ಶನಿವಾರ, ಜನವರಿ 25, 2020
22 °C

ನಿರ್ಭಯಾ ಅತ್ಯಾಚಾರಿಗಳಿಗೆ ಶೀಘ್ರವೇ ಶಿಕ್ಷೆ ಜಾರಿ? ನೇಣು ಹಗ್ಗ ತಯಾರಿಸಲು ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ಪಟ್ನಾ: ಅಪರಾಧಿಗಳನ್ನು ಗಲ್ಲಿಗೇರಿಸುವ 10 ಹಗ್ಗಗಳನ್ನು ತಯಾರಿಸಿಡುವಂತೆ ಬಿಹಾರದ ಬಕ್ಸರ್‌ ಜೈಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.  ಇದರೊಂದಿಗೆ, ‘ನಿರ್ಭಯಾ’ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳನ್ನು  ಶೀಘ್ರದಲ್ಲೇ ಗಲ್ಲಿಗೇರಿಸುವ ಸಾಧ್ಯತೆ ಇದೆ ಎಂಬ ಊಹಾಪೋಹಗಳೂ ಹುಟ್ಟಿಕೊಂಡಿವೆ.

ನಿರ್ಭಯಾ ಮೇಲೆ ಅತ್ಯಾಚಾರ ನಡೆಸಿದವರಿಗೆ ಸುಪ್ರೀಂ ಕೋರ್ಟ್‌ ಒಂದು ವರ್ಷದ ಹಿಂದೆಯೇ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಹೈದರಾಬಾದ್‌ ನಲ್ಲಿ ಪಶುವೈದ್ಯೆಯ ಅತ್ಯಾಚಾರ, ಹತ್ಯೆಯ ಆರೋಪಿಗಳು ಎನ್‌ಕೌಂಟರ್‌ನಲ್ಲಿ ಹತರಾದ ಬಳಿಕ, ನಿರ್ಭಯಾ ಕುಟುಂಬದವರೂ ಆಕೆಯ ಅತ್ಯಾಚಾರಿಗಳನ್ನು ನೇಣಿಗೇರಿಸುವಂತೆ ಒತ್ತಾಯಿಸಿದ್ದಾರೆ. ಜನರಿಂದಲೂ ಇಂಥ ಒತ್ತಡ ಬರಲು ಆರಂಭವಾಗಿದೆ.

ಅಪರಾಧಿಗಳನ್ನು ನೇಣಿಗೇರಿಸಲು ಬಳಸುವ ಹಗ್ಗಗಳ ತಯಾರಿಕೆಯಲ್ಲಿ ಬಕ್ಸರ್‌ ಜಿಲ್ಲೆಯಲ್ಲಿರುವ ಜೈಲಿನ ಸಿಬ್ಬಂದಿ ಪರಿಣತರಾಗಿದ್ದಾರೆ. ವಾರಾಂತ್ಯದೊಳಗೆ 10 ಹಗ್ಗಗಳನ್ನು ಸಿದ್ಧವಾಗಿಡುವಂತೆ ಈ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

‘ಹತ್ತು ಹಗ್ಗಗಳನ್ನು ಸಿದ್ಧಪಡಿಸಿಡುವಂತೆ ನಮಗೆ ಜೈಲು ನಿರ್ದೇಶನಾಲಯದಿಂದ ಸೂಚನೆ ಬಂದಿದೆ. ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ನೀಡಲು ಇವುಗಳನ್ನು ಬಳಸಲಾಗುವುದೇ ಎಂಬುದು ಇನ್ನೂ ತಿಳಿದುಬಂದಿಲ್ಲ’ ಎಂದು ಬಕ್ಸರ್‌ ಜೈಲು ಅಧೀಕ್ಷಕ ವಿಜಯ್‌ ಕುಮಾರ್‌ ಅರೋರ ಹೇಳಿದ್ದಾರೆ.

‘ನಮ್ಮ ಸಿಬ್ಬಂದಿ ಅನುಭವಿಗಳಿದ್ದಾರೆ. ಆದ್ದರಿಂದ ನಿಗದಿತ ಅವಧಿಯೊಳಗೆ 10 ಹಗ್ಗಗಳನ್ನು ತಯಾರಿಸುವುದು ಸಮಸ್ಯೆಯಾಗದು’ ಎಂದು ಅವರು ಹೇಳಿದ್ದಾರೆ.

ಹಗ್ಗ ತಯಾರಿಕೆ ಹೇಗೆ?

-ನೇಣು ಹಗ್ಗ ತಯಾರಿಕೆಯಲ್ಲಿ ಯಂತ್ರಗಳ ಬಳಕೆ ಅತಿ ಕಡಿಮೆ. ಕೈಯಿಂದಲೇ ಇದನ್ನು ತಯಾರಿಸಬೇಕಾಗುತ್ತದೆ

-ಕಬ್ಬಿಣ ಮತ್ತು ಹಿತ್ತಾಳೆಯ ತಂತಿಗಳನ್ನು ಬಳಸಿ ಹಗ್ಗ ತಯಾರಿಸಲಾಗುತ್ತದೆ. ಆದ್ದರಿಂದ ಈ ವಸ್ತುಗಳ ಬೆಲೆಗೆ ಅನುಗುಣವಾಗಿ ಹಗ್ಗದ ಬೆಲೆಯೂ ಏರುಪೇರಾಗುತ್ತದೆ

-ಕಬ್ಬಿಣ ಮತ್ತು ಹಿತ್ತಾಳೆಯ 152 ಎಳೆಗಳನ್ನು ಹೆಣೆದು, ನಿಗದಿತ ಗಾತ್ರದ ಹಗ್ಗ ತಯಾರಿಸಲಾಗುತ್ತದೆ. ಇಂಥ ಸುಮಾರು 7000 ಎಳೆಗಳು ಒಂದು ಹಗ್ಗದಲ್ಲಿ ಇರುತ್ತವೆ. ಒಂದು ಹಗ್ಗ ತಯಾರಿಕೆಗೆ ಐದರಿಂದ ಆರು ಕಾರ್ಮಿಕರು ಮೂರು ದಿನಗಳ ಕಾಲ ದುಡಿಯಬೇಕಾಗುತ್ತದೆ

-ತಯಾರಿಸಿದ ಹಗ್ಗವನ್ನು ದೀರ್ಘಾವಧಿವರೆಗೆ ಕಾಯ್ದಿಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಕಾಲ ಇಟ್ಟರೆ ಅದು ಬಳಕೆಗೆ ಅಯೋಗ್ಯವೆನಿಸುತ್ತದೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು