ಸೋಮವಾರ, ನವೆಂಬರ್ 18, 2019
23 °C

ಗಡಿಯಲ್ಲಿ ಗುಂಡಿನ ದಾಳಿ ಬಿಎಸ್ಎಫ್‌ ಯೋಧ ಸಾವು

Published:
Updated:

ಕೋಲ್ಕತ್ತ/ನವದೆಹಲಿ: ಪಶ್ಚಿಮ ಬಂಗಾಳದ ಗಡಿಯಲ್ಲಿ ಬಾಂಗ್ಲಾದೇಶದ ಗಡಿ ಭದ್ರತಾ ಪಡೆ (ಬಿಜಿಬಿ) ಸಿಬ್ಬಂದಿ ಹಾರಿಸಿದ ಗುಂಡಿಗೆ ಬಿಎಸ್‌ಎಫ್‌ ಯೋಧರೊಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ.

ಗಡಿಯಲ್ಲಿ ಉಭಯ ರಾಷ್ಟ್ರಗಳ ನಡುವಣ ಸೌಹಾರ್ದ ವಾತಾವರಣ ಇದ್ದು, ಕಳೆದ ಒಂದು ದಶಕದಲ್ಲಿ ನಡೆದಿರುವ ಮೊದಲ ಪ್ರಕರಣ ಇದು. ಮುರ್ಷಿರಾಬಾದ್‌ ಜಿಲ್ಲೆಯ ಬಿಎಸ್‌ಎಫ್‌ ಪಡೆಯ ಉಪಠಾಣೆಯ ಬಳಿ ಉಭಯ ದೇಶಗಳ ಭದ್ರತಾ ಪಡೆಗಳ ನಡುವೆ ನಡೆಯುತ್ತಿದ್ದ ಧ್ವಜ ಸಭೆ ಸಂದರ್ಭದಲ್ಲಿಯೇ ಈ ಅವಘಡ ನಡೆದಿದೆ.

ಬಿಎಸ್ಎಫ್‌ ಮೂಲಗಳ ಅನುಸಾರ, ಗಡಿಭಾಗದಲ್ಲಿ ಪದ್ಮ ನದಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಮೂವರು ಮೀನುಗಾರರನ್ನು ಬಿಜಿಬಿ ವಶಕ್ಕೆ ಪಡೆದಿತ್ತು. ಈ ಮೀನುಗಾರರಿಗೆ ಬಿಎಸ್‌ಎಫ್‌ ಅನುಮತಿ ನೀಡಿತ್ತು. 

ಆಗ ಬಿಜಿಬಿ ಅಧಿಕಾರಿಗಳು, ವಿವಾದ ಬಗೆಹರಿಸಿಕೊಳ್ಳಲು ‘ಧ್ವಜ ಸಭೆ’ಗೆ ಬಿಎಸ್‌ಎಫ್‌ ಅಧಿಕಾರಿಗಳನ್ನು ತರೆತರುವಂತೆ ಇಬ್ಬರು ಮೀನುಗಾರರಿಗೆ ತಿಳಿಸಿದರು. ಬಿಜಿಬಿ ತಂಡದ ಭೇಟಿಗೆ ಬಿಎಸ್‌ಎಫ್‌ ಸಿಬ್ಬಂದಿ ಮತ್ತು ಮೀನುಗಾರರು ದೋಣಿಯಲ್ಲಿ ತೆರಳಿದರು.

ಸಭೆಯಲ್ಲಿ ಮೀನುಗಾರರನ್ನು ಬಿಡುಗಡೆ ಮಾಡಲು ನಿರಾಕರಿಸಿದ ಬಿಜಿಬಿ ಅಧಿಕಾರಿಗಳು, ಬಿಎಸ್‌ಎಫ್‌ ಸಿಬ್ಬಂದಿ ಜತೆಗೂ ಅನುಚಿತವಾಗಿ ವರ್ತಿಸಿದರು. ಈ ಹಂತದಲ್ಲಿ ಬಿಜಿಬಿ ಯೋಧನೊಬ್ಬ ಗುಂಡು ಹಾರಿಸಿದ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)