ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆಯ ತೀರ್ಪು | ಜಮೀನು ಸ್ವೀಕಾರದ ಬಗ್ಗೆ 26ಕ್ಕೆ ನಿರ್ಧಾರ ಎಂದ ವಕ್ಫ್ ಮಂಡಳಿ

Last Updated 10 ನವೆಂಬರ್ 2019, 19:32 IST
ಅಕ್ಷರ ಗಾತ್ರ

ಲಖನೌ: ಅಯೋಧ್ಯೆಯ ವಿವಾದಾತ್ಮಕ ನಿವೇಶನ‌ ಪ್ರಕರಣದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು, ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಐದು ಎಕರೆ ಜಮೀನು ನೀಡಲು ಶನಿವಾರ ಆದೇಶಿಸಿದೆ. ಆದರೆ, ಜಮೀನು ಸ್ವೀಕರಿಸಬೇಕೇ ಎಂಬುದನ್ನು ಇದೇ 26ರಂದು ನಡೆಯುವ ಸಭೆಯಲ್ಲಿ ನಿರ್ಧರಿಸುವುದಾಗಿ ಉತ್ತರ ಪ್ರದೇಶದ ಕೇಂದ್ರ ವಕ್ಫ್ ಮಂಡಳಿ ಭಾನುವಾರ ತಿಳಿಸಿದೆ.

‘ಜಮೀನು ತೆಗೆದುಕೊಳ್ಳುವ ಪ್ರಸ್ತಾವದ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸಕಾರಾತ್ಮಕ ಧೋರಣೆಯಿಂದ ಮಾತ್ರ ನಕಾರಾತ್ಮಕತೆಯನ್ನು ಗೆಲ್ಲಲು ಸಾಧ್ಯ ಎಂಬುದು ನನ್ನ ಅಭಿಪ್ರಾಯ’ ಎಂದು ಮಂಡಳಿ ಅಧ್ಯಕ್ಷ ಝಫರ್ ಫಾರೂಕಿ ಹೇಳಿದ್ದಾರೆ.

ಹೊಸ ಜಾಗದಲ್ಲಿ ಮಸೀದಿಯ ಜತೆ ಶೈಕ್ಷಣಿಕ ಸಂಸ್ಥೆ ಸ್ಥಾಪಿಸುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಆದರೆ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕೆಲ ಸದಸ್ಯರು ಮತ್ತು ಮಂಡಳಿ ಜತೆಗೆ ಗುರುತಿಸಿಕೊಂಡಿರುವ ಕೆಲವು ಮೌಲ್ವಿಗಳು ಮಸೀದಿಗಾಗಿ ಜಮೀನು ಪಡೆದುಕೊಳ್ಳಬಾರದು ಎಂಬ ಅಭಿಪ್ರಾಯ ಹೊಂದಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪಿಗೆ ಮರುಪರಿಶೀಲನೆ ಅರ್ಜಿ ಸಲ್ಲಿಸಬೇಕು ಎಂಬ ಅಭಿಪ್ರಾಯವನ್ನೂ ಅವರು ಹೊಂದಿದ್ದಾರೆ.

ಕೆಲವು ಷರತ್ತುಗಳನ್ನು ಮುಂದಿಟ್ಟು, ಅಯೋಧ್ಯೆ ನಿವೇಶನ ವಿವಾದ ಪ್ರಕರಣದಿಂದ ಹಿಂದಕ್ಕೆ ಸರಿಯಬೇಕು ಎಂದು ಝಫರ್‌ ಅವರು ಕಳೆದ ತಿಂಗಳು ಹೇಳಿದ್ದರು. ಆದರೆ, ಇತರ ಸದಸ್ಯರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ವಕ್ಫ್‌ ಮಂಡಳಿ ಜಮೀನು ಖರೀದಿಸಿದ ವಿಚಾರದಲ್ಲಿ ಝಫರ್‌ ಅವರ ವಿರುದ್ಧ ಅವ್ಯವಹಾರದ ಆರೋಪಗಳು ಕೇಳಿ ಬಂದಿದ್ದವು. ಅವರ ವಿರುದ್ಧ ಸಿಬಿಐ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಶಿಫಾರಸನ್ನೂ ಮಾಡಿತ್ತು.

**

ಬಾಬರಿ ಮಸೀದಿ ನಿರ್ಮಾಣಕ್ಕಾಗಿ ಜಮೀನು ಪಡೆಯಬಾರದು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಆದರೆ ನನ್ನ ಪ್ರಕಾರ, ಇದು ನಕಾರಾತ್ಮಕತೆ ಬೆಳಸುತ್ತದೆ.
-ಝಫರ್ ಫಾರೂಕಿ, ಉತ್ತರ ಪ್ರದೇಶದ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT