ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ವಿಚಾರಣೆ ಮುಂದೂಡಿಕೆ

ಸಂವಿಧಾನ ಪೀಠದಿಂದ ಹಿಂದೆ ಸರಿದ ನ್ಯಾಯಮೂರ್ತಿ ಲಲಿತ್‌
Last Updated 10 ಜನವರಿ 2019, 20:33 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯ ರಾಮಮಂದಿರ–ಬಾಬರಿ ಮಸೀದಿ ನಿವೇಶನ ವಿವಾದದ ವಿಚಾರಣೆಗೆ ರಚಿಸಲಾಗಿದ್ದ ಸಂವಿಧಾನ ಪೀಠದಿಂದ ನ್ಯಾಯಮೂರ್ತಿ ಯು.ಯು. ಲಲಿತ್‌ ಅವರು ಹಿಂದೆ ಸರಿದಿದ್ದಾರೆ. ಸುಪ್ರೀಂ ಕೋರ್ಟ್‌ ಈಗ ಹೊಸ ಪೀಠವನ್ನು ರಚಿಸಬೇಕಾಗಿದೆ. ಹಾಗಾಗಿ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಲಾಗಿದೆ.

ಪ್ರಕರಣದ ವಿಚಾರಣೆ ಗುರುವಾರಕ್ಕೆ ನಿಗದಿಯಾಗಿತ್ತು. ಲಲಿತ್‌ ಅವರು 1994ರಲ್ಲಿ ವಕೀಲರಾಗಿದ್ದಾಗ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ಪರವಾಗಿ ವಾದಿಸಿದ್ದರು ಎಂದು ಮುಸ್ಲಿಂ ಅರ್ಜಿದಾರರ ಪರ ವಕೀಲ ರಾಜೀವ್‌ ಧವನ್‌ ಅವರು ವಿಚಾರಣೆ ಆರಂಭ ಆಗುತ್ತಿದ್ದಂತೆಯೇ ಹೇಳಿದರು. ಲಲಿತ್‌ ಅವರು ಪೀಠದಿಂದ ಹಿಂದೆ ಸರಿಯಬೇಕು ಎಂದು ತಾವು ಪ್ರತಿಪಾದಿಸುತ್ತಿಲ್ಲ ಎಂದೂ ತಿಳಿಸಿದರು. ಆದರೆ, ಲಲಿತ್‌ ಅವರು ಪೀಠದಿಂದ ಹೊರ ಹೋಗುವುದಾಗಿ ಹೇಳಿದರು.

ಮೂವರು ನ್ಯಾಯಮೂರ್ತಿಗಳ ಪೀಠದಿಂದ ಪ್ರಕರಣದ ವಿಚಾರಣೆ ನಡೆಸಲು ಹಿಂದೆ ನಿರ್ಧರಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ರಚಿಸಿದ್ದಾರೆ. ಸಂವಿಧಾನ ಪೀಠ ರಚನೆಗೆ ನ್ಯಾಯಾಂಗೀಯ ಆದೇಶದ ಅಗತ್ಯವಿದೆ ಎಂದೂ ಧವನ್‌ ಹೇಳಿದರು. ಆದರೆ, ಸಂವಿಧಾನ ಪೀಠ ರಚಿಸಿರುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸ್ಪಷ್ಟಪಡಿಸಿದರು.

ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳು ಮತ್ತು ದಾಖಲೆಗಳು ಬೃಹತ್‌ ಪ್ರಮಾಣದಲ್ಲಿವೆ. ಹಾಗಾಗಿ ಐವರು ನ್ಯಾಯಮೂರ್ತಿಗಳ ಪೀಠದಿಂದ ವಿಚಾರಣೆ ನಡೆಸುವುದು ಸೂಕ್ತ ಎಂದೂ ಗೊಗೊಯಿ ಹೇಳಿದರು.

ಮಸೀದಿಯು ಇಸ್ಲಾಂನ ಅಂತರ್ಗತ ಭಾಗ ಅಲ್ಲ ಎಂಬ 1994ರ ತೀರ್ಪಿನ ಮರುಪರಿಶೀಲನೆಯನ್ನು ಸಂವಿಧಾನ ಪೀಠಕ್ಕೆ ವಹಿಸಲು ಕಳೆದ ಸೆಪ್ಟೆಂಬರ್‌ನಲ್ಲಿ ಮೂವರು ಸದಸ್ಯರ ಪೀಠವು 2:1 ಬಹುಮತದಲ್ಲಿ ನಿರಾಕರಿಸಿತ್ತು. ಅಯೋಧ್ಯೆ ನಿವೇಶನ ವಿವಾದದ ವಿಚಾರಣೆ ಸಂದರ್ಭದಲ್ಲಿಯೇ ಈ ವಿಚಾರವೂ ಪ್ರಸ್ತಾಪವಾಗಿತ್ತು.

ಇದೇ 4ರಂದು ಅಯೋಧ್ಯೆ ವಿವಾದದ ವಿಚಾರಣೆ ನಡೆದಾಗ ಸಂವಿಧಾನ ಪೀಠ ರಚನೆಯಾಗಬಹುದು ಎಂಬ ಸುಳಿವು ಇರಲಿಲ್ಲ. ಇದೇ 10ರಂದು ಸೂಕ್ತ ಪೀಠವು ಮುಂದಿನ ಆದೇಶಗಳನ್ನು ನೀಡಲಿದೆ ಎಂದಷ್ಟೇ 4ರಂದು ಹೇಳಲಾಗಿತ್ತು.

ವಿಳಂಬ ತಂತ್ರ: ವಿಎಚ್‌ಪಿ ಆಕ್ರೋಶ
ವಕೀಲ ಧವನ್‌ ಅವರು ನ್ಯಾಯಮೂರ್ತಿ ಲಲಿತ್‌ ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಖಂಡಿಸಿದೆ. ತಮಗೆ ಬೇಕಿರುವ ಪೀಠ ರಚನೆಯಾಗಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಹೇಳಿದೆ. ಅನಗತ್ಯ ವಿಳಂಬ ಮಾಡದೆ ಪ್ರಕರಣವನ್ನು ವಿಲೇವಾರಿ ಮಾಡುವ ಹೊಣೆಗಾರಿಕೆ ನ್ಯಾಯಾಂಗಕ್ಕೆ ಇದೆ ಎಂಬುದನ್ನು ನೆನಪಿಸಿದೆ.

ಪ್ರಕರಣದ ವಿಚಾರಣೆ ಮತ್ತೊಮ್ಮೆ ಮುಂದೆ ಹೋಗಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದೆ. ‘ಕ್ಷುಲ್ಲಕ’ ವಿಚಾರಗಳನ್ನು ಮುಂದಿಟ್ಟು ಮುಸ್ಲಿಂ ಮೇಲ್ಮನವಿದಾರರು ವಿಚಾರಣೆ ಮುಂದೂಡಿಕೆಗೆ ಪ್ರಯತ್ನಿಸಬಹುದು ಎಂಬ ಆತಂಕ ನಿಜವಾಗಿದೆ ಎಂದೂ ವಿಎಚ್‌ಪಿ ಹೇಳಿದೆ.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕಲ್ಯಾಣ್‌ ಸಿಂಗ್‌ ಅವರ ಪರವಾಗಿ ಲಲಿತ್‌ ಅವರು ವಾದಿಸಿದ್ದರು. ಆ ಪ್ರಕರಣ ಮತ್ತು ಅಯೋಧ್ಯೆ ವಿವಾದಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಹೇಳಿದ್ದಾರೆ.

**

ಬೃಹತ್‌ ವಿಚಾರಣೆ

* ವಿಚಾರಣೆಯಲ್ಲಿ 113 ಅಂಶಗಳನ್ನು ಪರಿಶೀಲನೆಗೆ ಒಳಪಡಿಸಬೇಕಿದೆ

* ಅಲಹಾಬಾದ್‌ ಹೈಕೋರ್ಟ್‌ 88 ಸಾಕ್ಷಿಗಳ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು

* ಸಾಕ್ಷಿಗಳ ಹೇಳಿಕೆಯೇ 2,886 ಪುಟಗಳಷ್ಟಿದೆ. 257 ದಾಖಲೆಗಳನ್ನು ಸಲ್ಲಿಸಲಾಗಿದೆ

* ಹೈಕೋರ್ಟ್‌ನ ತೀರ್ಪು 4,304 ಪುಟಗಳಷ್ಟಿದೆ. 8,000 ಪುಟಗಳ ಅನುಬಂಧವೂ ತೀರ್ಪಿನಲ್ಲಿ ಇದೆ

* 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ ತೀರ್ಪಿನ ವಿರುದ್ಧ 14 ಮೇಲ್ಮನವಿಗಳು ಸಲ್ಲಿಕೆಯಾಗಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT