ಭಾನುವಾರ, ನವೆಂಬರ್ 17, 2019
28 °C
ಅಸಂಖ್ಯ ಸಂಖ್ಯೆಯಲ್ಲಿ ಸೇರಿದ್ದ ವಕೀಲರು, ಸಾರ್ವಜನಿಕರು

ಅಯೋಧ್ಯೆ ತೀರ್ಪು: ‘ಸುಪ್ರೀಂ’ ಆವರಣದಲ್ಲಿ ನೂಕುನುಗ್ಗಲು

Published:
Updated:

ನವದೆಹಲಿ: ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ– ಬಾಬರಿ ಮಸೀದಿಗೆ ಸಂಬಂಧಿಸಿದ ತೀರ್ಪು ಪ್ರಕಟವಾಗಲಿದ್ದ ಹಿನ್ನೆಲೆಯಲ್ಲಿ ರಜಾ ದಿನವಾದರೂ ಶನಿವಾರ ಬೆಳಿಗ್ಗೆಯಿಂದಲೇ ಸುಪ್ರೀಂ ಕೋರ್ಟ್‌ ಆವರಣದಲ್ಲಿ ಕಿಕ್ಕಿರಿದ ವಾತಾವರಣ.

ಬಹು ನಿರೀಕ್ಷಿತ ತೀರ್ಪಿಗೆ ಸಾಕ್ಷಿಯಾಗಲೆಂದೇ ಕಪ್ಪು ಕೋಟ್‌ ಧರಿಸಿದ ನೂರಾರು ಜನ ವಕೀಲರು, ಮಾಧ್ಯಮ ಬಳಗದವರು ಮುಖ್ಯ ನ್ಯಾಯಮೂರ್ತಿಯವರ 1ನೇ ನಂಬರ್‌ನ ಕೋರ್ಟ್‌ ಹಾಲ್‌ ಎದುರು ಜಮಾಯಿಸಿದ್ದರು.

ಸುಪ್ರೀಂ ಕೋರ್ಟ್‌ನ ಎದುರಿನ ಪ್ರಮುಖ ರಸ್ತೆಯಲ್ಲಿ ರಾತ್ರಿಯಿಂದಲೇ ಭದ್ರತೆ ಒದಗಿಸಿದ್ದ ಪೊಲೀಸರು ಪ್ರತಿಯೊಬ್ಬರ ಗುರುತಿನ ಕಾರ್ಡ್‌ ಪರಿಶೀಲಿಸಿದರಲ್ಲದೆ, ಪಾಸ್‌ ಇದ್ದವರ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಿದರು.

ಅರ್ಜಿದಾರರು, ಅವರ ಪರ ವಕೀಲರು, ಕಾವಿ ತೊಟ್ಟಿದ್ದ ಸಾಧು– ಸಂತರು, ಸಂಘ ಪರಿವಾರದವರು ನೂರಾರು ಸಂಖ್ಯೆಯಲ್ಲಿ ಕೋರ್ಟ್ ಎದುರಿನ ಉದ್ಯಾನದಲ್ಲಿ ಜಮಾಯಿಸಿ ತೀರ್ಪಿಗಾಗಿ ಕಾದು ನಿಂತಿದ್ದರು.

ಬೆಳಿಗ್ಗೆ 10.30ಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ತೀರ್ಪನ್ನು ಓದಲಾರಂಬಿಸುವ ತುಸು ಮೊದಲು ಕೋರ್ಟ್‌ ಹಾಲ್‌ ಬಾಗಿಲು ತೆರೆದಾಗ ಒಳ ಪ್ರವೇಶಿಸಲು ಬಯಸಿದವರಿಂದ ನೂಕು ನುಗ್ಗಲು ಉಂಟಾಯಿತು. ಅನೇಕ ಜನರು ಕೋರ್ಟ್‌ ಹಾಲ್‌ ಪ್ರವೇಶ ಸಾಧ್ಯವಾಗದೇ ಪರದಾಡಿದರು.

ನಿತ್ಯವೂ ಕೋರ್ಟ್‌ಗೆ ಬರುವ ವಕೀಲರ ಸಮೂಹ 1ನೇ ಕೋರ್ಟ್‌ ಹಾಲ್‌ ಎದುರೇ ವಿಶೇಷ ದಿನ ಎಂಬಂತೆ ಸೆಲ್ಫಿಗೆ ಫೋಸ್‌ ನೀಡುತ್ತಿದ್ದುದು ಕಂಡುಬಂತು. ಅಂತಿಮ ಹಾಗೂ ಪ್ರಮುಖ ಭಾಗವನ್ನು ನ್ಯಾಯಮೂರ್ತಿಯವರು ಓದಿ ಹೇಳಿದ ಸುದ್ದಿ ತಿಳಿಯುತ್ತಿದ್ದಂತೆಯೇ ಹೊರಗಿದ್ದ ಸಾಧು– ಸಂತರು ಶಂಖ ಊದಿ ಜೈಕಾರ ಹಾಕಿದರು. ಜೈ ಶ್ರೀರಾಮ್‌ ಘೋಷಣೆ ಕೂಗಿದರು.

ಪ್ರತಿಕ್ರಿಯಿಸಿ (+)