ಬುಧವಾರ, ಜನವರಿ 29, 2020
28 °C

ಜೆಎನ್‌ಯು ಮೇಲಿನ ದಾಳಿ 26/11ರ ಉಗ್ರರ ದಾಳಿಯನ್ನು ನೆನಪಿಸಿತು: ಉದ್ಧವ್ ಠಾಕ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮುಂಬೈ: ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆಸಿರುವ ದಾಳಿಯು 26/11ರ ಮುಂಬೈ ಉಗ್ರರ ದಾಳಿಯನ್ನು ನೆನಪಿಸುವಂತಿದೆ. ಮುಸುಕುಧಾರಿಗಳಾಗಿ ಕಬ್ಬಿಣದ ರಾಡ್ ಹಿಡಿದು ದಾಳಿ ನಡೆಸಿರುವುದು ಹೇಡಿಗಳ ಕೃತ್ಯ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶೀಘ್ರವಾಗಿ ಮತ್ತು ನಿರ್ಣಾಯಕವಾಗಿ ಕ್ರಮಕೈಗೊಳ್ಳಬೇಕು. ಕಳೆದ ತಿಂಗಳಷ್ಟೇ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡು ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದರೂ ಕೂಡ ಈ ಬಾರಿ ಘಟನೆಯನ್ನು ತಡೆಯಲು ಪೊಲೀಸರು ವಿಫಲವಾಗಿದ್ದಾರೆ ಎಂದು ದೂರಿದರು. 

ಜೆಎನ್‌ಯು ದಾಳಿಯನ್ನು ಖಂಡಿಸಿ ಅಪಾರ ಸಂಖ್ಯೆಯಲ್ಲಿ ರಸ್ತೆಗಿಳಿದಿರುವ ಮಹಾರಾಷ್ಟ್ರದ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಅವರು, ನಮ್ಮ ಸರ್ಕಾರವು ಈ ರೀತಿಯ ಕೃತ್ಯಗಳನ್ನು ಸಹಿಸುವುದಿಲ್ಲ. ನಿಮ್ಮ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಅವರ ಒಂದು ತಲೆ ಕೂದಲನ್ನು ಕೂಡ ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲ. ಕಾನೂನು ಮುರಿಯುವವರ ವಿರುದ್ಧ ತಕ್ಕ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. 

ಭಾನುವಾರ ರಾತ್ರಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯು 26/11ರ ಮುಂಬೈ ಉಗ್ರ ದಾಳಿಯನ್ನು ನೆನಪಿಸಿದೆ. ದೇಶದಲ್ಲಿ ವಿದ್ಯಾರ್ಥಿಗಳು ಅಸುರಕ್ಷತೆಯನ್ನು ಎದುರಿಸುತ್ತಿದ್ದಾರೆ. ಜೆಎನ್‌ಯು ರೀತಿಯಲ್ಲಿ ಮಹಾರಾಷ್ಟ್ರದಲ್ಲಿ ಘಟನೆಗಳು ನಡೆಯಲು ನಾನು ಬಿಡುವುದಿಲ್ಲ. ಯುವಜನತೆ ಭಯ ಮತ್ತು ಕೋಪಗೊಂಡಿದ್ದಾರೆ. ನಮ್ಮ ಯುವಜನತೆ ಹೇಡಿಗಳಲ್ಲ ಎಂದು ಹೇಳಿದರು. 

ವಿದ್ಯಾರ್ಥಿಗಳನ್ನು ಪ್ರಚೋದಿಸಿ ಬೆಂಕಿ ಹಚ್ಚುವ ಕೆಲಸವನ್ನು ಮಾಡಬೇಡಿ. ದಾಳಿಯ ಹಿಂದಿನ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ದೆಹಲಿ ಪೊಲೀಸರು ವಿಫಲರಾದರೆ ಅವರು ಕೂಡ ಘಟನೆ ಹಿಂದಿರುತ್ತಾರೆ. ಈ ಮುಸುಕಿನ ಹಿಂದೆ ಯಾರಿದ್ದಾರೆ ಎಂಬುದನ್ನು ನಾವು ತಿಳಿಯಬೇಕಿದೆ. ಮುಸುಕುಧಾರಿಗಳಾಗಿ ಬಂದಿದ್ದವರು ಹೇಡಿಗಳು. ಅವರಿಗೆ ತಾಕತ್ತು ಇದ್ದದ್ದೇ ಆದರೆ ನೇರವಾಗಿ ಬರಲಿ. ಇಂತಹ ಹೇಡಿಗಳ ಕೃತ್ಯವನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು