ಗುರುವಾರ , ಡಿಸೆಂಬರ್ 12, 2019
17 °C
ಮೀಸಲಾತಿಯಿಂದ ಕೆನೆಪದರವನ್ನು ಹೊರಗಿಡುವ ವಿಚಾರ

ಮೀಸಲಾತಿ: ತೀರ್ಪು ಮರು ಪರಿಶೀಲನೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ, ಕೆನೆಪದರದಲ್ಲಿರುವ ವ್ಯಕ್ತಿಗಳನ್ನು ಮೀಸಲಾತಿಯಿಂದ ಹೊರಗಿಡುವ ವಿಚಾರವನ್ನು ಏಳು ಮಂದಿ ನ್ಯಾಯಮೂರ್ತಿಗಳ ಪೀಠಕ್ಕೆ ಒಪ್ಪಿಸಬೇಕು’ ಎಂದು ಕೇಂದ್ರ ಸರ್ಕಾರವು ಸುಪ್ರಿಂ ಕೋರ್ಟ್‌ಗೆ ಮನವಿ ಮಾಡಿದೆ.

2018ರಲ್ಲಿ ಜರ್ನೈಲ್‌ ಸಿಂಗ್‌ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಎಸ್‌ಸಿ, ಎಸ್‌ಟಿ ಸಮುದಾಯದ ಕೆನೆಪದರದಲ್ಲಿರುವವರನ್ನು ಮೀಸಲಾತಿಯಿಂದ ಹೊರ ಗಿಡಬಹುದು ಎಂದು ತೀರ್ಪು ನೀಡಿತ್ತು.

ಈ ತೀರ್ಪಿನ ಮರು ಪರಿಶೀಲನೆ ನಡೆಸಬೇಕು ಎಂದು ಸಮತಾ ಆಂದೋಲನ ಸಮಿತಿ ಹಾಗೂ ಇತರ ಕೆಲವು ಸರ್ಕಾರೇತರ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾ ರಣೆಯ ಸಂದರ್ಭದಲ್ಲಿ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು, ‘ಇದು ಭಾವನಾತ್ಮಕ ವಿಚಾರ. ಆದ್ದರಿಂದ ಏಳು ಮಂದಿ ನ್ಯಾಯಮೂರ್ತಿಗಳ ಪೀಠಕ್ಕೆ ಒಪ್ಪಿಸಬೇಕು’ ಎಂದು ಮನವಿ ಮಾಡಿದರು.

‘2018ರಲ್ಲೇ ಸುಪ್ರೀಂ ಕೋರ್ಟ್‌ ಈ ಕುರಿತು ತೀರ್ಪು ನೀಡಿರುವುದರಿಂದ ಈ ವಿಚಾರವನ್ನು ಮರು ಪರಿಶೀಲನೆ ನಡೆಸುವ ಅಗತ್ಯವಿಲ್ಲ’ ಎಂದು ಅರ್ಜಿದಾರರೊಬ್ಬರ ಪರ ಹಾಜರಾಗಿದ್ದ ಹಿರಿಯ ವಕೀಲ ಶಂಕರನಾರಾಯಣ ವಾದಿಸಿದರು.

‘ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರಗಳಾಗಲಿ ಎಸ್‌ಸಿ, ಎಸ್‌ಟಿ ಸಮು ದಾಯದ ಕೆನೆಪದರವನ್ನು ಗುರುತಿಸುವ ವಿಧಾನವನ್ನು ವಸ್ತುನಿಷ್ಠವಾಗಿ ಪರೀಕ್ಷೆಗೆ ಒಳಪಡಿಸಿಲ್ಲ. ಮೀಸಲಾತಿ ನೀಡುವ ವಿಚಾರದಲ್ಲಿ 1950ರಲ್ಲಿ ಹೊರಡಿಸಿದ್ದ ಆದೇಶದಲ್ಲಿ ಸಮುದಾಯಗಳ ಹೆಸರನ್ನು ಉಲ್ಲೇಖಿಸಿದೆಯೇ ವಿನಾ ಮೀಸಲಾತಿ ಪಡೆಯಲು ಅರ್ಹತೆಯನ್ನು ಉಲ್ಲೇಖಿಸಿಲ್ಲ.  ಇದರ ಪರಿಣಾಮ, ಕೆನೆಪದರದಲ್ಲಿರುವವರು ಎಲ್ಲಾ ಸೌಲಭ್ಯ ಗಳನ್ನು ಪಡೆದರು. ಹಿಂದುಳಿದವರು ಇನ್ನಷ್ಟು ಅಂಚಿಗೆ ತಳ್ಳಲ್ಪಟ್ಟರು. ಇದು ಸಂವಿಧಾನದಲ್ಲಿ ಹೇಳಿರುವ ‘ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶ’ದ ಉದ್ದೇಶವನ್ನೇ ವಿಫಲಗೊಳಿಸಿದೆ’ ಎಂದು ಇನ್ನೊಬ್ಬ ಅರ್ಜಿದಾರರಾದ ಒ.ಪಿ. ಶುಕ್ಲಾ ವಾದಿಸಿದರು.

ಎರಡು ವಾರಗಳ ಬಳಿಕ ಈ ಕುರಿತು ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಎಸ್‌.ಎ. ಬೊಬಡೆ, ಬಿ.ಆರ್‌. ಗವಾಯಿ ಹಾಗೂ ಸೂರ್ಯಕಾಂತ್‌ ಅವರನ್ನೊಳಗೊಂಡ ಪೀಠ ಒಪ್ಪಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು