ಶನಿವಾರ, ಫೆಬ್ರವರಿ 27, 2021
23 °C

ಜನ್ಮಸ್ಥಳ ಕಕ್ಷಿದಾರನಾಗಲು ಸಾಧ್ಯವೇ: ‘ಸುಪ್ರೀಂ’ ಪ್ರಶ್ನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದಲ್ಲಿ ‘ರಾಮ ಲಲ್ಲಾ ವಿರಾಜಮಾನ್‌’ ಎಂಬ ಸ್ಥಳವನ್ನು ಕಕ್ಷಿದಾರ ಎಂದು ಪರಿಗಣಿಸಲು ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ದೇವರು ಹುಟ್ಟಿದ್ದು ಎಂದು ಹೇಳಲಾಗುವ ಸ್ಥಳವನ್ನು ಪ್ರಕರಣದಲ್ಲಿ ಹಿತಾಸಕ್ತಿ ಹೊಂದಿರುವ ಕಕ್ಷಿದಾರ ಎನ್ನಲು ಸಾಧ್ಯವೇ ಎಂದು ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಂವಿಧಾನ ಪೀಠ ಕೇಳಿದೆ.

ಹಿಂದೂ ದೇವರನ್ನು ಕಕ್ಷಿದಾರ ಎಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶ ಇದೆ. ಈ ದೇವರು ಆಸ್ತಿ ಹೊಂದಬಹುದು ಮತ್ತು ದೂರನ್ನು ದಾಖಲಿಸಬಹುದು. ಜನ್ಮಸ್ಥಾನ ಎಂಬ ಸ್ಥಳವು ಈ ಪ್ರಕರಣದಲ್ಲಿ ದಾವೆ ಹೂಡಲು ಸಾಧ್ಯವೇ ಎಂದು ರಾಮಲಲ್ಲಾ ವಿರಾಜಮಾನ್‌ ಪರ ವಕೀಲ ಕೆ. ಪರಾಶರನ್‌ ಅವರನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಪ್ರಶ್ನಿಸಿತು.  

‘ಹಿಂದೂ ಧರ್ಮದಲ್ಲಿ ಸ್ಥಳವೊಂದನ್ನು ಪವಿತ್ರ ಎಂದು ಪರಿಗಣಿಸಲು ಪ್ರತಿಮೆಯೇ ಇರಬೇಕೆಂದಿಲ್ಲ. ನದಿಗಳು ಮತ್ತು ಸೂರ್ಯನನ್ನು ಕೂಡ ಇಲ್ಲಿ ಪೂಜಿಸಲಾಗುತ್ತಿದೆ. ಹಾಗಾಗಿ, ಜನ್ಮಸ್ಥಳವನ್ನು ಕಕ್ಷಿದಾರ ಎಂದು ಪರಿಗಣಿಸಬಹುದು’ ಎಂದು ಪರಾಶರನ್‌ ಪ್ರತಿಕ್ರಿಯೆ ನೀಡಿದರು. 

ಗಂಗಾ ನದಿಯನ್ನು ಕಕ್ಷಿದಾರ ಎಂದು ಪರಿಗಣಿಸಿ ಉತ್ತರಾಖಂಡ ಹೈಕೋರ್ಟ್‌ ಕೊಟ್ಟಿದ್ದ ತೀರ್ಪನ್ನು ಪೀಠವು ಉಲ್ಲೇಖಿಸಿತು. ತಮ್ಮ ವಾದ ಮಂಡಿಸಲು ಪರಾಶರನ್‌ ಅವರಿಗೆ ಪೀಠವು ಅವಕಾಶ ಕೊಟ್ಟಿತು. 

ವಿವಾದಾತ್ಮಕ ನಿವೇಶನವನ್ನು ಮುಟ್ಟುಗೋಲು ಹಾಕಿಕೊಂಡಾಗ ಜಿಲ್ಲಾಧಿಕಾರಿಯು ರಾಮಲಲ್ಲಾ ವಿರಾಜಮಾನ್‌ ಅನ್ನು ಕಕ್ಷಿದಾರ ಎಂದು ಪರಿಗಣಿಸಿರಲಿಲ್ಲ ಎಂಬುದರತ್ತ ಪರಾಶರನ್‌ ಗಮನ ಸೆಳೆದರು. ಜನ್ಮಸ್ಥಳದ ಮಹತ್ವವನ್ನು ಎತ್ತಿ ತೋರುವುದಕ್ಕಾಗಿ ಸಂಸ್ಕೃತ ಶ್ಲೋಕವೊಂದನ್ನು ಅವರು ಹೇಳಿದರು (ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ). ಜನ್ಮಭೂಮಿಯು ಸ್ವರ್ಗಕ್ಕಿಂತ ಮಿಗಿಲು ಎಂದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು