ಪತ್ರಕರ್ತರಿಗೆ ಬಿಜೆಪಿಯಿಂದ ಲಂಚ: ದೂರು ದಾಖಲು

ಭಾನುವಾರ, ಮೇ 26, 2019
29 °C
ಕಾಶ್ಮೀರದ ಲೇಹ್‌ನಲ್ಲಿ ಪ್ರಕರಣ: ಮುಖಂಡರ ವಿರುದ್ಧ ದೂರು ದಾಖಲು

ಪತ್ರಕರ್ತರಿಗೆ ಬಿಜೆಪಿಯಿಂದ ಲಂಚ: ದೂರು ದಾಖಲು

Published:
Updated:

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲೇಹ್‌ನಲ್ಲಿ ಪತ್ರಕರ್ತರಿಗೆ ಲಕೋಟೆಯಲ್ಲಿ ₹500ರ ನೋಟುಗಳನ್ನು ಹಾಕಿಕೊಡಲಾಗಿದೆ ಎಂಬ ಆರೋಪ‍ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇಲ್ಲಿನ ಲೋಕಸಭಾ ಕ್ಷೇತ್ರದ ಮತದಾನಕ್ಕೆ ಮೊದಲು ಬಿಜೆಪಿ ಪರವಾದ ವರದಿಗಳನ್ನು ಪ್ರಕಟಿಸಲು ಈ ಹಣ ನೀಡಲಾಗಿದೆ ಎಂದು ಕೆಲವು ಪತ್ರಕರ್ತರು ಆರೋಪಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಲಕೋಟೆಗಳನ್ನು ಹಂಚಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಈ ಲಕೋಟೆ ಹಂಚಿದ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀಂದರ್‌ ರೈನಾ ಅವರೂ ಇದ್ದರು ಎಂದು ಪತ್ರಕರ್ತೆ ರಿಂಚೆನ್‌ ಆಂಗ್ಮೊ ಆರೋಪಿಸಿದ್ದಾರೆ. 

‘ಲಕೋಟೆಯಲ್ಲಿ ಏನು ಎಂದು ಪ್ರಶ್ನಿಸಿದಾಗ, ‘ಈಗ ತೆರೆಯಬೇಡಿ, ಅದು ನಮ್ಮ ಪ್ರೀತಿಯ ಸಂಕೇತ’ ಎಂದರು. ನಾನು ಪರಿಶೀಲಿಸಿದಾಗ ಲಕೋಟೆಯೊಳಗೆ ₹500ರ ಹಲವು ನೋಟುಗಳಿದ್ದವು. ಲಕೋಟೆಯನ್ನು ನಾನು ಹಿಂದಿರುಗಿಸಿದೆ. ಆದರೆ, ಅದನ್ನು ಪಡೆಯಲು ಅವರು ನಿರಾಕರಿಸಿದರು. ಅದನ್ನು ಮೇಜಿನ ಮೇಲೆ ಇಟ್ಟು ಬಂದೆ’ ಎಂದು ರಿಂಚೆನ್‌ ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ. 

ಪತ್ರಕರ್ತರಿಗೆ ಲಂಚ ನೀಡಿದ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಒಮರ್‌ ಅಬ್ದುಲ್ಲಾ ಬುಧವಾರ ಒತ್ತಾಯಿಸಿದ್ದಾರೆ.

ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯಗಳ ಆಧಾರದಲ್ಲಿ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒಮರ್‌ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ. 

ಲೇಹ್‌ ಪ್ರೆಸ್‌ ಕ್ಲಬ್‌ನ ಏಳು ಮಂದಿ ಪತ್ರಕರ್ತರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ರೈನಾ ಮತ್ತು ಬಿಜೆಪಿಯ
ಇನ್ನೊಬ್ಬ ಮುಖಂಡ ವಿಕ್ರಮ್‌ ರಾಂಧವ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಲಂಚ ನೀಡಿದ ಆರೋಪದಲ್ಲಿ ದೂರು ದಾಖಲಿಸಿಕೊಳ್ಳಬೇಕು ಎಂದು ಈ ಪತ್ರಕರ್ತರು ಒತ್ತಾಯಿಸಿದ್ದಾರೆ. 

ಲಡಾಕ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಲಂಚ ನೀಡಿದ ಆರೋಪದ ಎರಡನೇ ಪ್ರಕರಣ ಇದು. 

ನುಬ್ರಾ ಪ್ರದೇಶದಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಹಣ ಹಂಚಲಾಗಿದೆ ಎಂಬ ಬಗ್ಗೆ ಮೇ 3ರಂದು ಪೊಲೀಸರು ದೂರು ದಾಖಲಿಸಿದ್ದಾರೆ. 

ಪಕ್ಷದ ಸಮಿತಿಯಿಂದ ತನಿಖೆ

ಪತ್ರಕರ್ತರಿಗೆ ಲಂಚ ನೀಡಿದ ಆರೋಪದ ಬಗ್ಗೆ ತನಿಖೆ ನಡೆಸಲು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕವು ಸಮಿತಿಯೊಂದನ್ನು ರಚಿಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವೀಂದರ್‌ ರೈನಾ ಹೇಳಿದ್ದಾರೆ. 

ಪತ್ರಕರ್ತರಿಗೆ ನೀಡಿದ ಲಕೋಟೆಯಲ್ಲಿ ಆಹ್ವಾನ ಪತ್ರಿಕೆಗಳಷ್ಟೇ ಇದ್ದವು. ಅದರಲ್ಲಿ ಹಣ ಇರಲಿಲ್ಲ ಎಂದು ಪ್ರಕರಣದಲ್ಲಿ ಹೆಸರಿಸಲಾದ ಶಾಸಕರೊಬ್ಬರು ಹೇಳಿದ್ದಾರೆ. 

ಲಂಚದ ಪ್ರಕರಣದಲ್ಲಿ ತಮ್ಮ ಹೆಸರು ಉಲ್ಲೇಖಿಸಿರುವ ಲೇಹ್‌ ಪ್ರೆಸ್‌ ಕ್ಲಬ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ರೈನಾ ಹೇಳಿದ್ದಾರೆ.

***

ಪತ್ರಕರ್ತರಿಗೆ ಲಂಚ ನೀಡುವ ದೃಶ್ಯಗಳು ಬಯಲಾಗಿವೆ. ಲಂಚ ನಿರಾಕರಿಸಿದ ಪತ್ರಕರ್ತರು ಪ್ರಾಮಾಣಿಕತೆ ಮತ್ತು ಬದ್ಧತೆಯಲ್ಲಿ ತಮ್ಮ ಸಹೋದ್ಯೋಗಿಗಳಿಗೆ ಮಾದರಿಯಾಗಿದ್ದಾರೆ. ಅವರಿಗೆ ನಮನಗಳು

-ಒಮರ್‌ ಅಬ್ದುಲ್ಲಾ, ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ

ಲೇಹ್‌ನ ಪತ್ರಕರ್ತರು ಮಾಡಿರುವ ಆರೋಪ ಆಧಾರರಹಿತ. ಕಾಶ್ಮೀರದಲ್ಲಿರುವ ಬಿಜೆಪಿ ವಿರೋಧಿ ಶಕ್ತಿಗಳು ಮತ್ತು ಕಾಂಗ್ರೆಸ್‌ ಈ ಆರೋಪದ ಹಿಂದಿವೆ. ಇದು ಪಕ್ಷಕ್ಕೆ ಮಸಿ ಬಳಿಯುವ ಯತ್ನ

-ವಿಕ್ರಮ್‌ ರಾಂಧವ, ಬಿಜೆಪಿ ಮುಖಂಡ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !