ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಸ್ಥಿತಿಗೆ ಈಶಾನ್ಯ: ನಿಷೇಧ ಸಡಿಲು

ಪೌರತ್ವ (ತಿದ್ದುಪಡಿ) ಕಾಯ್ದೆ: ಮೇಘಾಲಯದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆ ಸ್ಥಗಿತ
Last Updated 15 ಡಿಸೆಂಬರ್ 2019, 19:59 IST
ಅಕ್ಷರ ಗಾತ್ರ

ಶಿಲ್ಲಾಂಗ್‌/ಗುವಾಹಟಿ : ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಅಸ್ಸಾಂನಲ್ಲಿ ನಡೆಯುತ್ತಿದ್ದ ಹಿಂಸಾಚಾರ ನಿಯಂತ್ರಣಕ್ಕೆ ಬಂದಿದ್ದರೂ ಭಾನುವಾರ ಬಿಗುವಿನ ವಾತಾವರಣ ಕಂಡುಬಂದಿದೆ.

ಗುವಾಹಟಿಯ ಪ್ರಮುಖ ರಸ್ತೆಗಳಲ್ಲಿ ಸೇನಾಪಡೆ ನಿಯೋಜನೆಗೊಂಡಿದೆ. ಇದರ ಮಧ್ಯೆಯೂ ನಗರದಲ್ಲಿ 5,000 ಮಂದಿ ಮೆರವಣಿಗೆ ನಡೆಸಿದ್ದಾರೆ. ಪ್ರತಿಭಟನಕಾರರು ‘ಅಸ್ಸಾಂ ದೀರ್ಘಾಯುವಾಗಲಿ’ ಎಂಬ ಬ್ಯಾನರ್‌ ಹಿಡಿದು ಘೋಷಣೆಗಳನ್ನು ಕೂಗಿದರು.

ಅಸ್ಸಾಂ ಮತ್ತು ಮೇಘಾಲಯದ ಕೆಲವು ಜಿಲ್ಲೆಗಳಲ್ಲಿ ಜಾರಿ ಮಾಡಿದ್ದ ಕರ್ಫ್ಯೂ ಸಡಿಲಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ರಾತ್ರಿ ವೇಳೆಯಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಮೇಘಾಲಯದಲ್ಲಿ ಶನಿವಾರ ಸಂಜೆ 5 ಗಂಟೆಯಿಂದ ಜಾರಿಯಾಗುವಂತೆ 48 ಗಂಟೆಗಳ ಅವಧಿಗೆ ಎಸ್‌ಎಂಎಸ್‌ ಹಾಗೂ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ನಿಷೇಧಾಜ್ಞೆ ತೆರವಾಗಿದ್ದರೂ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ರಾಜ್ಯದಲ್ಲಿ ಇನ್ನರ್‌ಲೈನ್‌ ಪರ್ಮಿಟ್‌ (ಐಎಲ್‌ಪಿ) ಜಾರಿಮಾಡುವ ನಿರ್ಣಯದ ಅಂಗೀಕಾರಕ್ಕಾಗಿ ಡಿ.19ರಂದು ಮೇಘಾಲಯ ಸರ್ಕಾರವು ಒಂದು ದಿನದ ವಿಶೇಷ ಅಧಿವೇಶನವನ್ನು ಆಯೋಜಿಸಿದೆ.

ಹಿಂಸಾಚಾರದಿಂದಾಗಿ ಅಸ್ಸಾಂನಲ್ಲಿ ಸಿಲುಕಿಕೊಂಡಿರುವ ಪ್ರವಾಸಿಗರಿಗೆ ತಮ್ಮ ಊರಿಗೆ ಮರಳಲು ಅನುಕೂಲವಾಗುವಂತೆ ಅಸ್ಸಾಂ ಪ್ರವಾಸೋದ್ಯಮ ಇಲಾಖೆಯು ರೈಲ್ವೆ ಇಲಾಖೆಯ ನೆರವಿನೊಂದಿಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.

-ಈಶಾನ್ಯ ರಾಜ್ಯಗಳಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರಗಳಿಗೆ ಒಟ್ಟಾರೆ ಆರು ಮಂದಿ ಬಲಿಯಾಗಿದ್ದಾರೆ

-ಹಿಂಸಾಚಾರ ಮುಂದುವರಿದ ಕಾರಣಕ್ಕೆ ಪಶ್ಚಿಮ ಬಂಗಾಳದ ಐದು ಜಿಲ್ಲೆಗಳಲ್ಲಿ ಭಾನುವಾರ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ

-ಜಾಮಿಯಾ ಮಿಲಿಯಾ ವಿ.ವಿ. ಮುಂದೆ ಘರ್ಷಣೆ ನಡೆಯುತ್ತಿದ್ದಂತೆಯೇ ಕ್ಯಾಂಪಸ್‌ ಒಳಗೆ ಪ್ರವೇಶಿಸಿದ ಪೊಲೀಸರು, ಮುಖ್ಯದ್ವಾರವನ್ನು ಬಂದ್‌ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲದ, ಗಲಭೆಗೆ ಕಾರಣರಾದ ಕಿಡಿಗೇಡಿ
ಗಳ ಪತ್ತೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ

-ಪೊಲೀಸರು ಹಾಸ್ಟೆಲ್‌ ಮತ್ತು ಗ್ರಂಥಾಲಯದೊಳಗೂ ಪ್ರವೇಶಿಸಿ,
ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ

-ದೆಹಲಿ ಪೊಲೀಸರು ಸಂಬಂಧಪಟ್ಟವರ ಅನುಮತಿ ಪಡೆಯದೆಯೇ ವಿಶ್ವವಿದ್ಯಾಲಯದ ಆವರಣದೊಳಗೆ ಪ್ರವೇಶಿಸಿದ್ದಾರೆ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿ.ಯ ಮುಖ್ಯಾಧಿಕಾರಿ ವಾಸಿಂ ಅಹಮದ್‌ ಖಾನ್‌ ಹೇಳಿದ್ದಾರೆ

-ಪೊಲೀಸರ ಕ್ರಮವನ್ನು ಕುಲಪತಿ ನಜ್ಮಾ ಅಖ್ತರ್‌ ಖಂಡಿಸಿದ್ದಾರೆ

-ಕಾಯ್ದೆಯ ಬಗ್ಗೆ ಜನರಿಗೆ ಮಾಹಿತಿ ನೀಡುವ ಸಲುವಾಗಿ ರಾಷ್ಟ್ರವ್ಯಾಪಿಯಾದ ಆಂದೋಲನವನ್ನು ಆಯೋಜಿಸುವುದಾಗಿ ಬಿಜೆಪಿ ಹೇಳಿದೆ

****

‘ಹಿಂಸೆ ಹಿಂದೆ ಕಾಂಗ್ರೆಸ್‌’

ದುಮಕಾ (ಜಾರ್ಖಂಡ್‌): ‘ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಕಾಂಗ್ರೆಸ್‌ ಹಾಗೂ ಇತರ ವಿರೋಧಪಕ್ಷಗಳ ಕೈವಾಡವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

‘ಪೌರತ್ವ ಕಾಯ್ದೆಯ ಹೆಸರಿನಲ್ಲಿ ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳು ಬೆಂಕಿ ಹಚ್ಚುವ ಕೆಲಸ ಮಾಡುತ್ತಿವೆ. ಸಂಸತ್ತಿನಲ್ಲಿ ತೆಗೆದುಕೊಂಡ ತೀರ್ಮಾನವು ಸಾವಿರ ಪ್ರತಿಶತ ಸರಿಯಾಗಿದೆ ಎಂಬುದು ಕಾಂಗ್ರೆಸ್‌ನ ನಡೆಯಿಂದ ಸಾಬೀತಾದಂತಾಗಿದೆ’ ಎಂದು ಚುನಾವಣಾ ರ್‍ಯಾಲಿಯೊಂದರಲ್ಲಿ ಮಾತನಾಡುತ್ತಾ ಮೋದಿ ಹೇಳಿದರು.

‘ಏನು ನಡೆಯುತ್ತಿದೆ ಎಂಬುದನ್ನು ದೇಶದ ಜನರು ನೋಡುತ್ತಿದ್ದಾರೆ. ಈಶಾನ್ಯ ರಾಜ್ಯಗಳ ಜನರು ಹಿಂಸೆಯನ್ನು ತ್ಯಜಿಸಿದ್ದಾರೆ. ರೈಲು ನಿಲ್ದಾಣಗಳಿಗೆ ಬೆಂಕಿ ಹಚ್ಚಿದ್ದು ಯಾರು ಎಂಬುದನ್ನು ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ದೃಶ್ಯಗಳಿಂದ ತಿಳಿಯಬಹುದಾಗಿದೆ. ಮಸೂದೆ ಅಂಗೀಕಾರವಾದ ನಂತರ ಮೋದಿ ಮೇಲೆ ಜನರ ಭರವಸೆ ಇನ್ನಷ್ಟು ಗಟ್ಟಿಯಾಗಿದೆ ಎಂದು ಪ್ರಧಾನಿ ಹೇಳಿದರು.

****

ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ ಈ ದೇಶದ ಮುಸ್ಲಿಮರಿಗೆ ತೊಂದರೆಯಿಲ್ಲ. ಈ ಬಗ್ಗೆ ಮುಸ್ಲಿಮರು ಆತಂಕ ಪಡುವ ಅಗತ್ಯವಿಲ್ಲ -ಪ್ರಹ್ಲಾದ ಜೋಶಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

ಬಾಂಗ್ಲಾದಿಂದ ಬಂದವರು ಪಶ್ಚಿಮ ಬಂಗಾಳದಲ್ಲೇ ಇರುವಂತೆ ನಿಯಂತ್ರಿಸಬೇಕಿದೆ. ಮುಸ್ಲಿಮರನ್ನು ಹೊರಹಾಕಲಾಗುತ್ತಿದೆ ಎಂಬ ಆತಂಕ ಸರಿಯಲ್ಲ
-ವಿಶ್ವೇಶತೀರ್ಥ ಸ್ವಾಮೀಜಿ ಉಡುಪಿ ಪೇಜಾವರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT