ದರೂ ಅದು ಅಪ್ಯಾಯಮಾನವಾಗಿರುತ್ತಿತ್ತು. ಗುಜರಾತ್‌ ಕೋಮುಗಲಭೆ ವೇಳೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ‘ರಾಜಧರ್ಮದ ಪಾಠ’ ಹೇಳಿದ್ದರು.

ಪ್ರಚಾರ ತಪ್ಪಿಸಿಕೊಂಡಿದ್ದ ನೆಹರೂ: ವಾಜಪೇಯಿ ಲೋಕಸಭೆಗೆ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುವಂತೆ ಪಕ್ಷದ ನಾಯಕರು, ಕಾರ್ಯಕರ್ತರು ಪ್ರಧಾನಿ ಜವಾಹರಲಾಲ್‌ ನೆಹರೂ ಬೆನ್ನುಬಿದ್ದಿದ್ದರು. ಉದ್ದೇಶಪೂರ್ವಕವಾಗಿ ನೆಹರೂ ಅವರು ಅಟಲ್‌ ವಿರುದ್ಧ ಪ್ರಚಾರ ಮಾಡುವುದನ್ನು ತಪ್ಪಿಸಿಕೊಂಡಿದ್ದರು.

‘ವಿದೇಶಾಂಗ ವ್ಯವಹಾರಗಳಲ್ಲಿ ಅಪಾರ ಜ್ಞಾನ, ಆಸಕ್ತಿ ಹೊಂದಿರುವ ವಾಜಪೇಯಿ ಅವರಂತಹ ಉತ್ತಮ ಸಂಸದೀಯ ಪಟು ಸದನದಲ್ಲಿ ಇರಬೇಕು ಎನ್ನುವುದು ನನ್ನ ಬಯಕೆ’ ಎಂದು ನೆಹರೂ ಆಪ್ತರ ಬಳಿ ಹೇಳಿಕೊಂಡಿದ್ದರು.

ವಾಜಪೇಯಿ ಕಟ್ಟಾ ಕಾಂಗ್ರೆಸ್‌ ವಿರೋಧಿಯಾಗಿದ್ದರೂ ಸಂಸತ್‌ನಲ್ಲಿ ಇಂದಿರಾ ಗಾಂಧಿ ಅವರನ್ನು ಬಾಯ್ತುಂಬಾ ಹೊಗಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

ಪ್ರಧಾನಿಯಾದ ನಂತರ ಪಾಕಿಸ್ತಾನದತ್ತ ಸ್ನೇಹಹಸ್ತ ಚಾಚಿದ್ದ ವಾಜಪೇಯಿ ‘ಲಾಹೋರ್‌ಗೆ ಬಸ್‌’ ಸೇವೆ ಆರಂಭಿಸಿದ್ದರು. ಸಂಸತ್‌ನಲ್ಲಿ ಈ ಬಗ್ಗೆ ನಡೆದ ಚರ್ಚೆಯ ವೇಳೆ ‘ನಾವು ನಮ್ಮ ಸ್ನೇಹಿತರನ್ನು ಬದಲಿಸಬಹುದು. ಆದರೆ, ನೆರೆಹೊರೆಯವರನ್ನಲ್ಲ’ ಎಂದು ಒಂದೇ ಮಾತಿನಲ್ಲಿ ವಿರೋಧಿಗಳನ್ನು ಕಟ್ಟಿ ಹಾಕಿದ್ದರು.

ನೆರೆಹೊರೆಯವರೊಂದಿಗೆ ಹೊಂದಾಣಿಕೆಯ ಬದುಕು ಅನಿವಾರ್ಯ. ಆದರೆ, ಅವರೊಂದಿಗೆ ವ್ಯವಹರಿಸುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದ್ದರು.

ರಾಜಕಾರಣ ಅವರನ್ನು ಸಮಾಜಮುಖಿ ಮಾಡಿದರೆ, ಕವಿಹೃದಯ ಅಂತರ್ಮುಖಿಯನ್ನಾಗಿ ಮಾಡಿತ್ತು. ಅಧಿಕಾರ ರಾಜಕಾರಣದಲ್ಲಿ ಅವರು ಸೋತರೂ ಜೀವನಪ್ರೀತಿಯನ್ನು ಕಳೆದುಕೊಂಡಿರಲಿಲ್ಲ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !