ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದ: ಏನಿದು ದಶಕಗಳ ವ್ಯಾಜ್ಯ

Last Updated 9 ನವೆಂಬರ್ 2019, 5:35 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ–ಬಾಬರಿ ಮಸೀದಿಗೆ ಸಂಬಂಧಿಸಿದ ವಿವಾದದ ತೀರ್ಪುಇಂದು (ಶನಿವಾರ) ಸುಪ್ರೀಂ ಕೋರ್ಟ್‌ನಲ್ಲಿಪ್ರಕಟವಾಗುತ್ತಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಸಂವಿಧಾನ ಪೀಠವು ಪ್ರಕರಣದ ವಿಚಾರಣೆಯನ್ನು ಸತತ 40 ದಿನ ನಡೆಸಿ, ಅಕ್ಟೋಬರ್‌ 16ರಂದು ತೀರ್ಪು ಕಾಯ್ದಿರಿಸಿತ್ತು.

ಇದೀಗ ಎಲ್ಲರ ಚಿತ್ತ ಸುಪ್ರೀಂಕೋರ್ಟ್‌ನತ್ತ ನೆಟ್ಟಿದೆ.

ವಿವಾದ ಹಿನ್ನೆಲೆ...
15ನೇ ಶತಮಾನದ ಬಾಬರಿ ಮಸೀದಿಯನ್ನು ಕರಸೇವಕರು 1992ರಲ್ಲಿ ನೆಲಸಮಗೊಳಿಸಿದ ನಂತರ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು.

ಈ ವಿವಾದಾತ್ಮಕ ನಿವೇಶನವನ್ನು ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್‌ ಮಂಡಳಿಗೆ ಸಮನಾಗಿ ಹಂಚಿಕೆ ಮಾಡುವಂತೆ ಅಲಹಾಬಾದ್‌ ಕೋರ್ಟ್‌ನ ತ್ರಿಸದಸ್ಯ ಪೀಠವು 2:1 ಬಹುಮತದಲ್ಲಿ 2010ರಲ್ಲಿ ಈ ತೀರ್ಪು ನೀಡಿತ್ತು.

2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.

ವಿವಾದಿತ ಭೂಮಿಯ ಸುತ್ತ...
2.77 ಎಕರೆ ವಿವಾದಿತ ಸ್ಥಳವು ತಮಗೆ ಸೇರಿದ್ದು ಎಂದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳೆರಡೂ ವಾದಿಸುತ್ತಿವೆ. ಈ ವಿಚಾರವು 1980ರ ಬಳಿಕದ ಭಾರತದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ವಿವಾದಾತ್ಮಕ ಸ್ಥಳದಲ್ಲಿ ಇದ್ದ ಮಸೀದಿಯನ್ನು 1992ರ ಡಿಸೆಂಬರ್‌ನಲ್ಲಿ ಧ್ವಂಸ ಮಾಡಲಾಗಿತ್ತು. ಈ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುದು ಹಿಂದುತ್ವವಾದಿ ಕಾರ್ಯಕರ್ತರ ವಾದವಾಗಿದೆ. ಆದರೆ, ದೇವಾಲಯವನ್ನು ಧ್ವಂಸ ಮಾಡಿ, ಆ ಸ್ಥಳದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಪ್ರಕರಣದ ಮುಸ್ಲಿಂ ಕಕ್ಷಿದಾರರು ವಾದಿಸುತ್ತಿದ್ದಾರೆ.

ಇದನ್ನೂ ಓದಿ:ಅಯೋಧ್ಯೆ ಧ್ವಂಸ ಪ್ರಕರಣ: ವ್ಯಾಜ್ಯಕ್ಕೆ ಒಂದೂವರೆ ಶತಮಾನ

ಸಾಮರಸ್ಯದ ಮಂತ್ರ
ಮುಖ್ಯ ನ್ಯಾಯಮೂರ್ತಿ ಗೊಗೊಯಿ ಅವರು ಇದೇ 17ರಂದು ನಿವೃತ್ತರಾಗಲಿದ್ದಾರೆ. ಹಾಗಾಗಿ, ಅದಕ್ಕೆ ಮೊದಲು ತೀರ್ಪು ಪ್ರಕಟವಾಗಬಹುದು ಎಂಬ ನಿರೀಕ್ಷೆ ಇತ್ತು. ಹಾಗಾಗಿ, ಎರಡೂ ಸಮುದಾಯಗಳ ನಡುವೆ ಸಾಮರಸ್ಯ ಉಳಿಸಿಕೊಳ್ಳುವ ಹಲವು ಪ್ರಯತ್ನಗಳು ಕೆಲ ದಿನಗಳಿಂದ ನಡೆಯುತ್ತಲೇ ಇವೆ.

ಸಮಾಜಘಾತುಕ ಶಕ್ತಿಗಳು ಸಾಮರಸ್ಯ ಕೆಡಿಸಲು ನಡೆಸುವ ಪ್ರಯತ್ನಗಳಿಗೆ ಯಾರೂ ಬಲಿಬೀಳಬಾರದು ಎಂದು ಎರಡೂ ಸಮುದಾಯಗಳ ಮುಖಂಡರು ಕೆಲವು ದಿನಗಳಿಂದ ಕರೆ ನೀಡುತ್ತಲೇ ಇದ್ದಾರೆ.

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರ ದೆಹಲಿಯ ನಿವಾಸದಲ್ಲಿ ಆರ್‌ಎಸ್‌ಎಸ್‌, ಬಿಜೆಪಿ ಮುಖಂಡರು ಮತ್ತು ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆದಿತ್ತು. ತೀರ್ಪು ಏನೇ ಬಂದರೂ ಸಾಮರಸ್ಯಕ್ಕೆ ಧಕ್ಕೆ ಆಗಬಾರದು ಎಂದು ಎಲ್ಲ ಮುಖಂಡರು ಕರೆ ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT