ಮಂಗಳವಾರ, ಆಗಸ್ಟ್ 20, 2019
25 °C

ಲೋಕಸಭಾ ಚುನಾವಣೆ: ಬಿಜೆಪಿ 184 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

Published:
Updated:

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಗುರುವಾರ ಬಿಡುಗಡೆ ಮಾಡಿದೆ. ಏಪ್ರಿಲ್‌ 1ರಿಂದ ಮೇ 19ರ ವರೆಗೂ ಚುನಾವಣೆ ನಿಗದಿಯಾಗಿದ್ದು, ಮೇ 23ರಂದು ಮತಎಣಿಕೆ ಕಾರ್ಯ ನಡೆಯಲಿದೆ. 

ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಛತ್ತೀಸ್‌ಗಢ, ಒಡಿಶಾ, ಜಾರ್ಖಂಡ್‌ ಸೇರಿದಂತೆ 20 ರಾಜ್ಯಗಳ ಒಟ್ಟು 184 ಅಭ್ಯರ್ಥಿಗಳ ಹೆಸರನ್ನು ಮೊದಲ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಾರಣಸಿ ಲೋಕಸಭಾ ಕ್ಷೇತ್ರದಿಂದ, ಗಾಂಧಿನಗರದಿಂದ ಅಮಿತ್‌ ಶಾ, ರಾಜನಾಥ ಸಿಂಗ್‌ ಅವರು ಲಖನೌದಿಂದ, ನಾಗ್ಪುರದಿಂದ ನಿತಿನ್‌ ಗಡ್ಕರಿ ಸ್ಪರ್ಧಿಸಲಿದ್ದಾರೆ. 

ಇದನ್ನೂ ಓದಿ: ಬಿಜೆಪಿ ಮೊದಲ ಪಟ್ಟಿ ಪ್ರಕಟ: ಹಾಸನದಿಂದ ಎ.ಮಂಜು, ಚಿಕ್ಕಮಗಳೂರಿನಿಂದ ಶೋಭಾ ಸ್ಪರ್ಧೆ

1st PRESS RELEASE of Lok Sabha Election 2019 on 21.03.2019 by Hemanth Kumar S on Scribd

ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸರಣಿ ಸಭೆಗಳ ಬಳಿಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಗೃಹ ಸಚಿವ ರಾಜನಾಥ ಸಿಂಗ್‌, ವಿತ್ತ ಸಚಿವ ಅರುಣ್‌ ಜೇಟ್ಲಿ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ಪಕ್ಷದ ಇತರೆ ಪ್ರಮುಖರು ಸಭೆ ನಡೆಸಿದ್ದರು. 

ಗೆಲ್ಲುವ ಅಭ್ಯರ್ಥಿಗಳನ್ನೇ ಗುರುತಿಸಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದರು. ಬಿಜೆಪಿ ಚುನಾವಣಾ ಸಮಿತಿಯು ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಶುಕ್ರವಾರ ಮತ್ತೊಂದು ಸಭೆ ನಡೆಸಲಿದೆ. 

ಗುರುವಾರ ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂನ ಒಟ್ಟು 17 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಅರುಣಾಚಲ ಪ್ರದೇಶದಿಂದ 6 ಹಾಗೂ ಸಿಕ್ಕಿಂನಿಂದ 11 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು. 

Post Comments (+)