‘‘ಅವನಿ’ ಹತ್ಯೆ ವೇಳೆ ಮಾರ್ಗಸೂಚಿ ಉಲ್ಲಂಘನೆ: ಮರಣೋತ್ತರ ಪರೀಕ್ಷೆ ವರದಿ

7

‘‘ಅವನಿ’ ಹತ್ಯೆ ವೇಳೆ ಮಾರ್ಗಸೂಚಿ ಉಲ್ಲಂಘನೆ: ಮರಣೋತ್ತರ ಪರೀಕ್ಷೆ ವರದಿ

Published:
Updated:
Deccan Herald

ಮುಂಬೈ: ‘ಅವನಿ’ ಹೆಣ್ಣು ಹುಲಿ ಹತ್ಯೆಯ ವೇಳೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ಪಷ್ಟವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

‘ಹುಲಿಯ ಹಿಂಬದಿಯ ಎಡಗಾಲಿಗೆ ಗುಂಡೇಟು ತಗುಲಿದೆ. ಶೂಟರ್‌ನಿಂದ ಹುಲಿ ಬಹಳಷ್ಟು ದೂರ ಇದ್ದ ವೇಳೆಯಲ್ಲಿ ಗುಂಡು ಹಾರಿಸಿರುವುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾಬೀತಾಗಿದೆ. ಇದರಿಂದ ಅರಣ್ಯಇಲಾಖೆ ರೂಪಿಸಿರುವ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದು ತಿಳಿಯುತ್ತದೆ’ ಎಂದು ಅವರು ಹೇಳಿದ್ದಾರೆ. 

‘ಆತ್ಮರಕ್ಷಣೆಗಾಗಿ ಹುಲಿಯನ್ನು ಕೊಂದೆ ಎಂದು ಹಂಗಾಮಿ ಶಾರ್ಪ್‌ಶೂಟರ್‌ ಹೇಳಿದ್ದಾನೆ. ಇದು ನಿಜವೇ ಆಗಿದ್ದಲ್ಲಿ, ಹುಲಿ ದಾಳಿ ಮಾಡುವ ಉದ್ದೇಶ ಹೊಂದಿದ್ದರೆ ಅಷ್ಟು ದೂರದಲ್ಲಿರುತ್ತಿತ್ತೇ ? ಅಲ್ಲದೆ, ಅದು ಮುಖಾಮುಖಿಯಾಗಿ ದಾಳಿ ಮಾಡುವ ಬದಲು ಹಿಮ್ಮುಖವಾಗಿ ಚಲಿಸಲು ಸಾಧ್ಯವಿತ್ತೇ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.

‘ಅವನಿ’ಯ ದೇಹದಲ್ಲಿ ಅರವಳಿಕೆಮದ್ದು ಹೊಂದಿದ್ದ ಈಟಿ ಚುಚ್ಚಲಾಗಿತ್ತು. ಆದರೆ, ಈ ಈಟಿಯನ್ನು ನಿರ್ದಿಷ್ಟ ರೈಫಲ್‌ ಮೂಲಕ ಹಾರಿಬಿಡಲಾಗಿಲ್ಲ. ಅಲ್ಲದೆ, ಈಟಿಯಿಂದ ಆಳವಾದ ಗಾಯವೂ ಹುಲಿಗೆ ಆಗಿಲ್ಲ. ಇದನ್ನು ಗಮನಸಿಸಿದರೆ, ಅರವಳಿಕೆ ಮದ್ದು ನೀಡಿ ಅದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕಿಂತ ಅವನಿಯನ್ನು ಕೊಲ್ಲುವುದೇ ಶೂಟರ್‌ ಉದ್ದೇಶವಾಗಿತ್ತು. ಹುಲಿಯನ್ನು ಕೊಂದು, ನಂತರ ಅದಕ್ಕೆ ಈಟಿ ಚುಚ್ಚಿರುವುದು ವರದಿಯಿಂದ ದೃಢವಾಗುತ್ತದೆ’ ಎಂದು ಅವರು ಹೇಳಿದ್ದಾರೆ. 

‘ಹುಲಿಯಂತಹ ಸಂರಕ್ಷಿತ ಪ್ರಾಣಿಗಳನ್ನು ಕೊಲ್ಲುವ ಸಂದರ್ಭದಲ್ಲಿ ಕೆಲವು ನಿರ್ದಿಷ್ಟ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂಬ ನಿಯಮಗಳಿವೆ. ಆದರೆ, ಈ ಪ್ರಕರಣದಲ್ಲಿ ಅದರ ಉಲ್ಲಂಘನೆ ಎದ್ದುಕಾಣುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಲ್ಲಿನ ಯಾವತ್ಮಲ್‌ ಜಿಲ್ಲೆಯ ಪಂಧರ್ಕವಾಡ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ 13 ಜನರನ್ನು ಬಲಿ ತೆಗೆದುಕೊಂಡ ಆರೋಪ ಅವನಿ ಮೇಲಿತ್ತು. ಸರ್ಕಾರ ನೇಮಿಸಿದ ಹಂಗಾಮಿ ಶೂಟರ್‌ ನ.2ರಂದು ಅವನಿಯನ್ನು ಗುಂಡಿಟ್ಟು ಕೊಂದಿದ್ದ.

ಹತ್ತು ತಿಂಗಳ ಎರಡು ಮರಿಗಳನ್ನು ಹೊಂದಿದ್ದ ‘ಅವನಿ’ ಹತ್ಯೆ ವನ್ಯಜೀವಿ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳೂ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !