ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಕೈತಪ್ಪಿದ ದೊಡ್ಡ ರಾಜ್ಯಗಳು

Last Updated 29 ನವೆಂಬರ್ 2019, 1:32 IST
ಅಕ್ಷರ ಗಾತ್ರ

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯ ಗೆಲವು, ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲೂ ಮುಂದುವರಿದಿತ್ತು. ಕೆಲವು ರಾಜ್ಯಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸಿತು. ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜತೆಗೂಡಿ ಮೈತ್ರಿ ಸರ್ಕಾರ ರಚಿಸಿತು. ಆದರೆ 2018ರ ನಂತರ ದೇಶದ ದೊಡ್ಡ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿಯ ಸೋಲುಕಂಡಿತು. ಹಿಂದಿಭಾಷಾ ರಾಜ್ಯಗಳಲ್ಲಿ ಹಲವು ಈಗ ಬಿಜೆಪಿಯ ಕೈತಪ್ಪಿವೆ

2014ರಲ್ಲಿ ಬಿಜೆಪಿ ಗೆಲುವು ಆರಂಭ

5 ಬಿಜೆಪಿ ಸರ್ಕಾರದ ರಾಜ್ಯಗಳು

3 ಪ್ರಾದೇಶಿಕ ಪಕ್ಷಗಳ ಜತೆ ಬಿಜೆಪಿಯ ಮೈತ್ರಿ ಸರ್ಕಾರ

ಐದು ರಾಜ್ಯಗಳಲ್ಲಷ್ಟೇ ಸ್ವತಂತ್ರ ಸರ್ಕಾರ ಹೊಂದಿದ್ದ ಬಿಜೆಪಿ, 2014ರ ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿತು. ಪಂಜಾಬ್, ನಾಗಾಲ್ಯಾಂಡ್‌ ಮತ್ತು ಆಂಧ್ರಪ್ರದೇಶದ ಮೈತ್ರಿ ಸರ್ಕಾರಗಳಲ್ಲಿ ಎರಡನೇ ಪಕ್ಷವಾಗಿತ್ತು. ಆದರೆ ಲೋಕಸಭೆ ಚುನಾವಣೆಯ ಗೆಲುವಿನ ನಂತರ ಬೇರೆ–ಬೇರೆ ರಾಜ್ಯಗಳಲ್ಲಿ ಮೈತ್ರಿ ಸರ್ಕಾರ ರಚನೆಗೆ ಮುಂದಾಯಿತು.

2015ರಲ್ಲಿ ಮುಂದವರಿದ ಬಿಜೆಪಿ ಗೆಲುವು

7 ಬಿಜೆಪಿ ಸರ್ಕಾರದ ರಾಜ್ಯಗಳು

5ಪ್ರಾದೇಶಿಕ ಪಕ್ಷಗಳ ಜತೆ ಬಿಜೆಪಿಯ ಮೈತ್ರಿ ಸರ್ಕಾರ

2015ರಲ್ಲಿ ನಡೆದ ಚುನಾವಣೆಗಳಲ್ಲಿ ಜಾರ್ಖಂಡ್ ಮತ್ತು ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸಿತು.ಮಹಾರಾಷ್ಟ್ರದಲ್ಲಿ ಶಿವಸೇನಾ ಜತೆಗೆ ಚುನಾವಣೋತ್ತರ ಮೈತ್ರಿಮಾಡಿಕೊಂಡು ಸರ್ಕಾರ ರಚಿಸಿತು. ದೇಶದಲ್ಲಿ ಬಿಜೆಪಿಯ ಪ್ರತ್ಯಕ್ಷ ಮತ್ತು ಪರೋಕ್ಷ ಆಡಳಿತವಿರುವ ಪ್ರದೇಶದ ವ್ಯಾಪ್ತಿ ಹಿಗ್ಗಿತು.

ಆದರೆ, ದೆಹಲಿ ಚುನಾವಣೆಯಲ್ಲಿ ಹೀನಾಯ ಸೋಲುಕಂಡಿತ್ತು.ಬಿಹಾರದಲ್ಲಿ ಆರ್‌ಜೆಡಿ–ಜೆಡಿಯು–ಕಾಂಗ್ರೆಸ್‌ನ ಮಹಾಮೈತ್ರಿ ಎದುರು ಬಿಜೆಪಿ ಸೋಲುಕಂಡಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜತೆ ಸರ್ಕಾರ ರಚಿಸಿತು.

2016ರಲ್ಲಿ ಹಿಗ್ಗಿದ ಬಿಜೆಪಿ ಆಡಳಿತ ಪ್ರದೇಶ

8 ಬಿಜೆಪಿ ಸರ್ಕಾರದ ರಾಜ್ಯಗಳು

6ಪ್ರಾದೇಶಿಕ ಪಕ್ಷಗಳ ಜತೆ ಬಿಜೆಪಿಯ ಮೈತ್ರಿ ಸರ್ಕಾರ

2016ರಲ್ಲಿ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಸ್ವತಂತ್ರವಾಗಿ ಮತ್ತು ಅಸ್ಸಾಂನಲ್ಲಿ ಪ್ರಾದೇಶಿಕ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತು. ಬಿಜೆಪಿ ಆಡಳಿತ ಪ್ರದೇಶಗಳ ವ್ಯಾಪ್ತಿ ಮತ್ತಷ್ಟು ಹಿಗ್ಗಿತು.

2017: ಅಧಿಕಾರದ ಉತ್ತುಂಗದಲ್ಲಿ ಬಿಜೆಪಿ

10 ಬಿಜೆಪಿ ಸರ್ಕಾರದ ರಾಜ್ಯಗಳು

8 ಪ್ರಾದೇಶಿಕ ಪಕ್ಷಗಳ ಜತೆ ಬಿಜೆಪಿಯ ಮೈತ್ರಿ ಸರ್ಕಾರ

ಬಿಜೆಪಿ ಆಡಳಿತವಿರುವ ಪ್ರದೇಶದ ವ್ಯಾಪ್ತಿ ಗರಿಷ್ಠಮಟ್ಟ ತಲುಪಿದ ವರ್ಷವಿದು. ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಸರ್ಕಾರ ರಚಿಸಿತು. 2017, ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸಿದ್ದ ರಾಜ್ಯಗಳ ಸಂಖ್ಯೆ ಗರಿಷ್ಠಮಟ್ಟದಲ್ಲಿದ್ದ ವರ್ಷವೂ ಹೌದು.

ಮಣಿಪುರ ಮತ್ತು ಗೋವಾ ಚುನಾವಣೆಗಳಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮದಿದ್ದರೂ, ಪ್ರಾದೇಶಿಕ ಪಕ್ಷಗಳು ಮತ್ತು ಪಕ್ಷೇತರರನ್ನು ಸೆಳೆದುಕೊಂಡು ಬಿಜೆಪಿ ಸರ್ಕಾರ ರಚಿಸಿತು. ಅತಿ ಹೆಚ್ಚು ಸ್ಥಾನ ಪಡೆದ ಕಾಂಗ್ರೆಸ್‌ ಪಕ್ಷಕ್ಕೆ ಈ ಮೂಲಕ ಹಿನ್ನಡೆಯಾಯಿತು. ಅಲ್ಲದೆ ಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದರು.

ಬಿಹಾರದಲ್ಲಿ ಮಹಾಮೈತ್ರಿಕೂಟದಿಂದ ಜೆಡಿಯು ಹೊರಬಂತು. ಹೀಗಾಗಿ ಅಲ್ಲಿದ್ದ ಬಿಜೆಪಿಯೇತರ ಸರ್ಕಾರ ಉರುಳಿತು. ತಕ್ಷಣವೇ ಜೆಡಿಯು–ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಯಿತು.

2018: ಬಿಜೆಪಿಗೆ ಸರಣಿ ಸೋಲು

8ಬಿಜೆಪಿ ಸರ್ಕಾರದ ರಾಜ್ಯಗಳು

7ಪ್ರಾದೇಶಿಕ ಪಕ್ಷಗಳ ಜತೆ ಬಿಜೆಪಿಯ ಮೈತ್ರಿ ಸರ್ಕಾರ

2018ರಲ್ಲಿ9 ರಾಜ್ಯಗಳಲ್ಲಿ ನಡೆದ ಚುನಾವಣೆಯು ಬಿಜೆಪಿಗೆ ದೊಡ್ಡ ಹೊಡೆತ ನೀಡಿತು. ಇಷ್ಟೂ ರಾಜ್ಯಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸಿದ್ದು ತ್ರಿಪುರಾದಲ್ಲಿ ಮಾತ್ರ. ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಪ್ರಧಾನ ಪಕ್ಷವಾಗಿ, ಬಿಜೆಪಿ ದ್ವಿತೀಯ ಪಕ್ಷವಾಗಿರುವ ಮೈತ್ರಿ ಸರ್ಕಾರ ರಚನೆಯಾಯಿತು. ಮೇಘಾಲಯದಲ್ಲಿ ಎನ್‌ಡಿಎ ಸರ್ಕಾರ ರಚಿಸಿತು.

ಹಿಂದಿಭಾಷಿಕ ರಾಜ್ಯಗಳಾದ ಮತ್ತು ಬಿಜೆಪಿ ನೆಲೆ ಎನಿಸಿದ್ದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಬಿಜೆಪಿ ಸೋಲುಕಂಡಿತು. ಕಾಂಗ್ರೆಸ್‌ ಸರ್ಕಾರ ರಚಿಸಿತು. ಆಂಧ್ರಪ್ರದೇಶದಲ್ಲಿ ಪೂರ್ಣಬಹುಮತ ಹೊಂದಿದ್ದ ಟಿಡಿಪಿ, ಎನ್‌ಡಿಎಯಿಂದ ಹೊರಬಂದಿತು. ಹೀಗಾಗಿ ಆಂಧ್ರಪ್ರದೇಶ ಸರ್ಕಾರದಿಂದ ಬಿಜೆಪಿ ಹೊರಬರಬೇಕಾಯಿತು.

ಜಮ್ಮು–ಕಾಶ್ಮೀರದಲ್ಲಿ ಪಿಡಿಪಿ ಜತೆಗೆ ಬಿಜೆಪಿ ಮೈತ್ರಿ ಅಂತ್ಯ. ಸರ್ಕಾರ ಪತನ. ರಾಷ್ಟ್ರಪತಿ ಆಳ್ವಿಕೆ ಜಾರಿ.

2019: ಕೈಗೂಡದ ಬಿಜೆಪಿ ಲೆಕ್ಕಾಚಾರ

9 ಬಿಜೆಪಿ ಸರ್ಕಾರದ ರಾಜ್ಯಗಳು

6ಪ್ರಾದೇಶಿಕ ಪಕ್ಷಗಳ ಜತೆ ಬಿಜೆಪಿಯ ಮೈತ್ರಿ ಸರ್ಕಾರ

2019ರಲ್ಲಿ ಕರ್ನಾಟಕದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರ ಪತನ. ಬಿಜೆಪಿ ಸರ್ಕಾರ ರಚನೆ.

ಹರಿಯಾಣದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತು. ಮಹಾರಾಷ್ಟ್ರದಲ್ಲಿ ಬಿಜೆಪಿ–ಶಿವಸೇನಾ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದವು. ಬಹುಮತ ಪಡೆದವು. ಆದರೆ ಸರ್ಕಾರ ರಚನೆ ಪ್ರಯತ್ನ ವಿಫಲವಾಯಿತು. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸ್ಥಾನ ಪಡೆದ ಪಕ್ಷವಾದರೂ, ಬಿಜೆಪಿ ಅಧಿಕಾರದಿಂದ ಹೊರಗೆ ಉಳಿದಿದೆ. ದೇಶದ ಮತ್ತೊಂದು ದೊಡ್ಡ ರಾಜ್ಯದ ಆಡಳಿತವು ಬಿಜೆಪಿಯ ಕೈತಪ್ಪಿದೆ.

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಗೆದ್ದಿಲ್ಲ. ಇದ್ದ ಒಂದು ಸ್ಥಾನವನ್ನು ಕಳೆದುಕೊಂಡಿತು.

ಡಿಸೆಂಬರ್‌ 4 ರಂದು ಜಾರ್ಖಂಡ್‌ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಇಲ್ಲಿ ಬಿಜೆಪಿ ತನ್ನ ಅಧಿಕಾರ ಉಳಿಸಿಕೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಆಧಾರ: ಚುನಾವಣಾ ಆಯೋಗ, ಆಯಾ ರಾಜ್ಯಗಳ ಅಧಿಕೃತ ಜಾಲತಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT