ನೀರಿನ ಸಮಸ್ಯೆ ಹೇಳಲು ಹೋದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಗುಜರಾತಿನ ಬಿಜೆಪಿ ಶಾಸಕ!

ಗುರುವಾರ , ಜೂನ್ 20, 2019
27 °C

ನೀರಿನ ಸಮಸ್ಯೆ ಹೇಳಲು ಹೋದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಗುಜರಾತಿನ ಬಿಜೆಪಿ ಶಾಸಕ!

Published:
Updated:

ನವದೆಹಲಿ: ಗುಜರಾತಿನ ನರೋದ ಚುನಾವಣಾ ಕ್ಷೇತ್ರದ ಬಿಜೆಪಿ ಶಾಸಕ ಬಲರಾಂ ಥವಾನಿ ಮಹಿಳೆಯೊಬ್ಬರಿಗೆ ಥಳಿಸಿ, ಕಾಲಿನಿಂದ ಒದೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಶಾಸಕನಿಂದ ದೌರ್ಜನ್ಯಕ್ಕೊಳಾದ ಮಹಿಳೆ ಎನ್‌ಸಿಪಿ ಬೆಂಬಲಿಗಳಾದ ನೀತೂ ತೇಜ್‌ವನಿ. ಅಹ್ಮದಾಬಾದ್‌ನ ನರೋದಾದಲ್ಲಿ ನೀರಿನ ಪೂರೈಕೆ ಸರಿಯಾಗಿ ನಡೆಯುತ್ತಿಲ್ಲ ಎಂದು ಭಾನುವಾರ ನಡೆದ ಪ್ರತಿಭಟನೆಯಲ್ಲಿ ಈಕೆ ಭಾಗಿಯಾಗಿದ್ದರು.

 ಘಟನೆ ಬಗ್ಗೆ  ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ನೀತೂ  'ನಮ್ಮ ಪ್ರದೇಶದಲ್ಲಿ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ.ಈ ಬಗ್ಗೆ ಚರ್ಚಿಸಲು ಬಲರಾಂ ಬಳಿ ಹೋಗಿದ್ದೆ, ಆದರೆ ಏನೂ ಮಾತನಾಡದೆ ಆತ ಬಂದು ನನ್ನ ಕೆನ್ನೆಗೆ ಬಾರಿಸಿ ಹೊಡೆಯಲು ತೊಡಗಿದ. ಇದನ್ನು ನೋಡಿ ನನ್ನ ಗಂಡ ನನ್ನನ್ನು ರಕ್ಷಿಸಲು ಓಡಿ ಬಂದರು. ಆಗ ಬಲರಾಂ ಅವರ ಬೆಂಬಲಿಗರು ಬಂದು ನನ್ನ ಮೇಲೆ ಮತ್ತು ಗಂಡನ ಮೇಲೆ ಬಡಿಗೆಯಿಂದ ಹೊಡೆದು ಹಲ್ಲೆ ನಡೆಸಿದರು. ನನ್ನೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳೆಯರ ಮೇಲೆ ಬಲರಾಂ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಬಿಜೆಪಿ ಆಡಳಿತದಲ್ಲಿ ಮಹಿಳೆಯರು ಹೇಗೆ ಸುರಕ್ಷಿತರಾಗಿರಲಿ ಎಂದು ನಾನು ಮೋದಿಯವರಲ್ಲಿ ಕೇಳುತ್ತಿದ್ದೇನೆ' ಎಂದಿದ್ದಾರೆ.

ಈ ಘಟನೆ ಬಗ್ಗೆ ಬಲರಾಂ ಥೆವಾನಿ ಕ್ಷಮೆಯಾಚಿಸಿದ್ದು, ನಾನು ಉದ್ದೇಶಪೂರ್ವಕ ಈ ಕೃತ್ಯವೆಸಗಿಲ್ಲ ಎಂದಿದ್ದಾರೆ.

ನನ್ನ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಾಗಲಿಲ್ಲ. ನಾನು ನನ್ನ ತಪ್ಪು ಒಪ್ಪಿಕೊಳ್ಳುತ್ತೇನೆ. ಅದು ಉದ್ದೇಶಪೂರ್ವಕ ಆಗಿರಲಿಲ್ಲ. ನಾನು ಕಳೆದ  22 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಈ ರೀತಿಯ ಘಟನೆ ಈ ಹಿಂದೆ ಎಂದೂ ಆಗಿರಲಿಲ್ಲ. ನಾನು ಆಕೆಯಲ್ಲಿ ಕ್ಷಮೆ ಕೇಳುತ್ತಿದ್ದೇನೆ ಎಂದು ಥೆವಾನಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಕೆಲವು ದಿನಗಳ ಹಿಂದೆ ಹರ್ಯಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಬೆಲ್ಟ್‌ನಿಂದ ಮಹಿಳೆಗೆ ಹೊಡೆಯುತ್ತಿರುವ ವಿಡಿಯೊ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಐವರು  ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಮಧ್ಯಪ್ರದೇಶದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯನ್ನು ಎಳೆದಾಡುತ್ತಿರುವ ವಿಡಿಯೊ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.
 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 8

  Angry

Comments:

0 comments

Write the first review for this !