ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿ ಮಾಧ್ಯಮಗಳ ಎದುರು ಬರಬೇಕಿಲ್ಲ: ರಂಜನ್ ಗೊಗೊಯಿ

Last Updated 15 ನವೆಂಬರ್ 2019, 21:34 IST
ಅಕ್ಷರ ಗಾತ್ರ

ನವದೆಹಲಿ: ‘ಉತ್ತಮ ಕೆಲಸದ ಮೂಲಕ ನ್ಯಾಯಮೂರ್ತಿಗಳು, ನ್ಯಾಯಾಧೀಶರು ಸಾರ್ವಜನಿಕರಲ್ಲಿ ಗಳಿಸಿದ ನಂಬಿಕೆ ಮತ್ತು ವಿಶ್ವಾಸದಲ್ಲಿ ನ್ಯಾಯಾಂಗದ ಶಕ್ತಿ ಅಡಗಿದೆ. ಹೀಗಾಗಿ ನ್ಯಾಯಮೂರ್ತಿಗಳು ಮಾಧ್ಯಮಗಳ ಮೂಲಕ ಜನರ ಜತೆ ಸಂವಾದ ನಡೆಸುವ ಅವಶ್ಯಕತೆ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಅವರ ಸೇವೆಯುನವೆಂಬರ್ 17ರಂದು (ಭಾನುವಾರ) ಕೊನೆಯಾಗಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅವರ ಕೊನೆಯ ಕೆಲಸದ ದಿನ. ಈ ಸಲುವಾಗಿ ಸಂದರ್ಶನ ನೀಡುವಂತೆ ಮಾಧ್ಯಮಗಳು ಮಾಡಿದ ಮನವಿಯನ್ನು ಅವರು ತಿರಸ್ಕರಿಸಿದ್ದಾರೆ. ಆದರೆ, ತಮ್ಮ ಕಚೇರಿಯಿಂದ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆ ಪ್ರಕಟಣೆಯಲ್ಲಿ ಈ ಮಾತುಗಳು ಇವೆ.

‘ನ್ಯಾಯಮೂರ್ತಿಗಳು ಮಾತನಾಡುವುದೇ ಇಲ್ಲ ಎಂದು ಹೇಳಲಾಗದು. ಅವರೂ ಮಾತನಾಡುತ್ತಾರೆ. ಆದರೆ, ಕರ್ತವ್ಯದ ಹೊರತಾದ ಅಗತ್ಯಗಳಲ್ಲಿ ಮಾತ್ರ ಮಾತನಾಡುತ್ತಾರೆ. ಕಹಿ ಸತ್ಯಗಳು ನೆನಪಿನಲ್ಲೇ ಇರಬೇಕು’ ಎಂದು ಅವರು ಹೇಳಿದ್ದಾರೆ.

‘ನಮ್ಮ ಸಂಸ್ಥೆಯ (ಸುಪ್ರೀಂ ಕೋರ್ಟ್‌) ಮೇಲೆ ವದಂತಿಗಳ ದಾಳಿ ನಡೆಯುತ್ತಿದ್ದಾಗ ಮಾಧ್ಯಮಮಿತ್ರರು ಪ್ರಭುದ್ಧತೆ ತೋರಿದರು. ಸುದ್ದಿಯ ಸ್ಥಳವನ್ನು ವದಂತಿಗಳು ಆವರಿಸಿಕೊಳ್ಳದೇ ಇರುವಂತೆ ನೋಡಿಕೊಂಡರು’ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಕಚೇರಿಯ ನಕಲಿ ಪತ್ರ:‘ಆಯೋಧ್ಯೆ ತೀರ್ಪು ನೀಡಿದ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ತಾನು ಯಾವುದೇ ಪ್ರಶಂಸಾ ಪತ್ರ ಹೊರಡಿಸಿಲ್ಲ’ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಪ್ರಧಾನಿ ಕಚೇರಿಯ ಪತ್ರನಾಮವಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಯೋಧ್ಯೆ ತೀರ್ಪು ನೀಡಿದ ನ್ಯಾಯಮೂರ್ತಿಗಳನ್ನು ಅದರಲ್ಲಿ ಹೊಗಳಲಾಗಿತ್ತು. ಇದು ನಕಲಿ ಪತ್ರ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

**
ಮುಖ್ಯ ನ್ಯಾಯಮೂರ್ತಿ ಗೊಗೊಯಿ ಅವಧಿ ಸೇವಾವಧಿಯ ಕಡೇ ದಿನ

* 2018ರ ಜನವರಿ 12ರಂದು ಐತಿಹಾಸಿಕ ಪತ್ರಿಕಾಗೋಷ್ಠಿ ನಡೆಸಿದ ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಲ್ಲಿ ರಂಜನ್ ಗೊಗೊಯಿ ಸಹ ಒಬ್ಬರು

* ಸುಪ್ರೀಂ ಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾದ ಈಶಾನ್ಯ ಭಾರತದ ಮೊದಲ ವ್ಯಕ್ತಿ ಗೊಗೊಯಿ

* 150 ವರ್ಷಗಳಿಂದಲೂ ಬಗೆಹರಿಯದೇ ಇದ್ದ ರಾಮಜನ್ಮಭೂಮಿ–ಬಾಬರಿ ಮಸೀದಿ ಭೂವಿವಾದ ವ್ಯಾಜ್ಯವು ಗೊಗೊಯಿ ಅವರ ಅವಧಿಯಲ್ಲಿ ಬಗೆಹರಿಯಿತು. 40 ದಿನಗಳ ವಿಚಾರಣೆ ನಡೆಸಿ, ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ಪೀಠವನ್ನು ಗೊಗೊಯಿ ಮುನ್ನಡೆಸಿದ್ದರು

* ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ, ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ತನಿಖೆ ಅಗತ್ಯವಿಲ್ಲ ಎಂದು ಮಹತ್ವದ ತೀರ್ಪುಗಳನ್ನು ನೀಡಿದ ಸುಪ್ರೀಂ ಕೋರ್ಟ್‌ ಪೀಠಗಳನ್ನು ಗೊಗೊಯಿ ಮುನ್ನಡೆಸಿದ್ದರು

* ಸುಪ್ರೀಂ ಕೋರ್ಟ್‌ನ ಮಹಿಳಾ ಸಿಬ್ಬಂದಿ ಒಬ್ಬರು, ‘ಗೊಗೊಯಿ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ’ ಎಂದು ಆರೋಪಿಸಿದ್ದರು. ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ತನಿಖಾ ಸಮಿತಿಯು ಈ ಆರೋಪದಿಂದ ಗೊಗೊಯಿ ಅವರಿಗೆ ಮುಕ್ತಿ ನೀಡಿತ್ತು

* ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ನಿಗಾವಣೆ ಮಾಡಿದ ಸುಪ್ರೀಂ ಕೋರ್ಟ್‌ನ ಪೀಠವನ್ನು ಗೊಗೊಯಿ ಅವರು ಮುನ್ನಡೆಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT