ಬುಧವಾರ, ಜುಲೈ 28, 2021
21 °C

ಕೇಂದ್ರದ ಸೇವೆಗಳಿಗೆ ಅಧಿಕಾರಿಗಳ ನಿಯೋಜನೆ: ರಾಜ್ಯಗಳಿಗೆ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರದ ಸೇವೆಗಳಿಗೆ ಉಪ ಕಾರ್ಯದರ್ಶಿ, ನಿರ್ದೇಶಕರು ಮತ್ತು ಜಂಟಿ ಕಾರ್ಯದರ್ಶಿ ಮಟ್ಟದ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳನ್ನು ನಿಯೋಜಿಸಿ ಕಳುಹಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಅಧಿಕಾರಿಗಳ ವೃತ್ತಿಪರತೆ ಹಾಗೂ ಅನುಭವ ಹೆಚ್ಚಳಕ್ಕೆ ಇದು ಸಹಾಯವಾಗಲಿದೆ ಎಂದೂ ಹೇಳಿದೆ.

ಕೇಂದ್ರ ಸಿಬ್ಬಂದಿ ಯೋಜನೆಯಡಿ, ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ) ಅಡಿಯಲ್ಲಿ ಕಾರ್ಯನಿರ್ವಹಿಸುವ ಮುಖ್ಯ ವಿಚಕ್ಷಣಾ ಅಧಿಕಾರಿಗಳ ಹುದ್ದೆಗಳಿಗೆ ಕಳೆದ ವರ್ಷದ ನವೆಂಬರ್‌ನಲ್ಲಿ ಮಾಡಿದ ಕೋರಿಕೆ ಮೇರೆಗೆ ರಾಜ್ಯಗಳಿಂದ ಕನಿಷ್ಠ ನಾಮನಿರ್ದೇಶನ ಬಂದಿದ್ದರಿಂದ ಕೇಂದ್ರ ಸರ್ಕಾರ ಮತ್ತೊಮ್ಮೆ ಈ ಕ್ರಮಕ್ಕೆ ಮುಂದಾಗಿದೆ. 

‘ಇಲ್ಲಿಯವರೆಗೆ ಸ್ವೀಕರಿಸಿರುವ ನಾಮನಿರ್ದೇಶನಗಳ ಸಂಖ್ಯೆ ಬಹಳ ಕಡಿಮೆ ಇದೆ. ಕೇಂದ್ರ ಸಿಬ್ಬಂದಿ ಯೋಜನೆಯಡಿ, ವಿಶೇಷವಾಗಿ ಉಪ ಕಾರ್ಯದರ್ಶಿ, ನಿರ್ದೇಶಕರ ಮಟ್ಟದ ಅಧಿಕಾರಿಗಳ ಪ್ರಾತಿನಿಧ್ಯ ಸಹ ಕಡಿಮೆ ಇದೆ’ ಎಂದು ಸಿಬ್ಬಂದಿ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

‘ಕಡಿಮೆ ಸಂಖ್ಯೆಯ ಅಧಿಕಾರಿಗಳನ್ನು ಕೇಂದ್ರಕ್ಕೆ ನಿಯೋಜನೆ ಮಾಡಿದ್ದರಿಂದ ಉಪ ಕಾರ್ಯದರ್ಶಿ/ನಿರ್ದೇಶಕ ಮಟ್ಟದ ಕೇಡರ್‌ ನಿರ್ವಹಣೆಯಲ್ಲಿ ಭಾರಿ ಅಂತರ ಉಂಟಾಗಿದೆ’ ಎಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಕೇಂದ್ರದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳಿಗೆ ಕಳುಹಿಸಿರುವ ಆದೇಶದಲ್ಲಿ ಹೇಳಲಾಗಿದೆ. 

‘ಕೇಂದ್ರ ಸಿಬ್ಬಂದಿ ಯೋಜನೆಯಡಿ ನಿಯೋಜಿಸಲು ಹೆಚ್ಚಿನ ಸಂಖ್ಯೆಯ ಅಧಿಕಾರಿಗಳನ್ನು ಕಳುಹಿಸಬೇಕು. ಹಿರಿಯ ಶ್ರೇಣಿಗೆ ಬಡ್ತಿ ಪಡೆಯುವ ಅಂಚಿನಲ್ಲಿರುವ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಬಾರದು. ಬಡ್ತಿ ಪಡೆಯಲು ಈ ಅಧಿಕಾರಿಗಳು ವಾಪಸು ಬರುವುದು ಅಗತ್ಯವಿರುತ್ತದೆ. ಆದ್ದರಿಂದ ಪೂರ್ಣ ಅವಧಿಗೆ ಲಭ್ಯವಾಗುವ ಅಧಿಕಾರಿಗಳ ಹೆಸರನ್ನು ಶಿಫಾರಸು ಮಾಡಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು